Site icon Vistara News

ಬೀಗ ಹಾಕಿದ ಕೋಣೆಯಲ್ಲಿ ಕಮರಿತು ಮಕ್ಕಳ ಶಿಕ್ಷಣದ ಕನಸು; ಮನುಷ್ಯತ್ವ ಇಲ್ಲದ ಮಾಲೀಕ

Bihar Children Forced To Make Bangles In Jaipur Of Rajasthan

#image_title

7-11ವರ್ಷದ ಬಡ ಮಕ್ಕಳಿಗೆ ಶಿಕ್ಷಣದ ಆಸೆ ತೋರಿಸಿ, ಅವರನ್ನು ಒಂದು ಚಿಕ್ಕ ಕೋಣೆಯಲ್ಲಿ ಕೂಡಿ, ದಿನಕ್ಕೆ 18ತಾಸು ದುಡಿಸಿಕೊಳ್ಳುತ್ತಿದ್ದ ಜಾಲವನ್ನು ಬೇಧಿಸಲಾಗಿದೆ. ಜೂ.11ರಂದು ಎಲ್ಲ ಮಕ್ಕಳನ್ನೂ ರಕ್ಷಣೆ ಮಾಡಲಾಗಿದೆ. ಇದು ರಾಜಸ್ಥಾನದ ಜೈಪುರದಲ್ಲಿ ನಡೆದ ಘಟನೆ. ಜೈಪುರದ ಬಳೆ ತಯಾರಿಕಾ ಘಟಕದ ಮಾಲೀಕ ಮತ್ತು ಅಲ್ಲಿನ ಸಿಬ್ಬಂದಿಯದ್ದು ಇದೇ ದಂಧೆಯಾಗಿತ್ತು. ಬಿಹಾರದ ಬಡಮಕ್ಕಳನ್ನು, ಶಿಕ್ಷಣ ಕೊಡಿಸುತ್ತೇವೆ. ಅಷ್ಟೇ ಅಲ್ಲ, ಸೂಕ್ತ ವಯಸ್ಸಿಗೆ ಬರುತ್ತಿದ್ದಂತೆ ಒಂದೊಳ್ಳೆ ಉದ್ಯೋಗವನ್ನೂ ಕೊಡಿಸುತ್ತೇವೆ ಎಂದು ಆಮಿಷವೊಡ್ಡಿ ಜೈಪುರಕ್ಕೆ ಕರೆದುಕೊಂಡು ಬರುತ್ತಿದ್ದರು. ಬಳಿಕ ಬಳೆ ತಯಾರಿಕಾ ಘಟಕದಲ್ಲಿ, ಒಂದು ಪುಟ್ಟದಾದ, ಉಸಿರಾಟವೂ ಕಷ್ಟವಾದ ಕೋಣೆಯಲ್ಲಿ ಎಲ್ಲ ಮಕ್ಕಳನ್ನೂ ತುಂಬಿ (Children Forced To Make Bangles), ಅವರನ್ನು ದಿನಕ್ಕೆ 18 ತಾಸು ದುಡಿಸಿಕೊಳ್ಳುತ್ತಿದ್ದರು.

10 ಅಡಿ ಉದ್ದ, 10 ಅಡಿ ಅಗಲದ ಕೋಣೆಯಲ್ಲಿ, 18 ತಾಸು ಅಲುಗಾಡದಂತೆ ಕುಳಿತ ಮಕ್ಕಳು ಬಳೆ ತಯಾರಿಕೆ ಮಾಡುತ್ತಿದ್ದರು. ಅವರಿಗೆ ಒಂದು ನಯಾಪೈಸೆ ಹಣವನ್ನೂ ಮಾಲೀಕ ನೀಡುತ್ತಿರಲಿಲ್ಲ. ಬದಲಿಗೆ ಚಿತ್ರಹಿಂಸೆಯನ್ನೇ ಕೊಡುತ್ತಿದ್ದ. ಯಾರಿಗಾದರೂ ಹುಷಾರಿಲ್ಲ ಎಂದು ಹೇಳಿದರೂ ಸಾಕು ಹೊಡೆಯುತ್ತಿದ್ದ. ಇನ್ನು ದೂರು ಕೊಟ್ಟರೆ ಉಳಿಸುವುದಿಲ್ಲ ಎಂದು ಬೆದರಿಕೆಯನ್ನೂ ಹಾಕಿದ್ದ ಎಂದು, ಈಗ ಅಲ್ಲಿಂದ ರಕ್ಷಿಸಲ್ಪಟ್ಟ ಮಕ್ಕಳೇ ಮಾಧ್ಯಮಗಳ ಎದುರು ಹೇಳಿಕೊಂಡಿದ್ದಾರೆ.

