ಪಟನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಪ್ರಯಾಣ ಮಾಡುತ್ತಿದ್ದ ಹೆಲಿಕಾಪ್ಟರ್ ಗಯಾದಲ್ಲಿ ತುರ್ತು ಲ್ಯಾಂಡ್ ಆಗಿದೆ. ಸಿಎಂ ನಿತೀಶ್ ಕುಮಾರ್ ಅವರು ರಾಜ್ಯದ ಬರ ಪರಿಸ್ಥಿತಿ ಸಮೀಕ್ಷೆಗೆಂದು ಹೊರಟಿದ್ದರು. ಆದರೆ ಹವಾಮಾನ ಪ್ರತಿಕೂಲ ಇದ್ದ ಕಾರಣ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ ಕಂಡಿದೆ. ಬಿಹಾರದಲ್ಲಿ ಜೆಡಿಯು-ಆರ್ಜೆಡಿ -ಕಾಂಗ್ರೆಸ್ ಮೈತ್ರಿಯ ಮಹಾ ಘಟ್ ಬಂಧನ್ ಸರ್ಕಾರ ಇತ್ತೀಚೆಗಷ್ಟೇ ಅಧಿಕಾರಕ್ಕೆ ಬಂದಿದೆ. ನಿತೀಶ್ ಕುಮಾರ್ 8ನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಸಂಪುಟವೂ ರಚನೆಯಾಗಿದೆ. ಹೀಗೆ ಮಹಾ ಘಟ್ ಬಂಧನ್ ಸರ್ಕಾರ ಸ್ವಲ್ಪ ಸ್ಥಿರತೆಗೆ ಬರುತ್ತಿದ್ದಂತೆ ಅವರು, ತಮ್ಮ ಮುಖ್ಯಮಂತ್ರಿ ಕರ್ತವ್ಯಕ್ಕೆ ಮರಳಿದ್ದಾರೆ.
ಬಿಹಾರದಲ್ಲಿ ಮುಂಗಾರು ಕೈಕೊಟ್ಟಿದೆ. ಸಾಮಾನ್ಯಕ್ಕಿಂತಲೂ ಶೇ.40ರಷ್ಟು ಕಡಿಮೆ ಮಳೆ ಬಿದ್ದ ಕಾರಣ ಇಡೀ ರಾಜ್ಯದಲ್ಲಿ ಬರಪರಿಸ್ಥಿತಿ ಎದುರಾಗಿದೆ. ರಾಜ್ಯದ ಯಾವ ಭಾಗದಲ್ಲಿ ಯಾವ ಪರಿಸ್ಥಿತಿಯಿದೆ? ಬರ ಎಷ್ಟು ಗಂಭೀರವಾಗಿದೆ ಎಂಬುದನ್ನು ಪರಿಶೀಲನೆ ಮಾಡುವ ಸಲುವಾಗಿ ಇಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಹೊರಟಿದ್ದರು. ಅವರು ಹೆಲಿಕಾಪ್ಟರ್ ಮೂಲಕವೇ ಸಮೀಕ್ಷೆ ನಡೆಸುವುದಿತ್ತು. ಆದರೆ ಹವಾಮಾನ ಪರಿಸ್ಥಿತಿ ಸರಿಯಾಗಿ ಇಲ್ಲದ ಕಾರಣಕ್ಕೆ ಹೆಲಿಕಾಪ್ಟರ್ನ್ನು ಗಯಾದಲ್ಲಿ ಎಮರ್ಜನ್ಸಿ ಲ್ಯಾಂಡ್ ಮಾಡಿಸಲಾಗಿದೆ.
ಆಗಸ್ಟ್ 29ಕ್ಕೆ ರಾಷ್ಟ್ರೀಯ ಕಾರ್ಯಕಾರಿಣಿ
ಎನ್ಡಿಎ ಮೈತ್ರಿಕೂಟ ತೊರೆದಿರುವ ಜೆಡಿಯು ಪಕ್ಷ ಆಗಸ್ಟ್ 29ರಂದು ರಾಷ್ಟ್ರೀಯ ಕಾರ್ಯಕಾರಿಣಿ ಆಯೋಜಿಸಿದೆ. ಬಿಜೆಪಿ ತೊರೆದು, ಆರ್ಜೆಡಿ-ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡ ಬಳಿಕ ಜೆಡಿಯು ನಡೆಸುತ್ತಿರುವ ಮೊದಲ ಕಾರ್ಯಕಾರಿಣಿ ಇದಾಗಿದ್ದು, ಬಿಹಾರದಲ್ಲಿ ಸದ್ಯ ಇರುವ ರಾಜಕೀಯ ಸ್ಥಿತಿ-ಗತಿಯನ್ನು ಇಲ್ಲಿ ಚರ್ಚೆ ಮಾಡಲಾಗುತ್ತದೆ.
ಇದನ್ನೂ ಓದಿ: Bihar Politics | 8ನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ನಿತೀಶ್ ಕುಮಾರ್