Site icon Vistara News

Bhole Baba: ʼʼಏನಾಗಬೇಕೋ ಅದೇ ಆಗುತ್ತೆʼʼ- 121 ಜನರ ಸಾವಿಗೆ ಕಾರಣನಾದ ಭೋಲೆ ಬಾಬಾ ಉವಾಚ

Bhole Baba

Bhole Baba

ಲಖನೌ: “ಏನಾಗಬೇಕೋ ಅದು ನಡೆದೇ ನಡೆಯುತ್ತದೆ. ಅದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಈ ಜಗತ್ತಿಗೆ ಬಂದವನು ಅಂತಿಮವಾಗಿ ಹೊರಟು ಹೋಗಲೇಬೇಕು”- ಇದು ಸ್ವಯಂಫೋಷಿತ ದೇವ ಮಾನವ ಭೋಲೆ ಬಾಬಾ (Bhole Baba) ಎಂದೂ ಕರೆಯಲ್ಪಡುವ ಸೂರಜ್ ಪಾಲ್ ಅವರ ಉವಾಚ. ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ಜುಲೈ 2ರಂದು ಭೋಲೆ ಬಾಬಾ ಅವರ ಸತ್ಸಂಗದ ವೇಳೆ ನಡೆದ ಕಾಲ್ತುಳಿತದಲ್ಲಿ 121 ಜನರು ಮೃತಪಟ್ಟ ಸುಮಾರು ಎರಡು ವಾರಗಳ ನಂತರ ಅವರು ಈ ಹೇಳಿಕೆ ನೀಡಿದ್ದಾರೆ (Hathras Stampede).

ಈ ಘಟನೆಯ ಹಿಂದೆ ಷಡ್ಯಂತ್ರವಿದೆ ಎಂದು ಪುನರುಚ್ಚರಿಸದ್ದಾರೆ. ಉತ್ತರ ಪ್ರದೇಶದ ಕಾಸ್ಗಂಜ್‌ನಲ್ಲಿರುವ ತಮ್ಮ ಆಶ್ರಮದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ʼʼಜುಲೈ 2ರ ಘಟನೆಯ ನಂತರ ತುಂಬಾ ಆಘಾತವಾಗಿತ್ತು. ಅದಾಗ್ಯೂ ಸತ್ಯ ಹೊರಬರುತ್ತದೆ ಎನ್ನುವ ವಿಶ್ವಾಸವಿದೆʼʼ ಎಂದಿದ್ದಾರೆ.

ʼʼನಮ್ಮ ವಕೀಲ ಡಾ.ಎ.ಪಿ.ಸಿಂಗ್ ಮತ್ತು ಪ್ರತ್ಯಕ್ಷದರ್ಶಿಗಳು ಸ್ಥಳದಲ್ಲಿ ವಿಷಕಾರಿ ಸಿಂಪಡಣೆ ಆಗಿರುವ ಬಗ್ಗೆ ತಿಳಿಸಿದ್ದಾರೆ. ಏನೋ ಪಿತೂರಿ ಇದೆ ಎಂಬುದು ನಿಜ. ಎಸ್ಐಟಿ (Special Investigation Team) ಮತ್ತು ನ್ಯಾಯಾಂಗ ಆಯೋಗದ ಮೇಲೆ ನಂಬಿಕೆ ಇದೆ ಮತ್ತು ಸತ್ಯ ಹೊರಬರುತ್ತದೆ” ಎಂದು ಹೇಳಿದ್ದಾರೆ. ಈ ಹಿಂದೆಯೂ ಭೋಲೆ ಬಾಬಾ ಘಟನೆಯ ಹಿಂದೆ ಪಿತೂರಿ ಇದೆ ಎಂದು ಆರೋಪಿಸಿದ್ದರು.

ಈಗಾಗಲೇ ಕಾರ್ಯಕ್ರಮದ ಮುಖ್ಯ ಸಂಘಟಕ ದೇವಪ್ರಕಾಶ್ ಮಧುಕರ್‌ನನ್ನು ಪೊಲೀಸರು ಬಂಧಿಸಿದ್ದಾರೆ. ರಾಜ್ಯ ಸರ್ಕಾರವು ರಚಿಸಿದ ನ್ಯಾಯಾಂಗ ಸಮಿತಿಯು ಅಪಘಾತದ ಬಗ್ಗೆ ತನಿಖೆಯನ್ನು ಪ್ರಾರಂಭಿಸಿದೆ. ಜುಲೈ 9ರಂದು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ ಪ್ರಾಥಮಿಕ ವರದಿಯಲ್ಲಿ ಎಸ್ಐಟಿ ಕಾಲ್ತುಳಿತಕ್ಕೆ ಸಂಘಟಕರನ್ನು ಹೊಣೆಗಾರರನ್ನಾಗಿ ಮಾಡಿದ್ದು, ಜನಸಂದಣಿಯನ್ನು ನಿರ್ವಹಿಸಲು ಅವರು ಸೂಕ್ತ ವ್ಯವಸ್ಥೆ ಮಾಡಿಲ್ಲ ಎಂದು ಉಲ್ಲೇಖಿಸಿದೆ.

