ನವದೆಹಲಿ: ರಾಜ್ಯಸಭೆಯ 16 ಸೀಟುಗಳಿಗೆ ನಾಲ್ಕು ರಾಜ್ಯಗಳಲ್ಲಿ ಶುಕ್ರವಾರ ನಡೆದ ಚುನಾವಣೆಯಲ್ಲಿ ಮಹಾರಾಷ್ಟ್ರ, ಕರ್ನಾಟಕ, ಹರಿಯಾಣದಲ್ಲಿ ಬಿಜೆಪಿ ಅಚ್ಚರಿಯ ಗೆಲುವು ದಾಖಲಿಸಿದೆ. ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ನೇತೃತ್ವದ ಮೈತ್ರಿಕೂಟಕ್ಕೆ ಮುಖಭಂಗವಾಗಿದೆ. ರಾಜಸ್ಥಾನದಲ್ಲಿ ನಿರೀಕ್ಷೆಯಂತೆ ಕಾಂಗ್ರೆಸ್ ತನ್ನ ಪ್ರಾಬಲ್ಯವನ್ನು ಉಳಿಸಿಕೊಂಡಿದೆ.
ಮಹಾರಾಷ್ಟ್ರದಲ್ಲಿ ಆಡಳಿತಾರೂಢ ” ಮಹಾ ವಿಕಾಸ ಅಘಾಡಿʼ ಮೈತ್ರಿಕೂಟದ ಮೂರು ಮಿತ್ರಪಕ್ಷಗಳು ತಲಾ 1 ಸೀಟು ಗಳಿಸಿದ್ದರೆ, ಬಿಜೆಪಿಯ ಎಲ್ಲ 3 ಅಭ್ಯರ್ಥಿಗಳು ಜಯ ಗಳಿಸಿದ್ದಾರೆ.
ಹರಿಯಾಣದಲ್ಲಿ ಕಾಂಗ್ರೆಸ್‌ನ ಅಜಯ್ ಮಕೇನ್ ಅಲ್ಪ ದರದಲ್ಲಿ ಪರಾಭವಗೊಂಡಿದ್ದಾರೆ. ಅವರನ್ನು ಬಿಜೆಪಿ ಬೆಂಬಲಿತ ಸ್ವತಂತ್ರ ಅಭ್ಯರ್ಥಿ ಕಾರ್ತಿಕೇಯ ಶರ್ಮಾ ಸೋಲಿಸಿದ್ದಾರೆ. ಬಿಜೆಪಿಯ ಕೃಶನ್ ಲಾಲ್ ಪಾನ್ವಾರ್ ಗೆದ್ದಿದ್ದಾರೆ. ಅಜಯ್ ಮಕೇನ್ ಗೆಲ್ಲಲು ಬೇಕಿದ್ದ 30 ಮತ ಗಳಿಸಿದರೂ, ಒಂದು ಮತ ಅನರ್ಹಗೊಂಡ ಪರಿಣಾಮ ಸೋಲಿಗೀಡಾದರು.
ರಾಜಸ್ಥಾನದಲ್ಲಿ ನಿರೀಕ್ಷೆಯಂತೆ ಕಾಂಗ್ರೆಸ್ 3 ಹಾಗೂ ಬಿಜೆಪಿ 1 ಸ್ಥಾನ ಗಳಿಸಿದೆ. ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ರಣ್‌ದೀಪ್ ಸಿಂಗ್ ಸುರ್ಜೇವಾಲಾ ಗೆದ್ದಿದ್ದಾರೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಮುಕುಲ್ ವಾಸ್ನಿಕ್ ಮತ್ತು ಪ್ರಮೋದ್ ತಿವಾರಿ ಜಯ ಗಳಿಸಿದ್ದಾರೆ.
ಕರ್ನಾಟಕದಲ್ಲಿ ಬಿಜೆಪಿ 3 ಮತ್ತು ಕಾಂಗ್ರೆಸ್ 1 ಸ್ಥಾನ ಗೆದ್ದಿದೆ. ಬಿಜೆಪಿಯಿಂದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಜಗ್ಗೇಶ್ ಹಾಗೂ ಲೆಹರ್ ಸಿಂಗ್ ಜಯ ಗಳಿಸಿದ್ದಾರೆ.
ಗೆದ್ದ ಪ್ರಮುಖರು
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
ವಾಣಿಜ್ಯ ಸಚಿವ ಪಿಯೂಷ್ ಗೋಯೆಲ್
ರಣ್‌ದೀಪ್ ಸಿಂಗ್ ಸುರ್ಜೇವಾಲಾ
ಸಂಜಯ್ ರಾವತ್
ಮುಕುಲ್ ವಾಸ್ನಿಕ್
ಸೋತ ಪ್ರಮುಖರು:
ಅಜಯ್ ಮಕೇನ್
ಇದನ್ನೂ ಓದಿ:ರಾಜ್ಯಸಭೆ ಚುನಾವಣೆ: ಮಹಾರಾಷ್ಟ್ರದಲ್ಲಿ ಬಿಜೆಪಿಯ ಎಲ್ಲ ಮೂರು ಅಭ್ಯರ್ಥಿಗಳ ಜಯಭೇರಿ, ಎಂವಿಎಗೆ 3 ಸೀಟು