ಪಾಟ್ನಾ, ಬಿಹಾರ: ಗೋಮಾಂಸ ತೆಗೆದುಕೊಂಡು ಹೋಗುತ್ತಿದ್ದಾನೆಂದು ಆರೋಪಿಸಿ ಬಿಹಾರದ ಸಿವಾನ್ ಜಿಲ್ಲೆಯಲ್ಲಿ 56 ವಯಸ್ಸಿನ ಮುಸ್ಲಿಮ್ ವ್ಯಕ್ತಿಯ ಮೇಲೆ ಸಾಮೂಹಿಕ ಹಲ್ಲೆ ನಡೆದಿತ್ತು. ತೀವ್ರ ಗಾಯಗೊಂಡಿದ್ದ ಆ ವ್ಯಕ್ತಿ ಕಳೆದ ಮಂಗಳವಾರ ಮೃತಪಟ್ಟಿದ್ದು, ಘಟನೆಗೆ ಸಂಬಂಧಿಸಿದಂತೆ ಬಿಹಾರ ಪೊಲೀಸರು ಮೂವರನ್ನು ಬಂಧಿಸಿದ್ದಾರೆ(Bihar beef lynching).
ಹಸನ್‌ಪುರ ಗ್ರಾಮದ ನಿವಾಸಿ 56 ವರ್ಷದ ನಸೀಮ್ ಖುರೇಷಿ ಮತ್ತು ಅವರ ಸೋದರಳಿಯ ಫಿರೋಜ್ ಅಹ್ಮದ್ ಖುರೇಷಿ ಅವರು ಕೆಲವು ಪರಿಚಯಸ್ಥರನ್ನು ಭೇಟಿಯಾಗಲು ಹೋಗುತ್ತಿದ್ದರು. ಜೋಗಿಯಾ ಗ್ರಾಮದಲ್ಲಿ ಇವರಿಬ್ಬರನ್ನು ಅಡ್ಡಗಟ್ಟಿದ ಗುಂಪು ಹಲ್ಲೆ ನಡೆಸಿದೆ ಎಂದು ಸರನ್ ಎಸ್‌ಪಿ ಗೌರವ್ ಮಂಗಳ್ ತಿಳಿಸಿದ್ದಾರೆ. ಈ ಘಟನೆಯು ಪಾಟ್ನಾದಿಂದ ವಾಯವ್ಯಕ್ಕೆ 110 ಕಿ.ಮೀ ದೂರದ ಹಳ್ಳಿಯಲ್ಲಿ ನಡೆದಿದೆ.
ಜೋಗಿಯಾ ಹಳ್ಳಿಯ ಮಸೀದಿ ಬಳಿ ಇವರಿಬ್ಬರನ್ನು ಹಳ್ಳಿಗರು ತಡೆದಿದ್ದಾರೆ. ಈ ವೇಳೆ, ಅಲ್ಲಿಂದ ಫಿರೋಜ್ ಖುರೇಷಿ ಪಾರಾಗಿ ಓಡಿ ಹೋಗಿದ್ದಾನೆ. ಕೈಗೆ ಸಿಕ್ಕ ನಸೀಮ್ ಖುರೇಷಿ ಮೇಲೆ ಗುಂಪು, ಕಟ್ಟಿಗೆಗಳಿಂದ ಹಲ್ಲೆ ನಡೆಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಳಿಕ, ನಸೀಮ್‌ನನ್ನು ಅದೇ ಗುಂಪು ಸಮೀಪದ ರಸುಲ್ಪುರದಲ್ಲಿ ಪೊಲೀಸರಿಗೆ ಹಸ್ತಾಂತರಿಸಿದೆ. ಬಳಿಕ ನಸೀಮ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ನಸೀಮ್ ಗೋಮಾಂಸ ತೆಗೆದುಕೊಂಡು ಹೋಗುತ್ತಿದ್ದರೆ ಅಥವಾ ಇಲ್ಲವೇ ಎಂಬುದನ್ನು ಪೊಲೀಸರು ಇನ್ನೂ ತನಿಖೆ ಮಾಡುತ್ತಿದ್ದಾರೆ.
ಇದನ್ನೂ ಓದಿ: Mob Lynching | ಕಳ್ಳನೆಂದು ಶಂಕಿಸಿ ರಾಜಸ್ಥಾನದಲ್ಲಿ ವ್ಯಕ್ತಿಯ ಹತ್ಯೆಗೈದ 25 ಜನ
ಈ ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಸರಪಂಚ ಸುಶೀಲ್ ಸಿಂಗ್, ರವಿ ಶಾ ಮತ್ತು ಉಜ್ವಲ್ ಶರ್ಮಾ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನಿಬ್ಬರನ್ನು ಪೊಲೀಸರು ಹುಡುಕುತ್ತಿದ್ದಾರೆ. ಸಾಮೂಹಿಕ ಹಲ್ಲೆ ಸಂಬಂಧ ಫಿರೋಜ್ ಖುರೇಷಿ ದೂರು ನೀಡಿದ್ದಾರೆ.