ಗಾಂಧಿನಗರ: ಗುಜರಾತ್‌ನ 18ನೇ ಮುಖ್ಯಮಂತ್ರಿಯಾಗಿ ಭೂಪೇಂದ್ರ ಪಟೇಲ್ ಅವರು ಸೋಮವಾರ ಮಧ್ಯಾಹ್ನ 2 ಗಂಟೆ ಹೊತ್ತಿಗೆ ಅಧಿಕಾರ ಸ್ವೀಕರಿಸಿದರು. ರಾಜ್ಯಪಾಲ ಆಚಾರ್ಯ ದೇವವ್ರತ್ ಅವರು ಪ್ರಮಾಣ ವಚನ ಬೋಧಿಸಿದರು. ಈ ವೇಳೆ, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿ ಅನೇಕ ಹಿರಿಯ ನಾಯಕರು ಹಾಜರಿದ್ದರು.
ಭೂಪೇಂದ್ರ ಪಟೇಲ್ ಅವರು ಎರಡನೇ ಬಾರಿಗೆ ಗುಜರಾತ್ ಮುಖ್ಯಮಂತ್ರಿಯಾಗುತ್ತಿದ್ದಾರೆ. ಅಂದಿನ ಸಿಎಂ ವಿಜಯ ರೂಪಾನಿ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ 2021ರಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಭೂಪೇಂದ್ರ ಪಟೇಲ್ ಅವರು ಮೊದಲ ಬಾರಿಗೆ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ್ದರು.
16 ಸಚಿವರು
ಭೂಪೇಂದ್ರ ಪಟೇಲ್ ಅವರ ಜತೆಗೆ, 16 ಶಾಸಕರು ಸಚಿವರಾಗಿ ಇದೇ ವೇಳೆ, ಪ್ರಮಾಣ ವಚನ ಸ್ವೀಕರಿಸಿದರು. ಈ ಪೈಕಿ 8 ಮಂದಿ ಕ್ಯಾಬಿನೆಟ್ ದರ್ಜೆಯ ಸಚಿವರಾಗಿದ್ದಾರೆ. 16 ಶಾಸಕರ ಪೈಕಿ 11 ಜನರು ಈ ಹಿಂದೆಯೂ ಸಚಿವರಾಗಿದ್ದರು. ಉಳಿದವರು ಇದೇ ಮೊದಲ ಬಾರಿಗೆ ಸಚಿವರಾಗುತ್ತಿದ್ದಾರೆ.
ಸಂಪುಟ ಸಚಿವರು
ಕಾನು ದೇಸಾಯಿ, ರಿಷಿಕೇಷ್ ದೇಸಾಯಿ, ರಾಘವಜೀ ಪಟೇಲ್, ಬಲವಂತ್ ಸಿನ್ಹ ರಾಜಪೂತ್, ಕುನ್ವರ್ಜಿ ಭವಲಿಯಾ, ಮಲು ಬೇರಾ, ಕುಬೇರ್ ದಿಂಡೋರ ಮತ್ತು ಭಾನುಬೆನ್ ಬಾಬರಿಯಾ ಸಂಪುಟ ದರ್ಜೆ ಸಚಿವರಾದರೆ, ಹರ್ಷ ಸಾಂಘ್ವಿ, ಜಗದೀಶ್ ವಿಶ್ವಕರ್ಮ ಅವರು ಸ್ವತಂತ್ರ ನಿರ್ವಹಣೆಯೊಂದಿಗೆ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಮೊದಲ ಬಾರಿಗೆ ಸಚಿವರು
ಪುರುಷತೋತ್ತಮ ಸೋಳಂಕಿ, ಬಚು ಖಬಾದ್, ಮುಕೇಶ್ ಪಟೇಲ್, ಪ್ರಫುಲ್ ಪನ್ಶೇರಿಯಾ, ಕುವೇರ್ಜಿ ಹಲ್ಪತಿ, ಬಿಖುಸಿನ್ಹ ಪರ್ಮಾರ್ ಅವರು ಮೊದಲ ಬಾರಿಗೆ ಸಚಿವರಾಗಿದ್ದಾರೆ.
ಯಾರೆಲ್ಲ ಬಂದಿದ್ದರು?
ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಸರ್ಬಾನಂದ್ ಸೋನೋವಾಲಾ, ಸ್ಮೃತಿ ಇರಾನಿ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ, ಡಿಸಿಎಂ ದೇವೇಂದ್ರ ಫಡ್ನವಿಸ್, ಮಧ್ಯಮಪ್ರದೇಶದ ಸಿಎಂ ಶಿವರಾಜ್ ಸಿಂಗ್ ಚೌಹಾಣ್, ಕರ್ನಾಟಕದ ಸಿಎಂ ಬಸವರಾಜ ಬೊಮ್ಮಾಯಿ, ಅಸ್ಸಾಮ್ ಸಿಎಂ, ಹಿಮಂತ್ ಬಿಸ್ವ ಶರ್ಮಾ, ಉತ್ತಾರಖಂಡ ಸಿಎಂ, ಪಿ ಎಸ್ ಧಾಮಿ, ತ್ರಿಪುರಾ ಸಿಎಂ ಮಾಣಿಕ್ ಶಾ, ಗೋವಾ ಸಿಎಂ ಪ್ರಮೋದ್ ಸಾವಂತ್, ಅವರು ಗುಜರಾತ್ ಸಿಎಂ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಇದನ್ನೂ ಓದಿ | Gujarat Election Results | ಗುಜರಾತ್ ಚುನಾವಣೆಯಲ್ಲಿ ಸೃಷ್ಟಿಯಾದ ದಾಖಲೆಗಳ ರಾಶಿ