ಪಟನಾ: ಬಿಹಾರದಲ್ಲಿ ಮದ್ಯ ನಿಷೇಧ ಕಾನೂನು ಜಾರಿಯಲ್ಲಿದೆ. ಆದರೆ, ಕಳ್ಳಬಟ್ಟಿ ಸೇವಿಸಿ, ಸಾವಿಗೀಡಾಗುತ್ತಿರುವವರ ಪ್ರಮಾಣ, ಸಂಭವಿಸುವ ದುರಂತಗಳಿಗೆ (Bihar Hooch Tragedy) ಲೆಕ್ಕವೇ ಇಲ್ಲದಂತಾಗಿದೆ. ಇದಕ್ಕೆ ನಿದರ್ಶನ ಎಂಬಂತೆ, ಬಿಹಾರದ ಮೋತಿಹಾರಿಯಲ್ಲಿ ಕಳ್ಳಬಟ್ಟಿ ಸೇವಿಸಿ 22 ಜನ ಮೃತಪಟ್ಟಿದ್ದು, ಇನ್ನೂ ಹಲವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಪೂರ್ವ ಚಂಪಾರಣ್ ಜಿಲ್ಲೆಯ ಮೋತಿಹಾರಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಳೆದ 24 ಗಂಟೆಯಲ್ಲಿಯೇ ಕಳ್ಳಬಟ್ಟಿ ದುರಂತ ಸಂಭವಿಸಿದೆ. ಲಕ್ಷ್ಮೀಪುರ ಗ್ರಾಮದಲ್ಲಿ ಒಂದಷ್ಟು ಜನ ಕಳ್ಳಬಟ್ಟಿ ಸಾರಾಯಿ ಸೇವಿಸುವ ಪಾರ್ಟಿ ಆಯೋಜಿಸಿದ್ದಾರೆ. ಟ್ಯಾಂಕರ್‌ಗಟ್ಟಲೆ ನಕಲಿ ಮದ್ಯ ಸರಬರಾಜು ಮಾಡಲಾಗಿದೆ. ಇದನ್ನು ಕೇಳಿ ಅಕ್ಕಪಕ್ಕದ ಗ್ರಾಮಸ್ಥರು ಕೂಡ ಪಾರ್ಟಿ ಮಾಡುವ ಜಾಗಕ್ಕೆ ಆಗಮಿಸಿ, ಕಳ್ಳಬಟ್ಟಿ ಸೇವಿಸಿದ್ದಾರೆ. ಇದಾದ ಬಳಿಕ ಸಾವಿನ ಸಂಖ್ಯೆ ಏರುತ್ತಲೇ ಇದೆ ಎಂದು ತಿಳಿದುಬಂದಿದೆ.
ಲೆಕ್ಕಕ್ಕೇ ಸಿಗದ ಸಾವಿನ ಸಂಖ್ಯೆ
ಮೋತಿಹಾರಿ ಪ್ರದೇಶದ ಸುತ್ತಮುತ್ತಲಿನ ಗ್ರಾಮಗಳ ಆರು ಜನ ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆದರೆ, ಕಳ್ಳಬಟ್ಟ ಸೇವನೆಯಿಂದ ಇದುವರೆಗೆ 22 ಜನ ಸಾವಿಗೀಡಾಗಿದ್ದಾರೆ ಎಂದು ಸುತ್ತಮುತ್ತಲಿನ ಗ್ರಾಮಸ್ಥರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಆದಾಗ್ಯೂ, ಅಸ್ವಸ್ಥರಾಗಿರುವ 10ಕ್ಕೂ ಅಧಿಕ ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಮೂಲಗಳು ತಿಳಿಸಿವೆ.
ಮನೆ ಮನೆಗೆ ಕಳ್ಳಬಟ್ಟಿ ಸರಬರಾಜು
ಬಿಹಾರದಲ್ಲಿ 2016ರಿಂದಲೂ ಮದ್ಯ ನಿಷೇಧಗೊಳಿಸಿದ ಕಾರಣ ಕಳ್ಳಬಟ್ಟಿಗೆ ಭಾರಿ ಬೇಡಿಕೆ ಇದೆ. ಕಾಡಿನಲ್ಲಿ ಕಳ್ಳಬಟ್ಟಿ ತಯಾರಿಸಿ, ಜನರಿಗೆ ಪೂರೈಸುವ ದಂಧೆಯೇ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ. “ರಾಜ್ಯದಲ್ಲಿ ಮದ್ಯ ನಿಷೇಧಗೊಳಿಸಿರುವ ಕಾರಣ ಪ್ರತಿಮನೆಗೆ ಕಳ್ಳಬಟ್ಟಿ ಪೂರೈಸುವ ದಂಧೆ ನಡೆಯುತ್ತಿದೆ. ಇದು ಬಹಿರಂಗ ಸತ್ಯವಾಗಿದ್ದರೂ ರಾಜ್ಯ ಸರ್ಕಾರ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ” ಎಂದು ವಿಧಾನ ಪರಿಷತ್ ಸದಸ್ಯ ಅಫಾಕ್ ಅಹ್ಮದ್ ಆರೋಪಿಸಿದ್ದಾರೆ.
ಕಳೆದ ವರ್ಷವಷ್ಟೇ ಬಿಹಾರದ ಸರನ್ ಜಿಲ್ಲೆ ಛಾಪ್ರಾ ಪ್ರದೇಶದಲ್ಲಿ ಕಳ್ಳಬಟ್ಟಿ ಸೇವಿಸಿ 20 ಮಂದಿ ಮೃತಪಟ್ಟಿದ್ದರು. ಛಾಪ್ರಾ ಪ್ರದೇಶದಲ್ಲಿ ಕಳ್ಳಬಟ್ಟಿ ಸೇವಿಸಿ 20 ಮಂದಿ ಮೃತಪಟ್ಟಿರುವ ಕುರಿತು ವಿಧಾನಸಭೆಯಲ್ಲಿ ಪ್ರತಿಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದವು. ಬಿಜೆಪಿ ಶಾಸಕರು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ವಿರುದ್ಧ ಸದನದಲ್ಲಿ ಪ್ರತಿಭಟನೆ ನಡೆಸಿದ್ದರು. ಗದ್ದಲ, ಗಲಾಟೆಯನ್ನು ಕಂಡ ನಿತೀಶ್ ಕುಮಾರ್, “ನೀವು ಮದ್ಯಪಾನ ಮಾಡಿ ಇಲ್ಲಿಗೆ ಬಂದಿದ್ದೀರಾ” ಎಂದು ಪ್ರಶ್ನಿಸಿದ್ದರೆ. ಹೀಗೆ ಹೇಳಿದ ಬಳಿಕ ಗಲಾಟೆ ಇನ್ನಷ್ಟು ಜೋರಾಗಿತ್ತು.