Site icon Vistara News

ಪ್ರತಿಪಕ್ಷಗಳ ಮೈತ್ರಿಕೂಟದಲ್ಲಿ ಬಿರುಕು ತರಲಿದೆಯಾ INDIA; ಬಿಹಾರ ಸಿಎಂ ನಿತೀಶ್​ ಕುಮಾರ್​ ನಿಲುವೇನು?

Nitish Kumar

2024ರ ಲೋಕಸಭೆ ಚುನಾವಣೆಯಲ್ಲಿ (2024 Lok Sabha Election) ಬಿಜೆಪಿಯನ್ನು ಹೇಗಾದರೂ ಸೋಲಿಸಬೇಕು ಎಂದು ಫಣತೊಟ್ಟ ಪ್ರತಿಪಕ್ಷಗಳೆಲ್ಲ ಸೇರಿ ಮೈತ್ರಿಕೂಟ ರಚಿಸಿಕೊಂಡು ಎರಡು ಸಭೆಗಳನ್ನೂ ನಡೆಸಿಯಾಯ್ತು. ಜುಲೈ 18ರಂದು ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಪ್ರತಿಪಕ್ಷಗಳ ಮೈತ್ರಿಕೂಟಕ್ಕೆ INDIA (Indian National Developmental Inclusive Alliance) ಎಂದು ನಾಮಕರಣ ಮಾಡಿದ್ದಾರೆ. ಆದರೆ ಈಗ INDIA ಎಂಬ ಹೆಸರಿನ ಬಗ್ಗೆ ವಿವಿಧ ಆಯಾಮದ ಚರ್ಚೆಗಳು ಹುಟ್ಟುಕೊಂಡಿವೆ. ಇತ್ತ ಬಿಜೆಪಿ ನಾಯಕರು BJP For Bharat ಎನ್ನುತ್ತಿದ್ದಾರೆ.

ಪ್ರತಿಪಕ್ಷಗಳ ಒಕ್ಕೂಟಕ್ಕೆ ಯುಪಿಎ ಬೇಡ ಅದರ ಬದಲು ಇನ್ಯಾವುದಾದರೂ ಹೆಸರಿಡಬೇಕು ಎಂಬ ಚರ್ಚೆ ಶುರುವಾದಾಗ ಹಲವು ಹೆಸರುಗಳು ಕೇಳಿಬಂದವು. ಅಂತಿಮವಾಗಿ INDIA ಹೆಸರನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೂಚಿಸಿ, ಅದನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ, ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಅನುಮೋದಿಸಿದ್ದಾರೆ. ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ಹೆಸರನ್ನು ಘೋಷಣೆ ಮಾಡಲಾಗಿದೆ. ಆದರೆ ಈ ಹೆಸರು ಘೋಷಣೆಯಾಗುತ್ತಿದ್ದಂತೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಶಾಕ್ ಆಗಿದ್ದರು. ಪ್ರತಿಪಕ್ಷಗಳ ಒಕ್ಕೂಟಕ್ಕೆ INDIA ಹೆಸರು ಇಡುವುದರ ಬಗ್ಗೆ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದ್ದಾಗಿ ಇಂಡಿಯಾ ಟುಡೆ ಮಾಧ್ಯಮ ವರದಿ ಮಾಡಿದೆ.

ಇದನ್ನೂ ಓದಿ: Opposition Unity: ಪ್ರತಿಪಕ್ಷಗಳ ಒಗ್ಗಟ್ಟಿಗಾಗಿ ಕಾಂಗ್ರೆಸ್ ಅಧ್ಯಕ್ಷ ಖರ್ಗೆಯನ್ನು ಭೇಟಿ ಮಾಡಲಿದ್ದಾರೆ ಬಿಹಾರ ಸಿಎಂ ನಿತೀಶ್

ಅಷ್ಟಕ್ಕೂ ಎನ್​ಡಿಎ ಒಕ್ಕೂಟದಿಂದ ಹೊರಬಿದ್ದ ಬಳಿಕ ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಅವರೇ ಮುಂಚೂಣಿಯಲ್ಲಿ ನಿಂತು ಪ್ರತಿಪಕ್ಷಗಳನ್ನು ಒಗ್ಗೂಡಿಸುವ ಕೆಲಸ ಮಾಡಿದ್ದಾರೆ. ಆದರೆ ನಂತರ ಕಾಂಗ್ರೆಸ್ ಲೀಡರ್​ಶಿಪ್​​ನ್ನು ಕಬಳಿಸಿಕೊಂಡಿದೆ. ನಿನ್ನೆಯೂ ಅಷ್ಟೇ, INDIA ಹೆಸರನ್ನು ಘೋಷಿಸುವುದಕ್ಕೂ ಮೊದಲು ನಿತೀಶ್ ಕುಮಾರ್ ಮತ್ತು ಇತರ ನಾಯಕರೊಂದಿಗೆ ಕಾಂಗ್ರೆಸ್ ಚರ್ಚಿಸಲಿಲ್ಲ ಎಂದು ಹೇಳಲಾಗಿದೆ. INDIA ಹೆಸರನ್ನು ಪ್ರತಿಪಕ್ಷಗಳ ಒಕ್ಕೂಟಕ್ಕೆ ಇಡಲು ಹೇಗೆ ಸಾಧ್ಯ ಎಂದು ನಿತೀಶ್ ಕುಮಾರ್​ ಪ್ರಶ್ನೆ ಮಾಡಿದ್ದಾರೆ ಎನ್ನಲಾಗಿದೆ.

ಬಿಜೆಪಿ ಕೂಡ ಈ INDIA ಹೆಸರನ್ನು ಟೀಕಿಸುತ್ತಿದೆ. ಮುಂದಿನ ಲೋಕಸಭೆ ಚುನಾವಣೆ ಭಾರತ್​ ಮಾತಾ ವರ್ಸಸ್​ ಇಂಡಿಯಾ ನಡುವೆ ನಡೆಯಲಿದೆ ಎಂದು ಹೇಳಿದೆ. ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಅವರು ತಮ್ಮ ಟ್ವಿಟರ್​ ಬಯೋದಲ್ಲಿ ಇದ್ದ INDIA ಹೆಸರನ್ನು ತೆಗೆದು Bharat ಎಂದು ಬದಲಿಸಿಕೊಂಡಿದ್ದಾರೆ. ನಿತೀಶ್ ಕುಮಾರ್ ಅವರೇನಾದರೂ ಇದೇ ಹೆಸರಿನ ವಿಷಯಕ್ಕೆ ಭಿನ್ನಾಭಿಪ್ರಾಯವನ್ನು ಬಹಿರಂಗ ಮಾಡುತ್ತಾರಾ ಎಂಬುದನ್ನು ನೋಡಬೇಕಾಗಿದೆ.

Exit mobile version