ಮುಂಬೈ: ಮಹಾರಾಷ್ಟ್ರದಲ್ಲಿ ಶಿವಸೇನೆ ಇಬ್ಭಾಗವಾದ ಬಳಿಕ ಏಕನಾಥ್ ಶಿಂಧೆ ಅವರನ್ನು ಮುಖ್ಯಮಂತ್ರಿ ಮಾಡಿದ ಖುಷಿಯಲ್ಲಿದ್ದ ಬಿಜೆಪಿಗೆ ಭಾರಿ ಹಿನ್ನಡೆಯಾಗಿದೆ. ರಾಜ್ಯದಲ್ಲಿ ನಡೆದ ಪಂಚಾಯಿತಿ ಚುನಾವಣೆಯಲ್ಲಿ ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಮೈತ್ರಿಕೂಟ ಭಾರಿ ಗೆಲುವು ಸಾಧಿಸಿದೆ.
ಒಟ್ಟು ೧,೦೭೯ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಶಿವಸೇನೆ (ಉದ್ಧವ್ ಠಾಕ್ರೆ ಬಣ), ಕಾಂಗ್ರೆಸ್ ಹಾಗೂ ಎನ್‌ಸಿಪಿ ಒಳಗೊಂಡ ಮಹಾ ವಿಕಾಸ್ ಅಘಾಡಿ ೪೬೪ ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಬಿಜೆಪಿ ಹಾಗೂ ಏಕನಾಥ್ ಶಿಂಧೆ ಶಿವಸೇನೆ ಬಣ ಒಳಗೊಂಡ ಎನ್‌ಡಿಎ ಮೈತ್ರಿಕೂಟವು ೩೫೭ ಸ್ಥಾನಗಳಲ್ಲಿ ಜಯ ಕಂಡಿದೆ. ಆಡಳಿತಾರೂಢ ಎನ್‌ಡಿಎಗಿಂತ ಅಘಾಡಿ ಮೈತ್ರಿಕೂಟವು ೧೦೭ ಅಧಿಕ ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ತಿರುಗೇಟು ನೀಡಿದೆ. ಇತರೆ ಪಕ್ಷಗಳು ೨೫೮ ಸ್ಥಾನಗಳಲ್ಲಿ ಗೆಲುವು ಸಾಧಿಸಿವೆ.
ಇದು ಬಿಜೆಪಿ ಹಾಗೂ ಏಕನಾಥ್ ಶಿಂಧೆ ವಿರುದ್ಧ ಉದ್ಧವ್ ಠಾಕ್ರೆ ಅವರಿಗೆ ಸಿಕ್ಕ ಭಾರಿ ಮುನ್ನಡೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಈಗಾಗಲೇ ಶಿವಸೇನೆಯ ಬಿಲ್ಲು ಹಾಗೂ ಬಾಣದ ಚಿಹ್ನೆ ಪಡೆಯಲು ಉದ್ಧವ್ ಠಾಕ್ರೆ ಹಾಗೂ ಏಕನಾಥ್ ಶಿಂಧೆ ಬಣದ ಮಧ್ಯೆ ತೀವ್ರ ಪೈಪೋಟಿ ನಡೆಯುತ್ತಿದೆ. ಹಾಗಾಗಿ, ಚುನಾವಣೆ ಆಯೋಗವು ಅಂಧೇರಿ ಪೂರ್ವ ವಿಧಾನಸಭೆ ಚುನಾವಣೆ ಮುಗಿಯುವವರೆಗೆ ಎರಡೂ ಬಣಗಳಿಗೆ ಬೇರೆ ಚಿಹ್ನೆ ನೀಡಿದೆ. ಅಂಧೇರಿ ಪೂರ್ವ ಕ್ಷೇತ್ರದಲ್ಲಿ ಬಿಜೆಪಿಯು ತನ್ನ ಅಭ್ಯರ್ಥಿ ಹಿಂಪಡೆದಿರುವುದು ಕೂಡ ಉದ್ಧವ್ ಠಾಕ್ರೆಗೆ ಮುನ್ನಡೆ ಉಂಟಾದಂತೆ ಎಂದೇ ಹೇಳಲಾಗುತ್ತಿದೆ.
ಹೀಗಿದೆ ಗೆಲುವಿನ ಲೆಕ್ಕಾಚಾರ
ಮಹಾ ವಿಕಾಸ್ ಅಘಾಡಿ
ಎನ್‌ಸಿಪಿ- ೧೫೭
ಶಿವಸೇನೆ- ೧೫೫
ಕಾಂಗ್ರೆಸ್- ೧೫೨
ಒಟ್ಟು- ೪೬೪
ಎನ್‌ಡಿಎ ಮೈತ್ರಿಕೂಟ
ಬಿಜೆಪಿ- ೨೪೪
ಶಿವಸೇನೆ- ೧೧೩
ಒಟ್ಟು- ೩೫೭
ಇದನ್ನೂ ಓದಿ | ವಿಸ್ತಾರ Explainer: ಶಿವ ಸೇನೆ ಚಿಹ್ನೆ ʼಬಿಲ್ಲು ಬಾಣʼ ಯಾರ ಬತ್ತಳಿಕೆಗೆ ಹೋಗಲಿದೆ?