ಪಾಟ್ನಾ, ಬಿಹಾರ: ದಲಿತ ಅಧಿಕಾರಿ ಹತ್ಯೆಗೆ ಕುಮ್ಮುಕ್ಕು ನೀಡಿದ ಅಪರಾಧದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಗ್ಯಾಂಗ್‌ಸ್ಟರ್ ರಾಜಕಾರಣಿ ಆನಂದ್ ಮೋಹನ್ ಸಿಂಗ್ (Anand Mohan Singh) ಜೈಲಿನಿಂದ ಬಿಡುಗಡೆಯಾಗುತ್ತಿರುವುದು ಬಿಹಾರದಲ್ಲಿ ರಾಜಕೀಯ ವಾಗ್ವಾದಕ್ಕೆ ಕಾರಣವಾಗಿದೆ. ಅಲ್ಲದೇ, ಬಿಡುಗಡೆಯಾಗುತ್ತಿದ್ದಂತೆ ಸಕ್ರಿಯ ರಾಜಕಾರಣಕ್ಕೆ ಮರಳುವುದಾಗಿ ಆನಂದ್ ಮೋಹನ್ ಸಿಂಗ್ ಹೇಳಿದ್ದಾರೆ. ತಮ್ಮ ಪುತ್ರ, ಶಾಸಕ ಚೇತನ್ ಆನಂದ್ ಮದುವೆಗಾಗಿ ಆನಂದ್ ಮೋಹನ್ ಸಿಂಗ್ ಈಗ 15 ದಿನಗಳ ಪೆರೋಲ್ ಮೇಲೆ ಬಿಡುಗಡೆಯಾಗಿದ್ದಾರೆ. ಈ ವೇಳೆ ಮಾಧ್ಯಮಗಳ ಜತೆಗೆ ಮಾತನಾಡಿದ ಸಿಂಗ್, ಸ್ವಾತಂತ್ರ್ಯ ಎಲ್ಲರಿಗೂ ಸಂತೋಷವನ್ನುಂಟು ಮಾಡುತ್ತದೆ. ನನಗೂ ಖುಷಿಯಾಗಿದೆ ಎಂದು ಹೇಳಿದ್ದಾರೆ. ಸಿಂಗ್ ಬಿಡುಗಡೆಗಾಗಿ ನಿತೀಶ್ ಸರ್ಕಾರವು ಜೈಲು ನಿಯಮಗಳನ್ನು ಪರಿಷ್ಕರಿಸಿದೆ ಎಂದು ಹೇಳಲಾಗುತ್ತಿದೆ.
ರಾಷ್ಟ್ರೀಯ ಜನತಾ ದಳದ ಮಾಜಿ ಸಂಸದರಾಗಿದ್ದ ಆನಂದ್ ಮೋಹನ್ ಸಿಂಗ್ ವಿರುದ್ದ ಅನೇಕ ಪ್ರಕರಣಗಳಿವೆ. 1994ರಲ್ಲಿ ದಲಿತ ಡಿಸ್ಟ್ರಿಕ್ಟ್ ಮ್ಯಾಜಿಸ್ಟ್ರೇಟ್ ಜಿ ಕೃಷ್ಣಯ್ಯ ಅವರ ಹತ್ಯೆಗೆ ಕುಮ್ಮುಕ್ಕು ನೀಡಿದ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಸಾಬೀತಾಗಿತ್ತು. 2007ರಲ್ಲಿ ಕೆಳ ಹಂತದ ನ್ಯಾಯಾಲಯವು ಮರಣದಂಡನೆ ಶಿಕ್ಷೆ ವಿಧಿಸಿತ್ತು. ಬಳಿಕ ಪಾಟ್ನಾ ಹೈಕೋರ್ಟ್, ಈ ಮರಣ ದಂಡನೆ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಿತ್ತು. ಸಿಂಗ್ ಕಳೆದ 15 ವರ್ಷಗಳಿಂದ ಜೈಲಿನಲ್ಲಿದ್ದಾರೆ.
ನಿತೀಶ್ ಕುಮಾರ್ ನೇತೃತ್ವದ ಬಿಹಾರ ಸರ್ಕಾರವು ಜೈಲು ನಿಯಮಗಳಲ್ಲಿ ಮಾರ್ಪಾಡು ಮಾಡಿದ ಪರಿಣಾಮ 27 ಕೈದಿಗಳು ಜೈಲಿನಿಂದ ಬಿಡುಗಡೆಯಾಗಲಿದ್ದಾರೆ. ಈ ಪೈಕಿ ಆನಂದ್ ಮೋಹನ್ ಸಿಂಗ್ ಕೂಡ ಸೇರಿದ್ದಾರೆ. ಈ ಮೂಲಕ ಕರ್ತವ್ಯದಲ್ಲಿದ್ದ ಸರ್ಕಾರಿ ಅಧಿಕಾರಿಯ ಹತ್ಯೆ ಮಾಡಿದ ಅಪರಾಧಿಗೆ ಶಿಕ್ಷೆಯಿಂದ ಪಾರು ಮಾಡುವ ಅವಕಾಶ ಕಲ್ಪಿಸಲಾಗಿದೆ. ಈ ಬಗ್ಗೆ ಬಿಹಾರದಲ್ಲಿ ಸಾಕಷ್ಟು ಸುದ್ದಿಯಾಗಿದ್ದು, ಚರ್ಚೆಗಳು ನಡೆಯುತ್ತಿವೆ.
