ಪಟನಾ: ಶಾಲಾ-ಕಾಲೇಜುಗಳಲ್ಲಿ ಒಂದು ಕ್ಲಾಸ್ ರೂಮಿನಲ್ಲಿ ಒಂದು ತರಗತಿಗೆ ಪಾಠ ಮಾಡುವುದು ನಿಯಮ. ಶಾಲೆಗಳಲ್ಲಿ ಒಂದು ಕ್ಲಾಸ್ ರೂಮಿನಲ್ಲಿ ವಿವಿಧ ತರಗತಿಯ ಮಕ್ಕಳನ್ನು ಕೂರಿಸುವ ಪದ್ಧತಿ ಇರುತ್ತದೆಯಾದರೂ ಒಂದು ಬಾರಿಗೆ ಒಂದು ವರ್ಗದ ಮಕ್ಕಳಿಗೆ ಮಾತ್ರ ಪಾಠ ಮಾಡಲಾಗುತ್ತದೆ. ಆದರೆ ಬಿಹಾರ (Bihar)ದ ಶಾಲೆಯೊಂದರಲ್ಲಿ ಒಂದು ಕ್ಲಾಸ್ ರೂಮಿನಲ್ಲಿ, ಏಕಕಾಲದಲ್ಲಿ, ಇಬ್ಬರು ಶಿಕ್ಷಕರು, ಎರಡು ವಿಭಿನ್ನ ತರಗತಿಯ ಮಕ್ಕಳಿಗೆ ಪಾಠ ಮಾಡಿದ್ದಾರೆ. ಒಬ್ಬರು ಉರ್ದು ಕಲಿಸಿದ್ದರೆ, ಇನ್ನೊಬ್ಬರು ಹಿಂದಿ ಬೋಧಿಸಿದ್ದಾರೆ. ಅದಕ್ಕಾಗಿ ಇವರಿಬ್ಬರೂ ಒಂದೇ ಬೋರ್ಡ್ ಬಳಕೆ ಮಾಡಿರುವ ವಿಡಿಯೋ ವೈರಲ್ ಆಗಿದೆ. ಕ್ಲಾಸ್ ರೂಮೆಂಬುದು ಗಲಾಟೆಯ ಗೂಡಾಗಿದೆ. ಮಕ್ಕಳು ಎದ್ದೆದ್ದು ಕುಣಿಯುತ್ತಿದ್ದಾರೆ. ಅವರನ್ನು ನಿಯಂತ್ರಿಸುವ ಸಲುವಾಗಿ ಮತ್ತೊಬ್ಬರು ಹಿರಿಯ ಶಿಕ್ಷಕಿ ಕುರ್ಚಿಯಲ್ಲಿ ಕುಳಿತು, ಕೈಯಲ್ಲೊಂದು ಕೋಲು ಹಿಡಿದು ಅದನ್ನು ಎದುರಿನ ಟೇಬಲ್ ಮೇಲೆ ಬಡಿಯುತ್ತಿರುವುದನ್ನು ವಿಡಿಯೊದಲ್ಲಿ ನೋಡಬಹುದು.
ಇದ್ಯಾಕೆ ಹೀಗೆ? ಒಂದೇ ಕೋಣೆಯಲ್ಲಿ ಏಕಕಾಲದಲ್ಲಿ ಇಬ್ಬರು ಶಿಕ್ಷಕರು ಎರಡು ವಿಷಯ ಬೋಧಿಸಿದರೆ ಆ ಮಕ್ಕಳಿಗೆ ಅರ್ಥವಾಗುವುದಾದರೂ ಹೇಗೆ ಎಂಬ ಪ್ರಶ್ನೆಯನ್ನು ಸುದ್ದಿ ಮಾಧ್ಯಮ ಎಎನ್‌ಐ, ಶಾಲೆಯ ಹಿಂದಿ ಶಿಕ್ಷಕಿ ಕುಮಾರಿ ಪ್ರಿಯಾಂಕಾ ಎದುರು ಇಟ್ಟಾಗ ಅದಕ್ಕೆ ಉತ್ತರಿಸಿದ ಶಿಕ್ಷಕಿ, ಶಿಕ್ಷಣ ಇಲಾಖೆ 2017ರಲ್ಲಿ ಉರ್ದು ಪ್ರಾಥಮಿಕ ಶಾಲೆಯನ್ನು ನಮ್ಮ ಶಾಲೆಗೇ ಸ್ಥಳಾಂತರ ಮಾಡಿತು. ನಮ್ಮ ಶಾಲೆಯಲ್ಲೂ ಹೆಚ್ಚಿನ ತರಗತಿ ಕೋಣೆಗಳಿಲ್ಲ. ಆದರೆ ಒಂದು ದಿನದಲ್ಲಿ ಆಯಾ ತರಗತಿ ಮಕ್ಕಳಿಗೆ ಬೋಧನೆ ಅಗತ್ಯವಾಗಿದೆ. ಹೀಗಾಗಿ ಅನಿವಾರ್ಯವಾಗಿ ಒಂದು ಕೋಣೆಯಲ್ಲೇ ಎರಡು ವಿಷಯಗಳನ್ನು ಕಲಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | ಸಿಕಂದ್ರಾಬಾದ್‌ನಲ್ಲಿ ಭಾರಿ ಅಗ್ನಿ ಅವಘಡ: ಬಿಹಾರದ 11 ಕಾರ್ಮಿಕರು ಸಜೀವದಹನ
ಅಂದಹಾಗೇ ಇಂಥ ಒಂದು ಸನ್ನಿವೇಶ ಇರುವುದು ಬಿಹಾರದ ಕಠಿಹಾರದಲ್ಲಿರುವ ಆದರ್ಶ ಮಾಧ್ಯಮಿಕ ಶಾಲೆಯಲ್ಲಿ. ವಿಡಿಯೋ ವೈರಲ್ ಆದ ಬೆನ್ನಲ್ಲೇ ಎಎನ್‌ಐ ಮಾಧ್ಯಮ ಜಿಲ್ಲಾ ಶಿಕ್ಷಣಾಧಿಕಾರಿ ಕಾಮೇಶ್ವರ್ ಗುಪ್ತಾ ಅವರನ್ನೂ ಸಂಪರ್ಕಿಸಿದೆ. ಆದರ್ಶ ಮಾಧ್ಯಮಿಕ ಶಾಲೆಯಲ್ಲಿ ಮಕ್ಕಳು ಗೈರಾಗಿದ್ದರೆ, ಒಂದು ಕೋಣೆಯಲ್ಲಿ ಉರ್ದು ಶಾಲೆ ಮಕ್ಕಳಿಗೆ ಬೋಧಿಸುವುದು ಸರಿ. ಆದರೆ ಒಂದೇ ಕೋಣೆಯಲ್ಲಿ, ಎರಡು ತರಗತಿಯ ಮಕ್ಕಳಿಗೆ ಎರಡು ವಿಷಯ ಬೋಧಿಸುವುದು ಸರಿಯಲ್ಲ. ಶೀಘ್ರದಲ್ಲೇ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ | ಬಿಜೆಪಿಯಿಂದ ದೂರ ನಡೆಯುತ್ತಾರ ನಿತೀಶ್?: ಬಿಹಾರದಲ್ಲಿ ಇಫ್ತಾರ್ʼ ರಾಜಕೀಯ