ಮುಂಬೈ: ಮಹಾರಾಷ್ಟ್ರ ವಿಧಾನ ಪರಿಷತ್‌ಗೆ ನಡೆದ ಚುನಾವಣೆಯ (Maharashtra Election) ಫಲಿತಾಂಶಗಳು ಪ್ರಕಟವಾಗುತ್ತಿದ್ದು, ಬಿಜೆಪಿಗೆ ಮುಖಭಂಗವಾಗಿದೆ. ಬಿಜೆಪಿ ಪ್ರಾಬಲ್ಯದ ನಾಗ್ಪುರ ಕ್ಷೇತ್ರದಲ್ಲಿ ಬಿಜೆಪಿಯ (BJP) ಅಭ್ಯರ್ಥಿಯ ವಿರುದ್ಧ ಮಹಾ ವಿಕಾಸ್ ಅಘಾಡಿ(MVS) ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಬಿಜೆಪಿಯ ಸೈದ್ಧಾಂತಿಕ ಮಾತೃ ಸಂಸ್ಥೆಯಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‌ಎಸ್ಎಸ್) ಕೇಂದ್ರ ಕಚೇರಿ ಕೂಡ ನಾಗ್ಪುರದಲ್ಲಿದೆ. ಹಾಗೆಯೇ, ಇದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹಾಗೂ ಮಹಾರಾಷ್ಟ್ರದ ಡಿಸಿಎಂ ದೇವಿಂದ್ರ ಫಡ್ನವಿಸ್ ಅವರ ತವರು ನೆಲವೂ ಹೌದು. ಪರಿಷತ್‌ಗೆ ಐದು ಕ್ಷೇತ್ರಗಳ ಚುನಾವಣೆ ನಡೆದಿದ್ದು, ಮೂರರಲ್ಲಿ ಎಂವಿಎ, ಒಂದರಲ್ಲಿ ಬಿಜೆಪಿ ಮತ್ತು ಮತ್ತೊಂದು ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.
ಶಿವಸೇನೆಯನ್ನು ಇಬ್ಭಾಗಿಸಿ, ಉದ್ಧವ್ ಠಾಕ್ರೆಯನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದ ಬಳಿಕ ಮುಖ್ಯಮಂತ್ರಿ ಏಕನಾಥ್ ಶಿಂಧೆ ಎದುರಿಸುತ್ತಿರುವ ಮೊದಲ ಚುನಾವಣಾ ಇದಾಗಿದೆ. ಆದರೆ, ಫಲಿತಾಂಶ ಮಾತ್ರ ಅವರಿಗೆ ಖುಷಿ ಕೊಟ್ಟಿಲ್ಲ. ನಾಗ್ಪುರ್ ಕ್ಷೇತ್ರದಿಂದ ನಡೆದ ಪರಿಷತ್ ಚುನಾವಣೆಯಲ್ಲಿ ಎಂವಿಎ ಬೆಂಬಲಿತ ಅಭ್ಯರ್ಥಿ ಸುಧಾಕರ್ ಅಡ್ಬಲೆ ಅವರು ಬಿಜೆಪಿ ಬೆಂಬಲಿತ ನಾಗೋ ಗನಾರ್ ಅವರನ್ನು ಸೋಲಿಸಿದ್ದಾರೆ. ಚುನವಣಾ ಫಲಿತಾಂಶ ಪ್ರಕಟವಾದ ಕ್ಷೇತ್ರಗಳ ಪೈಕಿ ಎಂವಿಎ 2 ಸ್ಥಾನಗಳನ್ನು ಗೆದ್ದುಕೊಂಡು ಮುನ್ನಡೆ ಕಾಯ್ದುಕೊಂಡಿದೆ.
ಇದನ್ನೂ ಓದಿ: Real Shiv Sena | ನಿಜವಾದ ಶಿವಸೇನೆ ಯಾರದ್ದು? ಉದ್ಧವ್ ಅರ್ಜಿ ವಜಾಗೊಳಿಸಿದ ಸುಪ್ರೀಂ, ಶಿಂಧೆಗೆ ಮುನ್ನಡೆ
ಶಿಕ್ಷಕರ ಕ್ಷೇತ್ರಗಳಾದ ಔರಂಗಾಬಾದ್, ನಾಗ್ಪುರ ಮತ್ತು ಕೊಂಕಣಗಳಲ್ಲಿ ಕ್ರಮವಾಗಿ ಶೇ.86, ಶೇ.86.23 ಮತ್ತು ಶೇ.91.02 ಮತದಾನವಾಗಿತ್ತು. ಕೊಂಕಣ ಕ್ಷೇತ್ರದಲ್ಲಿ ಗರಿಷ್ಠ ಮತದಾನವಾಗಿತ್ತು. ನಾಸಿಕ್ ವಿಭಾಗದಲ್ಲಿ ಕನಿಷ್ಠ ಮತದಾನವಾಗಿತ್ತು.