Site icon Vistara News

Bihar Violence: ಬಿಹಾರದಲ್ಲಿ ರಾಮನವಮಿ ಹಿಂಸಾಚಾರಕ್ಕೆ ಬಜರಂಗದಳ ಮುಖಂಡ ಪಿತೂರಿ, ಪೊಲೀಸರಿಂದ ಮಾಹಿತಿ

Bihar violence Mastermind Bajrang Dal Convenor Surrenders, Police Say Conspiracy Hatched Over WhatsApp

Bihar violence Mastermind Bajrang Dal Convenor Surrenders, Police Say Conspiracy Hatched Over WhatsApp

ಪಟನಾ: ಬಿಹಾರದಲ್ಲಿ ರಾಮನವಮಿಯಂದು ನಡೆದ ಹಿಂಸಾಚಾರ, (Bihar Violence) ಕಲ್ಲು ತೂರಾಟಕ್ಕೆ ಬಜರಂಗದಳದ ಮುಖಂಡನೇ ಪಿತೂರಿ ನಡೆಸಿದ್ದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. “ಬಿಹಾರ ಷರೀಫ್‌ನಲ್ಲಿ ರಾಮನವಮಿ ದಿನ ನಡೆದ ಹಿಂಸಾಚಾರದ ರೂವಾರಿ ಬಜರಂಗದಳದ ಸಂಚಾಲಕ ಕುಂದನ್‌ ಕುಮಾರ್‌ ಆಗಿದ್ದಾನೆ. ಆತನು ಪೊಲೀಸರಿಗೆ ಶರಣಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ” ಎಂದು ಎಡಿಜಿ ಜಿತೇಂದ್ರ ಸಿಂಗ್‌ ಗವಾರ್‌ ಮಾಹಿತಿ ನೀಡಿದರು.

ವಾಟ್ಸ್‌ಆ್ಯಪ್ ಮೂಲಕ ಹಿಂಸೆಗೆ ಪ್ರಚೋದನೆ

ರಾಮನವಮಿ ದಿನ ಉದ್ದೇಶಪೂರ್ವಕವಾಗಿಯೇ ಹಿಂಸಾಚಾರ ನಡೆಸಲು ಮೊದಲೇ ಪೂರ್ವ ಸಿದ್ಧತೆ ಕೈಗೊಳ್ಳಲಾಗಿತ್ತು ಎಂದು ಗವಾರ್‌ ಹೇಳಿದರು. “ರಾಮನವಮಿಗೂ ಮೊದಲೇ 457 ಜನರಿರುವ ವಾಟ್ಸ್‌ಆ್ಯಪ್ ಗ್ರೂಪ್‌ ಒಂದನ್ನು ರಚಿಸಲಾಗಿತ್ತು ಇದರಲ್ಲಿ, ರಾಮನವಮಿ ಕುರಿತು ಮೆಸೇಜ್‌ ಕಳುಹಿಸುವುದು, ಹಿಂಸೆಗೆ ಪ್ರಚೋದಿಸುವ ಕುರಿತು ಸಲಹೆ-ಸೂಚನೆಗಳನ್ನು ನೀಡಲಾಗಿತ್ತು. ಇದರ ಕುರಿತು ಕೂಡ ಪ್ರತ್ಯೇಕ ಎಫ್‌ಐಆರ್‌ ದಾಖಲಿಸಲಾಗಿದೆ” ಎಂದು ಸುದ್ದಿಗಾರರಿಗೆ ತಿಳಿಸಿದರು.

