ನವದೆಹಲಿ: ಮೇಕ್ ಇನ್ ಇಂಡಿಯಾ, ಆತ್ಮನಿರ್ಭರ ಭಾರತ ಅಭಿಯಾನ, ಯೋಜನೆಗಳ ಮೂಲಕ ಹೆಚ್ಚಿನ ಉತ್ತೇಜನ ನೀಡಿದ ಪರಿಣಾಮವಾಗಿ ಭಾರತದ ರಕ್ಷಣಾ ಉತ್ಪಾದನೆಯು (Defence Production) 2023-24ನೇ ಸಾಲಿನಲ್ಲಿ ದಾಖಲೆ ಬರೆದಿದೆ. 2023-24ನೇ ಸಾಲಿನಲ್ಲಿ ಭಾರತದ ರಕ್ಷಣಾ ಕ್ಷೇತ್ರದ ಉತ್ಪಾದನೆಯು ಶೇ.16.7ರಷ್ಟು ಜಾಸ್ತಿಯಾಗಿದ್ದು, ಇದು ದೇಶದ ಇತಿಹಾಸದಲ್ಲಿಯೇ ಗರಿಷ್ಠ ಬೆಳವಣಿಗೆಯಾಗಿದೆ ಎಂದು ರಕ್ಷಣಾ ಇಲಾಖೆ (Department Of Defence) ಪ್ರಕಟಣೆ ಹೊರಡಿಸಿದೆ. ಅದರಲ್ಲೂ, 2019-20ರ ಬಳಿಕ ಗಮನಾರ್ಹ ಶೇ.60ರಷ್ಟು ಏರಿಕೆಯಾಗಿರುವುದು ರಕ್ಷಣಾ ಕ್ಷೇತ್ರದ ಆತ್ಮನಿರ್ಭರತೆಗೆ (Atmanirbhar) ಹಿಡಿದ ಕನ್ನಡಿ ಎಂದೇ ಹೇಳಲಾಗುತ್ತಿದೆ.
ಡಿಫೆನ್ಸ್ ಪಬ್ಲಿಕ್ ಸೆಕ್ಟರ್ ಅಂಡರ್‌ಟೇಕಿಂಗ್ಸ್ (DPSU) ಮಾಹಿತಿ ಪ್ರಕಾರ, “2023-24ರಲ್ಲಿ ದೇಶದ ಸಾರ್ವಜನಿಕ ವಲಯದ ಸಂಸ್ಥೆಗಳು ಹಾಗೂ ಖಾಸಗಿ ಕಂಪನಿಗಳು ಸೇರಿ ಒಟ್ಟು 1.26 ಲಕ್ಷ ಕೋಟಿ ರೂ. ಮೌಲ್ಯದ ರಕ್ಷಣಾ ಉತ್ಪನ್ನಗಳನ್ನು ಉತ್ಪಾದಿಸಿವೆ. 2022-23ರ ಹಣಕಾಸು ವರ್ಷದಲ್ಲಿ ದೇಶೀಯವಾಗಿ 1.08 ಲಕ್ಷ ಕೋಟಿ ರೂ. ಮೌಲ್ಯದ ಉತ್ಪನ್ನಗಳನ್ನು ಉತ್ಪಾದಿಸಲಾಗಿತ್ತು. ಕಳೆದ ಆರ್ಥಿಕ ಸಾಲಿಗೆ ಹೋಲಿಸಿದರೆ ಇದು ಶೇ.16.7ರಷ್ಟು ಬೆಳವಣಿಗೆಯಾಗಿದೆ” ಎಂದು ಪ್ರಕಟಣೆ ಮೂಲಕ ಮಾಹಿತಿ ನೀಡಿದೆ.
Very encouraging development. Compliments to all those who have contributed to this feat. We are fully committed to nurturing a supportive environment to further enhance our capabilities and establish India as a leading global defence manufacturing hub. This will enhance our… https://t.co/ddNvNzPFKD
— Narendra Modi (@narendramodi) July 5, 2024
ನರೇಂದ್ರ ಮೋದಿ ಸಂತಸ
ದೇಶದ ರಕ್ಷಣಾ ಉತ್ಪಾದನೆಯು ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ. “ಭಾರತವು ರಕ್ಷಣಾ ಉತ್ಪಾದನೆಯಲ್ಲಿ ಆತ್ಮನಿರ್ಭರತೆ ಸಾಧಿಸುತ್ತಿದೆ. ರಕ್ಷಣಾ ಉತ್ಪಾದನೆಯಲ್ಲಿ ಭಾರತವು ಜಗತ್ತಿನಲ್ಲೇ ಮುಂಚೂಣಿಯಲ್ಲಿ ಇರಬೇಕು ಎಂಬ ಬದ್ಧತೆಯಿಂದ ಕೆಲಸ ಮಾಡುತ್ತಿದ್ದೇವೆ. ಈಗ ಉತ್ಪಾದನಾ ಕ್ಷೇತ್ರದ ಬೆಳವಣಿಗೆಯು ಸಂತಸ ತಂದಿದೆ. ಇದರ ಹಿಂದೆ ಶ್ರಮವಹಿಸಿದ ಎಲ್ಲರಿಗೂ ಅಭಿನಂದನೆಗಳು” ಎಂಬುದಾಗಿ ಅವರು ಪೋಸ್ಟ್ ಮಾಡಿದ್ದಾರೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಕೂಡ ರಕ್ಷಣಾ ಉತ್ಪಾದನೆ ಸಾಧನೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. “2023-24ನೇ ಸಾಲಿನಲ್ಲಿ ರಕ್ಷಣಾ ಕ್ಷೇತ್ರದ ಉತ್ಪಾದನೆ ಮೊತ್ತವು ದಾಖಲೆಯ 1.27 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ರಕ್ಷಣಾ ಕ್ಷೇತ್ರದಲ್ಲೂ ಆತ್ಮನಿರ್ಭರತೆ ಸಾಧಿಸಲು ನೀಡಿದ ಉತ್ತೇಜನದ ಫಲವಾಗಿ ಭಾರತವು ಗಣನೀಯ ಸಾಧನೆ ಮಾಡಿದೆ” ಎಂಬುದಾಗಿ ರಾಜನಾಥ್ ಸಿಂಗ್ ಅವರು ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.