ನವದೆಹಲಿ: ಎನ್‌ಸಿಪಿಯ ನಾಯಕ ಶರದ್ ಪವಾರ್ (NCP Leader Sharad Pawar) ಮನೆಯಲ್ಲಿ ಇಂಡಿಯಾ ಕೂಟದ (India Bloc) ಸಮನ್ವಯ ಸಮಿತಿಯ ಮೊದಲ ಸಭೆ ಬುಧವಾರ ನಡೆಯಿತು. ಇಂಡಿಯಾ ವಿರೋಧ ಪಕ್ಷದ ಮೈತ್ರಿಕೂಟವು ಜಾತಿ ಗಣತಿ ವಿಷಯವನ್ನು (Caste Census) ಕೈಗೆತ್ತಿಕೊಳ್ಳಲು ಒಪ್ಪಿಕೊಂಡಿದೆ ಎಂದು ಕಾಂಗ್ರೆಸ್ ನಾಯಕ ಕೆ ಸಿ ವೇಣುಗೋಪಾಲ್ (Congress Leader KC Venugopal) ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದರು. ಸಮಿತಿಯು, ಸೀಟು ಹಂಚಿಕೆಯನ್ನು ನಿರ್ಧರಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಲಿದೆ ಎಂದು ಇದೇ ವೇಳೆ ತಿಳಿಸಿದರು. ಅಲ್ಲದೇ, ಕೂಟದ ಮೊದಲ ರ‍್ಯಾಲಿ (Election Rally) ಅಕ್ಟೋಬರ್ ಮೊದಲ ವಾರದಲ್ಲಿ ಭೋಪಾಲ್‌ನಲ್ಲಿ (Bhopal) ನಡೆಯಲಿದೆ.
ದಿಲ್ಲಿಯ ಶರದ್ ಪವಾರ್ ಅವರ ಮನೆಯಲ್ಲಿ ಇಂಡಿಯೂ ಕೂಟದ 14 ಸದಸ್ಯರ ಸಮನ್ವಯ ಸಮಿತಿ ಸಭೆಯ ಮೊದಲ ಬಾರಿಗೆ ಸಭೆ ನಡೆಸಿದೆ. ಮುಂಬೈ ಸಭೆಯಲ್ಲಿ ಸಮನ್ವಯ ಸಮಿತಿ ಘೋಷಿಸಲಾಗಿತ್ತು. ದೇಶಾದ್ಯಂತ ರ್ಯಾಲಿಗಳು ಮತ್ತು ಪ್ರಚಾರದ ಬಗ್ಗೆ ಚರ್ಚೆ ನಡೆಸಲಾಗಿದೆ. ಜತೆಗೆ, ಜೊತೆಗೆ ಇನ್ನು ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆದಿದೆ.
ಭೋಪಾಲ್‌ನಲ್ಲಿ ಮೊದಲ ಇಂಡಿಯಾ ಎಲೆಕ್ಷನ್ ರ‍್ಯಾಲಿ
ಇಂಡಿಯಾ ಕೂಟವು ತನ್ನ ಮೊದಲ ಚುನಾವಣಾ ರ‍್ಯಾಲಿಯನ್ನು ಮಧ್ಯ ಪ್ರದೇಶದ ಭೋಪಾಲ್‌ನಲ್ಲಿ ನಡೆಸಲು ಮುಂದಾಗಿದೆ. ವರ್ಷಾಂತ್ಯಕ್ಕೆ ಮಧ್ಯಪ್ರದೇಶದ ವಿಧಾನಸಭೆಗೂ ಚುನಾವಣೆ ನಡೆಯಲಿದೆ. ಹಾಗಾಗಿ, ಈ ರ‍್ಯಾಲಿ ಮಹತ್ವದ್ದಾಗಲಿದೆ ಎನ್ನಲಾಗಿದೆ. ಅಕ್ಟೋಬರ್ ಮೊದಲ ವಾರದಲ್ಲಿ ಜಂಟಿಯಾಗಿ ಈ ರ‍್ಯಾಲಿಯನ್ನು ಸಂಗ್ರಹಿಸಲಾಗುತ್ತಿದೆ ಎಂದು ಬುಧವಾರ ನಡೆದ ಇಂಡಿಯಾ ಕೂಟದ ಸಭೆಯಲ್ಲಿ ನಿರ್ಧರಿಸಲಾಗಿದೆ. ಭೋಪಾಲ್‌ನಲ್ಲಿ ನಡೆಯಲಿರುವ ಮೊದಲ ರ‍್ಯಾಲಿಗೆ ಇಂಡಿಯಾ ಕೂಟದ ಎಲ್ಲ ನಾಯಕರು ಪಾಲ್ಗೊಳ್ಳಲಿದ್ದಾರೆ. ಕಾಂಗ್ರೆಸ್ ಪರವಾಗಿ ಮತ ಯಾಚನೆ ಮಾಡಲಿದ್ದಾರೆ.
ಈ ಸುದ್ದಿಯನ್ನೂ ಓದಿ: ಇಂಡಿಯಾ ಅಲ್ಲ ಭಾರತ! ವಿಶೇಷ ಅಧಿವೇಶನದಲ್ಲಿ ದೇಶ ಮರುನಾಮಕರಣಕ್ಕೆ ವಿಧೇಯಕ! INDIA blocಗೆ ಕೇಂದ್ರ ಟಕ್ಕರ್
ಸೀಟು ಹಂಚಿಕೆ ಶೀಘ್ರ ತೀರ್ಮಾನ
ಸೀಟು ಹಂಚಿಕೆಯ ವಿಚಾರ ಸದ್ಯದಲ್ಲೆ ತೀರ್ಮಾನ ಕೈಗೊಳ್ಳಲು ಯೋಜಿಸಲಾಗಿದೆ. ಆಯಾ ರಾಜ್ಯಗಳಲ್ಲೇ ಸೀಟು ಹಂಚಿಕೆಯ ಬಗ್ಗೆ ತೀರ್ಮಾನ ಮಾಡಲು ಚಿಂತನೆ ನಡೆದಿದೆ. ಸಮನ್ವಯ ಸಮಿತಿಯ ಮೊದಲ ಸಭೆಯಲ್ಲೆ ಹಲವು ವಿಚಾರಗಳು ಚರ್ಚೆಗಳಾಗಿವೆ. ಲೋಕಸಭೆ ಚುನಾವಣೆಗಾಗಿ ಆಯಾ ರಾಜ್ಯಗಳಲ್ಲೇ ಸೀಟು ಹಂಚಿಕೆಗಾಗಿ ಸಮಿತಿಗಳ ರಚನೆ ಮಾಡಲಾಗುತ್ತದೆ. ಬಳಿಕ ಅಂತಿಮವಾಗಿ ಇಂಡಿಯಾ ಒಕ್ಕೂಟದ ನಾಯಕರು ದೆಹಲಿಯಲ್ಲಿ ತೀರ್ಮಾನ ಮಾಡಲಿದ್ದಾರೆ. ಪಂಜಾಬ್ ಸೇರಿ ಏಳು ರಾಜ್ಯಗಳಲ್ಲಿ ಈ ಕುರಿತು ಸಮಿತಿಗಳನ್ನು ರಚನೆ ಮಾಡುವ ಕುರಿತು ಸಭೆಯಲ್ಲಿ ತೀರ್ಮಾನಿಸಲಾಗಿದೆ.