ಹೀಗೆ ಬಿಹಾರದಿಂದ ಕರೆದುಕೊಂಡು ಬಂದ ಮಕ್ಕಳನ್ನು ಜೈಪುರದ ಬಳೆ ತಯಾರಿಕಾ ಘಟಕದ, ಪುಟ್ಟದಾದ ಕೋಣೆಯಲ್ಲಿ ದುಡಿಸಿಕೊಳ್ಳುತ್ತಿರುವ ಬಗ್ಗೆ ರಾಜಸ್ಥಾನ ಮಕ್ಕಳ ಕಲ್ಯಾಣ ಸಮಿತಿಗೆ ಮಾಹಿತಿ ಸಿಕ್ಕಿತ್ತು. ಹೀಗಾಗಿ ಆ ಮಕ್ಕಳ ಕಲ್ಯಾಣ ಕಮಿಟಿ, ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆಗಾಗಿ ಇರುವ ನಯಾ ಸವೇರಾ ಎಂಬ ಎನ್​ಜಿಒದೊಟ್ಟಿಗೆ ಸೇರಿಕೊಂಡು ಮಕ್ಕಳನ್ನು ರಕ್ಷಣೆ ಮಾಡಿದೆ.

ಇದನ್ನೂ ಓದಿ: Vijayanagara News: ಕೊಟ್ಟೂರಿನಲ್ಲಿ ಶಾಲಾ ಬಸ್‌ಗೆ ಬೆಂಕಿ; 40 ಮಕ್ಕಳು, ಶಿಕ್ಷಕರು ಪ್ರಾಣಾಪಾಯದಿಂದ ಪಾರು

ಈ ಬಗ್ಗೆ ಮಾಹಿತಿ ನೀಡಿದ ಎನ್​ಜಿಒ ಸದಸ್ಯ ‘ಮಕ್ಕಳನ್ನು ದುಡಿಮೆಗೆ ನೂಕಿದ ಬಗ್ಗೆ ಮಾಹಿತಿ ಬರುತ್ತಿದ್ದಂತೆ ನಾವು ಆ ಬಳೆ ತಯಾರಿಕಾ ಘಟಕ ಇರುವ ಕಟ್ಟಡಕ್ಕೆ ಹೋದೆವು. ಮೂರು ಅಂತಸ್ತಿನ ಆ ಕಟ್ಟಡದ ಎಲ್ಲ ಬಾಗಿಲುಗಳೂ ಮುಚ್ಚಿದ್ದವು. ಲಾಕ್ ಆಗಿತ್ತು. ನಮ್ಮ ಜತೆಗೆ ಪೊಲೀಸರೂ ಇದ್ದರು. ಈ ಕಟ್ಟಡದ ಬಾಗಿಲು ಎಂದೂ ತೆರೆಯುತ್ತಿರಲಿಲ್ಲ. ಮಕ್ಕಳು ಸದಾ ಈ ಕಟ್ಟಡದಲ್ಲಿಯೇ ಇರುತ್ತಿದ್ದರು. ಮಾಲೀಕರು, ಇತರ ಸಿಬ್ಬಂದಿ ಕಿಟಕಿಯ ಮೂಲಕವೇ ಒಳ/ಹೊರಗೆ ತಿರುಗುತ್ತಿದ್ದರು. ನಾವು ಹೋಗುತ್ತಿದ್ದಂತೆ ಘಟಕದ ಮಾಲೀಕ ಗುಡ್ಡು ತಪ್ಪಿಸಿಕೊಂಡ. ಆದರೆ ಈ ಕೇಸ್​ ತನಿಖೆಯನ್ನು ಪೊಲೀಸರು ನಡೆಸುತ್ತಿದ್ದಾರೆ. ಕಟ್ಟಡದಿಂದ 26 ಜನರನ್ನು ರಕ್ಷಿಸಲಾಗಿದೆ. ಅದರಲ್ಲಿ 22 ಮಂದಿ ಮಕ್ಕಳೇ ಆಗಿದ್ದಾರೆ. ಅದೂ ಕೂಡ 7-11 ವರ್ಷದ ಮಕ್ಕಳು’ ಎಂದು ತಿಳಿಸಿದ್ದಾರೆ.

Exit mobile version