ಪಟನಾ: ಪ್ರಧಾನಮಂತ್ರಿ, ಮುಖ್ಯಮಂತ್ರಿಗಳ ಮೆರವಣಿಗೆ ಎಂದಾಕ್ಷಣ ಎಲ್ಲೆಡೆ ರಸ್ತೆ ಸಂಚಾರವನ್ನೇ ಸ್ಥಗಿತಗೊಳಿಸಿ, ಮೆರವಣಿಗೆಗೆ ದಾರಿ ಮಾಡಿಕೊಡುವುದು ಸಾಮಾನ್ಯ. ಆದರೆ ಬಿಹಾರದಲ್ಲಿ (Bihar) ಇತ್ತೀಚೆಗೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಮೆರವಣಿಗೆಗೆಂದು ಎರಡು ರೈಲುಗಳ ಸಂಚಾರಕ್ಕೇ ಅಡ್ಡಿಪಡಿಸಲಾಗಿದೆ. ಈ ವಿಚಾರದಲ್ಲಿ ಬಿಜೆಪಿ ಆಕ್ರೋಶ ಹೊರಹಾಕಲಾರಂಭಿಸಿದ್ದು, ತನಿಖೆಗೆ ಒತ್ತಾಯಿಸುತ್ತಿದೆ.
ಇದನ್ನೂ ಓದಿ: Ramcharitmanas Row | ಬಿಹಾರದಲ್ಲಿ ಆರ್ಜೆಡಿ-ಜೆಡಿಯು ಮಧ್ಯೆ ಬಿರುಕು ಮೂಡಿಸಿದ ರಾಮಚರಿತಮಾನಸ ವಿವಾದ
ಬಕ್ಸರ್ ಜಿಲ್ಲೆಯಲ್ಲಿ ಬುಧವಾರ ನಿತೀಶ್ ಕುಮಾರ್ ಅವರ ಮೆರವಣಿಗೆ ನಡೆದಿದೆ. ಅದಕ್ಕೆಂದು ಎರಡು ರೈಲುಗಳ ಸಂಚಾರಕ್ಕೆ ಅಡ್ಡಿಪಡಿಸಲಾಗಿದೆ. ಈ ಎರಡು ರೈಲುಗಳಿಗೆ ಸುಮಾರು ಅರ್ಧ ತಾಸು ಸಂಚಾರ ಮಾಡದಂತೆ ತಡೆಯಲಾಗಿದೆ ಎಂದು ಬಕ್ಸರ್ ಲೋಕಸಭಾ ಕ್ಷೇತ್ರದ ಸಂಸದ ಹಾಗೂ ಕೇಂದ್ರ ಸಹಾಯಕ ಸಚಿವರಾಗಿರುವ ಅಶ್ವಿನ್ ಕುಮಾರ್ ದೂರಿದ್ದಾರೆ.
ಈ ವಿಚಾರದಲ್ಲಿ ನಿತೀಶ್ ಕುಮಾರ್ ಅವರ ವಿರುದ್ಧ ತನಿಖೆ ಕೈಗೊಳ್ಳುವಂತೆ ಭಾರತೀಯ ರೈಲ್ವೆ ಇಲಾಖೆಗೆ ಮನವಿ ಮಾಡುವುದಾಗಿಯೂ ಸಚಿವರು ತಿಳಿಸಿದ್ದಾರೆ.
ಇದನ್ನೂ ಓದಿ: Supreme Court | ಬಿಹಾರ ಜಾತಿಗಣತಿ ಪ್ರಶ್ನಿಸಿದ ಅರ್ಜಿಗಳ ವಿಚಾರಣೆ ಜ.20ಕ್ಕೆ: ಸುಪ್ರೀಂ ಕೋರ್ಟ್
ಕಳೆದ ವರ್ಷ ತಮಿಳುನಾಡಿನಲ್ಲೂ ಇಂತದ್ದೇ ಘಟನೆ ನಡೆದಿತ್ತು. ಕುಂಭಕೋಣಂ ನಗರದಲ್ಲಿ ರಾಜ್ಯ ಶಿಕ್ಷಣ ಸಚಿವ ಅನ್ಬಿಲ್ ಮಹೇಶ್ ಅವರ ಮೆರವಣಿಗೆ ಪ್ರಯುಕ್ತ ರಸ್ತೆ ಸಂಚಾರಕ್ಕೆ ಅಡ್ಡಿ ಪಡಿಸಲಾಗಿತ್ತು. ಅನಾರೋಗ್ಯದಿಂದ ಬಳಲುತ್ತಿದ್ದವರನ್ನು ಹೊತ್ತೊಯ್ಯುತ್ತಿದ್ದ ಆಂಬುಲೆನ್ಸ್‌ನ್ನೂ ರಸ್ತೆಯಲ್ಲಿ ತಡೆದಿದ್ದ ವಿಡಿಯೊ ಎಲ್ಲೆಡೆ ಹರಿದಾಡಿತ್ತು.