Site icon Vistara News

Bihar Caste Census: ಬಿಹಾರ ಜಾತಿ ಸಮೀಕ್ಷೆ ವರದಿ ಬಿಡುಗಡೆ: ಹಿಂದುಳಿದ 27.12, ಅತಿ ಹಿಂದುಳಿದ ಜಾತಿ 36.01 ಶೇ.

bihar caste census

ಪಟನಾ: 2024ರ ಲೋಕಸಭೆ ಚುನಾವಣೆಗೆ (Assembly Election) ಮುನ್ನ ಬಿಹಾರ ಸರ್ಕಾರ ಜಾತಿ ಆಧಾರಿತ ಸಮೀಕ್ಷೆಯ (Bihar caste census) ವರದಿಯನ್ನು ಬಿಡುಗಡೆ ಮಾಡಿದೆ. ಈ ವರದಿಯ ಪ್ರಕಾರ, ರಾಜ್ಯದಲ್ಲಿ ಹಿಂದುಳಿದ ಸಮುದಾಯದ ಜನ 63% ಹಾಗೂ ಸಾಮಾನ್ಯ ವರ್ಗದ ಜನ 15.52% ಇದ್ದಾರೆ.

ಸಮೀಕ್ಷೆಯ ಪ್ರಕಾರ ಅತ್ಯಂತ ಹಿಂದುಳಿದ ಜಾತಿಯ ಜನ (extremely backward caste – EBC) 36.01%, ಹಿಂದುಳಿದ ಸಮುದಾಯ (Other Backward Caste – OBC) 27.12% ಮತ್ತು ಸಾಮಾನ್ಯ ವರ್ಗ 15.52% ಇದ್ದಾರೆ. ಪರಿಶಿಷ್ಟ ಜಾತಿಯವರು 19.65% ಮತ್ತು ಪರಿಶಿಷ್ಟ ಪಂಗಡದವರು 1.68% ಇದ್ದಾರೆ. OBCಗಳಲ್ಲಿ ಯಾದವರು 14.26%ರಷ್ಟಿದ್ದರೆ, ಕುಶ್ವಾಹಾ ಮತ್ತು ಕುರ್ಮಿಗಳು ಕ್ರಮವಾಗಿ 4.27% ಮತ್ತು 2.87% ಜನಸಂಖ್ಯೆಯನ್ನು ಹೊಂದಿದ್ದಾರೆ. ಭೂಮಿಹಾರ್‌ಗಳು 2.86 ಪ್ರತಿಶತ, ಬ್ರಾಹ್ಮಣರು 3.66 ಪ್ರತಿಶತ, ಮುಸಾಹರ್‌ಗಳು 3 ಪ್ರತಿಶತ ಇದ್ದಾರೆ.

ರಾಜ್ಯದಲ್ಲಿ ಒಟ್ಟು 13,07,25,310 ಜನಸಂಖ್ಯೆಯಿದೆ. ಮೀಸಲಾತಿಯಿಂದ ಹೊರಗಿರುವ ಜನಸಂಖ್ಯೆ 15.52% ಎಂದು ಬಿಹಾರ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಿವೇಕ್ ಕುಮಾರ್ ಸಿಂಗ್ ಮಾಹಿತಿ ನೀಡಿದ್ದಾರೆ. ಬಿಹಾರ ಸರ್ಕಾರ ಈ ವರ್ಷದ ಜನವರಿಯಲ್ಲಿ ಜಾತಿ ಸರ್ವೆ ಮಾಡಿಸಿತ್ತು. ಜಾತಿ ಗಣತಿಗಾಗಿ 500 ಕೋಟಿ ರೂ. ಖರ್ಚು ಮಾಡಿತ್ತು.

