ನವದೆಹಲಿ: ಕೇಂದ್ರದಲ್ಲಿ ಸತತ ಮೂರನೇ ಬಾರಿಗೆ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ಸರ್ಕಾರ ರಚನೆಗೆ ಪ್ರಮುಖ ಕಾರಣವಾಗಿರುವ, ಮೈತ್ರಿಕೂಟದ ಪ್ರಮುಖ ಮಿತ್ರಪಕ್ಷವಾದ ಜೆಡಿಯು ಹಾಗೂ ಅದರ ಮುಖ್ಯಸ್ಥ ನಿತೀಶ್ ಕುಮಾರ್ (Nitish Kumar) ಅವರಿಗೆ ಭಾರಿ ಹಿನ್ನಡೆಯಾಗಿದೆ. “ಬಿಹಾರಕ್ಕೆ ವಿಶೇಷ ಸ್ಥಾನಮಾನ (Bihar Special Status) ನೀಡುವ ಪ್ರಸ್ತಾವನೆಯೇ ನಮ್ಮ ಮುಂದೆ ಇಲ್ಲ” ಎಂಬುದಾಗಿ ಕೇಂದ್ರ ಹಣಕಾಸು ಸಚಿವಾಲಯವು (Finance Ministry) ಖಡಾಖಂಡಿತವಾಗಿ ಹೇಳಿದ್ದು, ಇದರಿಂದಾಗಿ ನಿತೀಶ್ ಕುಮಾರ್ ಬಂಡಾಯದ ಬಾವುಟ ಹಾರಿಸುವುದು ನಿಶ್ಚಿತ ಎಂದೇ ಹೇಳಲಾಗುತ್ತಿದೆ.
“ಆರ್ಥಿಕ ಏಳಿಗೆ ಹಾಗೂ ಕೈಗಾರಿಕೆಗಳಿಗೆ ಉತ್ತೇಜನ ನೀಡುವ ದಿಸೆಯಲ್ಲಿ ಬಿಹಾರ ಸೇರಿ ಹಲವು ರಾಜ್ಯಗಳಿಗೆ ವಿಶೇಷ ಸ್ಥಾನಮಾನ ಕಲ್ಪಿಸುವ ಪ್ರಸ್ತಾವನೆ ಸರ್ಕಾರದ ಮುಂದಿದೆಯೇ” ಎಂಬುದಾಗಿ ಬಿಹಾರದ ಝಂಝಹರಪುರ ಕ್ಷೇತ್ರದ ಜೆಡಿಯು ಸಂಸದ ರಾಮ್‌ಪ್ರೀತ್ ಮಂಡಲ್ ಅವರು ಕೇಂದ್ರ ಹಣಕಾಸು ಸಚಿವಾಲಯಕ್ಕೆ ಪ್ರಶ್ನೆ ಕೇಳಿದ್ದರು. ಇದಕ್ಕೆ, ಕೇಂದ್ರ ಹಣಕಾಸು ಖಾತೆ ಸಹಾಯಕ ಸಚಿವ ಪಂಕಜ್ ಚೌಧರಿ ಲಿಖಿತ ಪ್ರತಿಕ್ರಿಯೆ ನೀಡಿದ್ದು, “ಯಾವುದೇ ರಾಜ್ಯಗಳಿಗೆ ವಿಶೇಷ ಸ್ಥಾನಮಾನ ಕಲ್ಪಿಸುವ ಪ್ರಸ್ತಾವನೆ ಕೇಂದ್ರದ ಮುಂದಿಲ್ಲ” ಎಂದಿದ್ದಾರೆ.
Bihar will not receive special state status.
