Site icon Vistara News

Bihar Caste Survey: ಬಿಹಾರ ಜಾತಿ ಸಮೀಕ್ಷೆ ಎತ್ತಿ ಹಿಡಿದ ಪಟನಾ ಹೈಕೋರ್ಟ್

bihar cm nitish kumar

ಪಟನಾ: ಬಿಹಾರದ ಜಾತಿ ಸಮೀಕ್ಷೆಯನ್ನು (Bihar Caste Survey) ಪಟನಾ ಹೈಕೋರ್ಟ್ (patna high court) ಮಂಗಳವಾರ ಎತ್ತಿ ಹಿಡಿದಿದೆ. ಬಿಹಾರ ಸರ್ಕಾರವು ಈ ವರ್ಷದ ಜನವರಿಯಲ್ಲಿ ಮೊದಲ ಹಂತದ ಎಣಿಕೆ ಕಾರ್ಯವನ್ನು ಕೈಗೆತ್ತಿಕೊಂಡಿದ್ದು, ಎರಡು ಹಂತಗಳಲ್ಲಿ ಸಮೀಕ್ಷೆ ನಡೆಸಲು ತೀರ್ಮಾನಿಸಲಾಗಿತ್ತು.

ಮುಖ್ಯ ನ್ಯಾಯಮೂರ್ತಿ ಕೆ. ವಿನೋದ್ ಚಂದ್ರನ್ ಮತ್ತು ನ್ಯಾ. ಪಾರ್ಥಸಾರಥಿ ಅವರಿದ್ದ ಪೀಠವು ಜಾತಿ ಆಧಾರಿತ ಸಮೀಕ್ಷೆಯನ್ನು ಪ್ರಶ್ನಿಸಿದ್ದ ಹಲವು ಅರ್ಜಿಗಳ ವಿಚಾರಣೆ ನಡೆಸಿ ಈ ತೀರ್ಪು ನೀಡಿದೆ. ಪ್ರಸ್ತುತ ತೀರ್ಪು, ಬಿಹಾರದ ನಿತೀಶ್‌ ಕುಮಾರ್ (CM Nitish Kumar) ಸರ್ಕಾರಕ್ಕೆ ಸಂದ ಗೆಲುವಾಗಿದೆ.

ಪಟನಾ ಹೈಕೋರ್ಟ್ ಈ ವರ್ಷದ ಮೇ ತಿಂಗಳಲ್ಲಿ ಜಾತಿ ಸಮೀಕ್ಷೆಯನ್ನು ತಡೆಹಿಡಿದಿತ್ತು. ಇದುವರೆಗೆ ಸಂಗ್ರಹಿಸಿದ ಡೇಟಾವನ್ನು ಸಂರಕ್ಷಿಸುವಂತೆ ಅಧಿಕಾರಿಗಳಿಗೆ ಸೂಚಿಸಿತ್ತು. 1948ರ ಜನಗಣತಿ ಕಾಯಿದೆಯಡಿಯಲ್ಲಿ ಕೇಂದ್ರ ಸರ್ಕಾರಕ್ಕೆ ಮಾತ್ರ ಜನಗಣತಿಯ ವಿಶೇಷ ಅಧಿಕಾರವಿದೆ ಎಂದು ನ್ಯಾಯಾಲಯವು ಗಮನಿಸಿತ್ತು. ಈ ತಡೆಯಾಜ್ಞೆಯನ್ನು ತೆರವು ಮಾಡಲು ಸುಪ್ರೀಂ ಕೋರ್ಟ್‌ ಕೂಡ ನಿರಾಕರಿಸಿತ್ತು.

ಕೆಲವು ಸಾಮಾಜಿಕ ಸಂಘಟನೆ ಮತ್ತು ಕೆಲವು ವ್ಯಕ್ತಿಗಳು ಸಮೀಕ್ಷೆಯನ್ನು ತಡೆಹಿಡಿಯುವಂತೆ ಮೊದಲು ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು. ಸುಪ್ರೀಂ ಕೋರ್ಟ್‌, ಇವುಗಳನ್ನು ಹೈಕೋರ್ಟ್‌ಗೆ ಕಳುಹಿಸಿತ್ತು. ಬಿಹಾರದ ಪ್ರಜೆಗಳ ಆರ್ಥಿಕ ಸ್ಥಿತಿ ಮತ್ತು ಜಾತಿ ಎರಡರಲ್ಲೂ ದತ್ತಾಂಶವನ್ನು ಸಂಗ್ರಹಿಸಲು ಈ ಸಮೀಕ್ಷೆ ಮುಂದಾಗಿದೆ.

ಇದನ್ನೂ ಓದಿ: ಪ್ರತಿಪಕ್ಷಗಳ ಮೈತ್ರಿಕೂಟದಲ್ಲಿ ಬಿರುಕು ತರಲಿದೆಯಾ INDIA; ಬಿಹಾರ ಸಿಎಂ ನಿತೀಶ್​ ಕುಮಾರ್​ ನಿಲುವೇನು?

Exit mobile version