ರಾಜ್ಯದಾದ್ಯಂತ ಸುಮಾರು 2.64 ಲಕ್ಷ ಗಣತಿದಾರರು 2.9 ಕೋಟಿ ನೋಂದಾಯಿತ ಕುಟುಂಬಗಳ ವಿವರಗಳನ್ನು 17 ಸಾಮಾಜಿಕ ಆರ್ಥಿಕ ಮಾನದಂಡಗಳ ಮೇಲೆ ದಾಖಲಿಸಿದ್ದಾರೆ- ಜಾತಿ, ಉದ್ಯೋಗ, ಶಿಕ್ಷಣ, ವೈವಾಹಿಕ ಸ್ಥಿತಿ, ಭೂಮಿ ಹಿಡುವಳಿ, ಆಸ್ತಿ ಮಾಲೀಕತ್ವ, ಇತ್ಯಾದಿ. ಮೊದಲ ಹಂತದ ಸಮೀಕ್ಷೆಯಲ್ಲಿ ಮನೆಗಳನ್ನು ಗುರುತಿಸುವುದು, ಕುಟುಂಬದ ಸದಸ್ಯರು ಮತ್ತು ಅವರ ಮುಖ್ಯಸ್ಥರ ಹೆಸರನ್ನು ನೋಟ್ ಮಾಡುವುದು, ಎರಡನೇ ಹಂತದ ಸಮೀಕ್ಷೆಯಲ್ಲಿ ಜಾತಿ ಸೇರಿದಂತೆ 17 ಅಂಶಗಳ ಸಾಮಾಜಿಕ- ಆರ್ಥಿಕ ಸೂಚಕಗಳನ್ನು ಭರ್ತಿ ಮಾಡುವುದು ನಡೆದಿದೆ.

ಜಾತಿ ಆಧಾರಿತ ಸಮೀಕ್ಷೆಯನ್ನು ಕೆಲವು ರಾಜಕೀಯ ಪಕ್ಷಗಳು ಆಕ್ಷೇಪಿಸಿದ್ದು, ಕಾನೂನು ಸವಾಲು ಕೂಡ ಹಾಕಿದ್ದವು. ಆದರೆ ಸಾಮಾಜಿಕ ನ್ಯಾಯಕ್ಕಾಗಿ ಈ ಸಮೀಕ್ಷೆಯು ನಿರ್ಣಾಯಕ ಎಂದು ಬಿಹಾರ ಸರ್ಕಾರ ಸಮರ್ಥಿಸಿಕೊಂಡಿದೆ. ಸುಪ್ರೀಂ ಕೋರ್ಟ್ (Supreme court) ಜಾತಿಗಣತಿ ಮುಂದುವರಿಸಲು ಆಸ್ಪದ ನೀಡಿತ್ತು.

ಜಾತಿ ಸಮೀಕ್ಷೆ ವರದಿಗೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ (Bihar CM Nitish Kumar) ಪ್ರತಿಕ್ರಿಯಿಸಿದ್ದಾರೆ. ʼʼಇಂದು ಗಾಂಧಿ ಜಯಂತಿಯ ಶುಭ ಸಂದರ್ಭದಲ್ಲಿ ಬಿಹಾರದಲ್ಲಿ ನಡೆದ ಜಾತಿವಾರು ಜನಗಣತಿಯ ಅಂಕಿಅಂಶಗಳನ್ನು ಪ್ರಕಟಿಸಲಾಗಿದ್ದು, ಈ ಕಾರ್ಯದಲ್ಲಿ ತೊಡಗಿರುವ ಇಡೀ ತಂಡಕ್ಕೆ ಅಭಿನಂದನೆಗಳು. ಜಾತಿ ಆಧಾರಿತ ಜನಗಣತಿಯು ಜಾತಿಗಳನ್ನು ಬಹಿರಂಗಪಡಿಸುವುದು ಮಾತ್ರವಲ್ಲದೆ ಪ್ರತಿಯೊಬ್ಬರ ಆರ್ಥಿಕ ಸ್ಥಿತಿಯ ಬಗ್ಗೆಯೂ ಮಾಹಿತಿಯನ್ನು ನೀಡುತ್ತದೆ. ಈ ವರದಿಯ ಆಧಾರದ ಮೇಲೆ ಎಲ್ಲ ವರ್ಗಗಳ ಅಭಿವೃದ್ಧಿ ಮತ್ತು ಉನ್ನತಿಗೆ ಮುಂದಿನ ಕ್ರಮ ಕೈಗೊಳ್ಳಲಾಗುವುದು” ಎಂದಿದ್ದಾರೆ.

ಇದನ್ನೂ ಓದಿ: Caste Census: ರಾಜ್ಯಗಳಿಗೆ ಜಾತಿಗಣತಿಯ ಅಧಿಕಾರವೇ ಇಲ್ಲ ಎಂದ ಕೇಂದ್ರ; ಬಿಹಾರ ಜಾತಿಗಣತಿಗೆ ಸುಪ್ರೀಂ ತಡೆ?

Exit mobile version