— All India Radio News (@airnewsalerts) July 22, 2024
This was stated by Finance Minister of State @mppchaudhary in a written response in the Lok Sabha.#MonsoonSession2024 pic.twitter.com/crohLuGc0t
“ಯಾವುದೇ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡಲು ಹಲವು ಮಾನದಂಡಗಳನ್ನು ನಿಗದಿಪಡಿಸಲಾಗಿದೆ. ಅತಿಯಾಗಿ ಹಿಂದುಳಿದ ರಾಜ್ಯಗಳಿಗೆ, ಗುಡ್ಡಗಾಡು ಪ್ರದೇಶದ ರಾಜ್ಯಗಳು, ಆರ್ಥಿಕವಾಗಿ ಹಿನ್ನಡೆಯಲ್ಲಿರುವ ರಾಜ್ಯಗಳಿಗೆ ವಿಶೇಷ ಸ್ಥಾನಮಾನ ಕಲ್ಪಿಸಲಾಗುತ್ತದೆ. ಹಾಗಾಗಿ, ಬಿಹಾರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಪ್ರಸ್ತಾವನೆ ಇಲ್ಲ” ಎಂಬುದಾಗಿ ಪಂಕಜ್ ಚೌಧರಿ ತಿಳಿಸಿದ್ದಾರೆ. 12 ಸಂಸದರನ್ನು ಹೊಂದಿರುವ ಜೆಡಿಯು, ಎನ್‌ಡಿಎ ಮೈತ್ರಿಕೂಟದ ಭಾಗವಾಗಿರುವ ಕಾರಣ ಬಿಹಾರಕ್ಕೆ ವಿಶೇಷ ಸ್ಥಾನಮಾನ ಸಿಗುತ್ತದೆ ಎಂದೇ ಹೇಳಲಾಗುತ್ತಿತ್ತು. ಆದರೀಗ, ಜೆಡಿಯುಗೆ ಮುಖಭಂಗ ಉಂಟಾಗಿದೆ.
ಮೈತ್ರಿಧರ್ಮ ನೆನಪಿಸಿದ ಜೆಡಿಯು
ಬಿಹಾರಕ್ಕೆ ವಿಶೇಷ ಸ್ಥಾನಮಾನ ನೀಡಲು ಆಗುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದ ಬೆನ್ನಲ್ಲೇ, ಕೇಂದ್ರ ಸರ್ಕಾರಕ್ಕೆ ಜೆಡಿಯು ಮೈತ್ರಿಧರ್ಮವನ್ನು ನೆನಪಿಸಿದೆ ಎಂದು ತಿಳಿದುಬಂದಿದೆ. ಮೈತ್ರಿಕೂಟದ ಪಕ್ಷಗಳು, ಆ ಪಕ್ಷಗಳು ಆಡಳಿತ ನಡೆಸುವ ರಾಜ್ಯಗಳ ಹಿತಾಸಕ್ತಿಯಿಂದ ಬಿಜೆಪಿಯು ವರ್ತಿಸಬೇಕು. ಮೈತ್ರಿಧರ್ಮವನ್ನು ಪಾಲಿಸಬೇಕು ಎಂಬುದಾಗಿ ಜೆಡಿಯು ಸಂದೇಶ ರವಾನಿಸಿದೆ ಎನ್ನಲಾಗಿದೆ. ಇನ್ನು, ನಿತೀಶ್ ಕುಮಾರ್ ಅವರು ಯಾವ ತೀರ್ಮಾನ ತೆಗೆದುಕೊಳ್ಳಲಿದ್ದಾರೆ? ಬಂಡಾಯ ಏಳಲಿದ್ದಾರಾ? ರಾಜ್ಯದಲ್ಲಿ ಪ್ರತಿಪಕ್ಷಗಳನ್ನು ಜೆಡಿಯು ಹೇಗೆ ಹೆದರಿಸುತ್ತದೆ ಎಂಬುದು ಕುತೂಹಲ ಕೆರಳಿಸಿದೆ.
ಇದನ್ನೂ ಓದಿ: Special Status: ಬಿಹಾರಕ್ಕೆ ಇಲ್ಲ ವಿಶೇಷ ಸ್ಥಾನಮಾನ; ನಿತೀಶ್ ಕುಮಾರ್ ರಾಜೀನಾಮೆಗೆ ಆರ್‌ಜೆಡಿ ಆಗ್ರಹ