Site icon Vistara News

ISIS Terrorist: ದೆಹಲಿಯಲ್ಲಿ ಐಸಿಸ್‌ ಉಗ್ರ ಶಾಹ್‌ನವಾಜ್‌ ಬಂಧನ; ಎಂಜಿನಿಯರ್‌ ಉಗ್ರನಾಗಿದ್ದು ಹೇಗೆ?

Suspected Terrorist Arrested

Big Crackdown: Suspected ISIS Terrorist Arrested By Delhi Police

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ದೆಹಲಿ ಪೊಲೀಸರು ಬೃಹತ್‌ ಉಗ್ರ ಜಾಲವೊಂದನ್ನು ಭೇದಿಸಿದ್ದು, ಶಂಕಿತ ಐಸಿಸ್‌ ಉಗ್ರನೊಬ್ಬನನ್ನು (ISIS Terrorist) ಬಂಧಿಸಿದ್ದಾರೆ. ಎನ್‌ಐಎ ಅಧಿಕಾರಿಗಳ ಸಹಕಾರದೊಂದಿಗೆ ಪೊಲೀಸರು ಶಾಹ್‌ನವಾಜ್‌ (Shahnawaz) ಅಲಿಯಾಸ್‌ ಶಫಿ ಉಜ್ಜಾಮ ಎಂಬಾತನನ್ನು ಬಂಧಿಸಿದ್ದಾರೆ. ಈತ ದೆಹಲಿ ಪೊಲೀಸರ ವಾಂಟೆಡ್‌ ಲಿಸ್ಟ್‌ನಲ್ಲಿದ್ದು, ಇವನ ಬಗ್ಗೆ ಸುಳಿವು ನೀಡಿದವರಿಗೆ 3 ಲಕ್ಷ ರೂ. ಬಹುಮಾನವನ್ನೂ ಘೋಷಿಸಲಾಗಿತ್ತು.

ಮಹಾರಾಷ್ಟ್ರ, ಕೇರಳ ಸೇರಿ ಹಲವು ರಾಜ್ಯಗಳಲ್ಲಿ ಐಸಿಸ್‌ ಉಗ್ರರು ದಾಳಿಗೆ ಸಂಚು ರೂಪಿಸಿರುವ ಕುರಿತು ಎನ್‌ಐಎ ಅಧಿಕಾರಿಗಳು ತನಿಖೆ ನಡೆಸುತ್ತಿದ್ದ, ಕಳೆದ ತಿಂಗಳಷ್ಟೇ ಪುಣೆಯಲ್ಲಿ ದಾಳಿ ನಡೆಸಿ ಹಲವು ಶಂಕಿತ ಉಗ್ರರನ್ನು ಬಂಧಿಸಿದ್ದರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯಲ್ಲಿ ಅಡಗಿ ಕುಳಿತಿದ್ದ ಶಾಹ್‌ನವಾಜ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಎಂಜಿನಿಯರ್‌ ಆಗಿದ್ದವ ಉಗ್ರನಾದ

ದೆಹಲಿ ನಿವಾಸಿಯಾದ ಶಾಹ್‌ನವಾಜ್‌ (32) ವೃತ್ತಿಯಲ್ಲಿ ಎಂಜಿನಿಯರ್‌ ಆಗಿದ್ದ. ಆದರೆ, ಐಸಿಸ್‌ನಿಂದ ಪ್ರೇರೇಪಣೆಗೊಂಡು ಹಲವು ಶಂಕಿತರ ಜತೆಗೂಡಿ ಉಗ್ರ ಕೃತ್ಯಗಳಲ್ಲಿ ತೊಡಗಿದ್ದ ಎಂದು ತಿಳಿದುಬಂದಿದೆ. ದೇಶದ ಹಲವೆಡೆ ದಾಳಿ ನಡೆಸಲು ಸಂಚು ರೂಪಿಸಿದ ಗ್ಯಾಂಗ್‌ನಲ್ಲಿ ಈತನೂ ಇದ್ದಾನೆ ಎನ್ನಲಾಗಿದೆ. ಅಷ್ಟೇ ಅಲ್ಲ, ರಿಜ್ವಾನ್‌ ಅಬ್ದುಲ್‌ ಹಾಜಿ ಅಲಿ, ಅಬ್ದುಲ್ಲಾ ಫಯಾಜ್‌ ಶೇಖ್‌ ಹಾಗೂ ಲಿಯಾಕತ್‌ ಖಾನ್‌ ಎಂಬುವವರೊಂದಿಗೆ ಎನ್‌ಐಎ ವಾಂಟೆಡ್‌ ಲಿಸ್ಟ್‌ನಲ್ಲಿ ಈತನೂ ಇದ್ದಾನೆ. ಇವರ ಬಗ್ಗೆ ಮಾಹಿತಿ ನೀಡಿದವರಿಗೆ ಎನ್‌ಐಎ 3 ಲಕ್ಷ ರೂ. ಬಹುಮಾನ ಘೋಷಿಸಿದೆ.

ಇದನ್ನೂ ಓದಿ: Manipur Horror: ಮಣಿಪುರ ವಿದ್ಯಾರ್ಥಿಗಳ ಭೀಕರ ಹತ್ಯೆ; ನಾಲ್ವರನ್ನು ಬಂಧಿಸಿದ ಸಿಬಿಐ, ಇಬ್ಬರು ವಶಕ್ಕೆ

ದೇಶದಲ್ಲಿ ಶಾಂತಿ ಕದಡಲು ಪಿತೂರಿ

ಕಳೆದ ತಿಂಗಳು ಎನ್‌ಐಎ ಅಧಿಕಾರಿಗಳು ಮಹಾರಾಷ್ಟ್ರದ ಪುಣೆಯ ಹಲವೆಡೆ ದಾಳಿ ನಡೆಸಿ, ಹಲವು ಆರೋಪಿಗಳನ್ನು ಬಂಧಿಸಿದ್ದರು. ದೇಶದ ಹಲವೆಡೆ ದಾಳಿ ನಡೆಸುವ ಮೂಲಕ ಶಾಂತಿ ಕದಡುವುದು ಇವರ ಉದ್ದೇಶವಾಗಿತ್ತು. ಹಾಗಾಗಿ, ಎನ್‌ಐಎ ಶೋಧ ನಡೆಸಿತ್ತು. ಇದೇ ಪ್ರಕರಣದಲ್ಲಿ ಪುಣೆ ಪೊಲೀಸ್‌ ಕಸ್ಟಡಿಯಿಂದ ಶಾಹ್‌ನವಾಜ್‌ ತಪ್ಪಿಸಿಕೊಂಡು, ದೆಹಲಿಯಲ್ಲಿ ತಲೆಮರೆಸಿಕೊಂಡಿದ್ದ ಎಂದು ತಿಳಿದುಬಂದಿದೆ. ಅಷ್ಟೇ ಅಲ್ಲ, ಪುಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಮೂವರು ಉಗ್ರರಿಗಾಗಿ ಪೊಲೀಸರು ಹಾಗೂ ಎನ್‌ಐಎ ಶೋಧ ಮುಂದುವರಿಸಿದೆ ಎಂದು ಮೂಲಗಳು ತಿಳಿಸಿವೆ.

Exit mobile version