ಇದನ್ನೂ ಓದಿ: Hathras Stampede: ಕಾಲ್ತುಳಿತದ ಬಳಿಕ ಕಾಲ್ಕಿತ್ತಿದ್ದ ಡೋಂಗಿ ಬಾಬಾ- ವೈರಲ್‌ ಆಯ್ತು ವಿಡಿಯೋ

ದುರಂತದ ಹಿನ್ನೆಲೆ

ಉತ್ತರ ಪ್ರದೇಶದ ಹತ್ರಾಸ್‌ ಜಿಲ್ಲೆ ಮೊಘಲ್‌ಘರಾಹಿ ಗ್ರಾಮದಲ್ಲಿ ಜುಲೈ 2ರಂದು ಸ್ವಯಂ ಘೋಷಿತ ʼದೇವ ಮಾನವʼ ಭೋಲೆ ಬಾಬಾ (Bhole Baba) ಅವರ ಸತ್ಸಂಗ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇಕ್ಕಟ್ಟಾದ ಸ್ಥಳದಲ್ಲಿ ಲಕ್ಷಾಂತರ ಮಂದಿ ಸೇರಿದ್ದರಿಂದ ಕಾಲ್ತುಳಿತ ಸಂಭವಿಸಿತ್ತು.

ಪೊಲೀಸ್‌ ತನಿಖೆಯ ಪ್ರಾಥಮಿಕ ವರದಿಯು, ʼʼ80 ಸಾವಿರ ಜನರಿಗಾಗಿ ಅನುಮತಿ ಪಡೆದ ಸತ್ಸಂಗ ಕಾರ್ಯಕ್ರಮದಲ್ಲಿ ಸುಮಾರು 2 ಲಕ್ಷಕ್ಕೂ ಅಧಿಕ ಭಕ್ತರು ಪಾಲ್ಗೊಂಡಿದ್ದರು. ಭೋಲೆ ಬಾಬಾ ಮಧ್ಯಾಹ್ನ 12.30ರ ಸುಮಾರಿಗೆ ಸತ್ಸಂಗ ಪೆಂಡಾಲ್‌ಗೆ ಆಗಮಿಸಿದ್ದರು. ಕಾರ್ಯಕ್ರಮವು 1 ಗಂಟೆ ನಡೆಯಿತು. ನಂತರ ಮಧ್ಯಾಹ್ನ 1.40ರ ಸುಮಾರಿಗೆ ಭೋಲೆ ಬಾಬಾ ಪೆಂಡಾಲ್‌ನಿಂದ ಹೊರಬಂದರು. ಭೋಲೆ ಬಾಬಾ ಹೊರಡುವ ವೇಳೆ ವೇಳೆ ಲಕ್ಷಾಂತರ ಮಂದಿ ಅವರ ಪಾದ ಮುಟ್ಟಿ, ಅವರು ಮೆಟ್ಟಿದ ನೆಲದ ಮಣ್ಣನ್ನು ತೆಗೆದುಕೊಳ್ಳಲು ಓಡಿ ಹೋಗಿದ್ದಾರೆ. ಹಾಗೆ ಓಡಿ ಹೋಗುವ ಭರದಲ್ಲಿ ಕಾಲ್ತುಳಿತ ಉಂಟಾಗಿದೆ. ಒಬ್ಬರನ್ನೊಬ್ಬರು ತುಳಿದುಕೊಂಡು ಮುಂದೆ ಸಾಗಿದ್ದು ಹಾಗೂ ಚರಂಡಿಯಲ್ಲಿ ಬಿದ್ದಿದ್ದು ಸಾವಿನ ಸಂಖ್ಯೆ ಜಾಸ್ತಿಯಾಗಲು ಕಾರಣ” ಎಂದು ತಿಳಿಸಿತ್ತು.

Exit mobile version