ಹಿಂಸಾಚಾರಕ್ಕೆ ಪಿತೂರಿ; ಪೊಲೀಸರಿಂದ ಮಾಹಿತಿ

“ವಾಟ್ಸ್‌ಆ್ಯಪ್ ಸೇರಿ ಹಲವು ಸಾಮಾಜಿಕ ಜಾಲತಾಣಗಳ ಮೂಲಕ ಹಿಂಸೆಗೆ ಪ್ರಚೋದನೆ ನೀಡುವ ಹೊಣೆಯನ್ನು ಕುಂದನ್‌ ಕುಮಾರ್‌ ಹೊತ್ತುಕೊಂಡಿದ್ದ. ರಾಮನವಮಿಗೂ ಮೊದಲೇ ಹಿಂಸಾಚಾರಕ್ಕೆ ಸಾಮಾಜಿಕ ಜಾಲತಾಣಗಳ ಮೂಲಕವೇ ಯೋಜನೆ ರೂಪಿಸಲಾಗಿತ್ತು. ಇದೇ ಪ್ರಕರಣದಲ್ಲಿ ಕುಂದನ್‌ ಕುಮಾರ್‌ ಈಗ ಶರಣಾಗಿದ್ದಾನೆ. ಬಿಹಾರ ಷರೀಫ್‌ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಇದುವರೆಗೆ 140ಕ್ಕೂ ಅಧಿಕ ಜನರನ್ನು ಬಂಧಿಸಲಾಗಿದೆ. ಹಾಗೆಯೇ, 15 ಎಫ್‌ಐಆರ್‌ ಕೂಡ ದಾಖಲಿಸಲಾಗಿದೆ. ಈ ಕುರಿತು ಹೆಚ್ಚಿನ ತನಿಖೆಯೂ ಮುಂದುವರಿದಿದೆ” ಎಂದು ಮಾಹಿತಿ ನೀಡಿದರು.

ಬಿಹಾರದ ಹಲವೆಡೆ ಪ್ರತಿಭಟನೆ

ಬಿಹಾರ ಷರೀಫ್‌ ಮಾತ್ರವಲ್ಲ, ನಳಂದಾ, ರೋಹ್ತಸ್‌ ಜಿಲ್ಲೆಗಳಲ್ಲೂ ರಾಮನವಮಿ ದಿನ ಹಿಂಸಾಚಾರ ಪ್ರಕರಣಗಳು ನಡೆದಿದ್ದವು. ರಾಮನವಮಿ ಮೆರವಣಿಗೆಗೆ ಮುಸ್ಲಿಮರು ಅಡ್ಡಿಪಡಿಸಿದ್ದಾರೆ, ಕಲ್ಲು ತೂರಾಟ ನಡೆಸಿದ್ದಾರೆ ಎಂದು ಹಿಂದು ಸಂಘಟನೆಗಳು ಆರೋಪಿಸಿದ್ದವು. ಹಾಗೆಯೇ, ಬಿಜೆಪಿಯು ಹಿಂಸಾಚಾರ ಪ್ರಕರಣವನ್ನು ಮುಂದಿಟ್ಟುಕೊಂಡು ಮಹಾಘಟಬಂಧನ್‌ ಸರ್ಕಾರವನ್ನು ಟೀಕಿಸಿತ್ತು. ಹಾಗೆಯೇ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಕೂಡ ಸಾಸಾರಾಮ್‌ ಹಿಂಸಾಚಾರವನ್ನು ಮುಂದಿಟ್ಟುಕೊಂಡು ರಾಜ್ಯ ಸರ್ಕಾರವನ್ನು ಟೀಕಿಸಿದ್ದರು. ಅತ್ತ, ಬಿಹಾರ ಸರ್ಕಾರವು ಕೂಡ ಪ್ರತಿಕ್ರಿಯಿಸಿ, ಹಿಂಸೆಗೆ ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ಕಾರಣ ಎಂದಿತ್ತು. ರಾಮನವಮಿ ದಿನ ಗುಜರಾತ್‌, ಮಹಾರಾಷ್ಟ್ರ, ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ ನಡೆದಿದೆ.

ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಬಿಹಾರ, ಬಂಗಾಲದ ಕೋಮು ಹಿಂಸಾಚಾರ ನಿಯಂತ್ರಿಸಿ

Exit mobile version