ತಮ್ಮ ಬಿಡುಗಡೆಯ ಬಗ್ಗೆ ಪ್ರತಿಕ್ರಿಯಿಸಿದ ಸಿಂಗ್, ಈ ರೀತಿಯಾಗಿ ಬಿಡುಗಡೆಯಾದವರು ಬಿಜೆಪಿಯಲ್ಲಿ ಬೇಕಾದಷ್ಟಿದ್ದಾರೆ. ನನ್ನನ್ನು ತಪ್ಪಾಗಿ ಪ್ರಕರಣದಲ್ಲಿ ಸಿಕ್ಕಿಸಲಾಗಿತ್ತು. ಹಾಗಾಗಿ, ನಾನು ಬಿಡುಗೆಯಾಗುತ್ತಿದ್ದೇನೆ. ಹಾಗಾಗಿ, ಏನೆಲ್ಲ ಮಾತನಾಡುವ ಜನರ ಬಾಯಿಗೆ ಬೀಗ ಹಾಕಲಾಗುವುದಿಲ್ಲ ಎಂದು ಹೇಳಿದ್ದಾರೆ.
ಆನಂದ್ ಮೋಹನ್ ಸಿಂಗ್ ಅವರನ್ನು ಬಿಡುಗಡೆ ಮಾಡುತ್ತಿರುವ ಬಿಹಾರ ಸರ್ಕಾರದ ನಡೆ ವಿರುದ್ಧ ಉತ್ತರ ಪ್ರದೇಶದ ಮಾಜಿ ಸಿಎಂ, ಬಿಎಸ್‌ಪಿ ನಾಯಕಿ ಮಾಯಾವತಿ ಅಸಮಾಧಾನ ಹೊರ ಹಾಕಿದ್ದಾರೆ. ಬಿಹಾರ ಸರ್ಕಾರವು ದಲಿತ ವಿರೋಧಿ ನಡೆಯನ್ನು ಅನುಸರಿಸುತ್ತಿದೆ. ಆನಂದ್ ಮೋಹನ್ ಸಿಂಗ್ ಬಿಡುಗಡೆ ಬಗ್ಗೆ ಬಿಹಾರ ಸರ್ಕಾರ ಮರುಪರಿಶೀಲಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: Bilkis Bano Case: ಬಿಲ್ಕಿಸ್ ಬಾನೊ ಕೇಸಿಗೆ ಪ್ರತಿಕ್ರಿಯಿಸಲು ರೆಡಿಯಾಗಿರಿ; ಕೇಂದ್ರ, ಗುಜರಾತ್‌ಗೆ ಸುಪ್ರೀಂ ಕೋರ್ಟ್ ಸೂಚನೆ
ಮತ್ತೊಂದೆಡೆ, ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಅವರು ಟ್ವೀಟ್ ಮಾಡಿ ನಿತೀಶ್ ಕುಮಾರ್ ಅವರನ್ನು ಟೀಕಿಸಿದ್ದಾರೆ. ಅಧಿಕಾರಕ್ಕಾಗಿ ಕ್ರಿಮಿನಲ್ ಸಿಂಡಿಕೆಟ್ ಪರವಾಗಿ ಒಲವು ತೋರಿಸುತ್ತಿರುವ ಯಾರಾದರೂ ಭಾರತದ ಮುಖವಾಗಲು ಹೇಗೆ ಸಾಧ್ಯ? ಪ್ರತಿಪಕ್ಷದ ನಾಯಕರಾದರೂ ಹೇಗಾಗುತ್ತಾರೆ ಎಂದು ಪ್ರಶ್ನಿಸಿದ್ದಾರೆ. ಬಿಜೆಪಿಯ ಟೀಕೆಗೆ ತಿರುಗೇಟು ನೀಡಿರುವ ಜೆಡಿಯು, ಆನಂದ್ ಮೋಹನ್ ಸಿಂಗ್ ಅವರು ತಮ್ಮ ಜೀವಾವಧಿ ಶಿಕ್ಷೆಯನ್ನು ಪೂರ್ಣಗೊಳಿಸಿದ್ದಾರೆ. ಬಿಜೆಪಿ ರೀತಿಯಲ್ಲಿ ನಿತೀಶ್ ಕುಮಾರ್ ಸರ್ಕಾರವು ಆಮ್(ಸಾಮಾನ್ಯ) ಮತ್ತು ಖಾಸ್(ಶ್ರೀಮಂತರ) ನಡುವೆ ತಾರತಮ್ಯ ಮಾಡುವುದಿಲ್ಲ ಎಂದು ಹೇಳಿದೆ.