ಗುವಾಹಟಿ: ಅಸ್ಸಾಂನಲ್ಲಿ ಸಾಂಪ್ರದಾಯಿಕ ಬಿಹು ನೃತ್ಯವು ಗಿನ್ನಿಸ್ ದಾಖಲೆ ಬರೆದಿದೆ. ಗುವಾಹಟಿಯ ಸರುಸಜಾಯಿ ಸ್ಟೇಡಿಯಂನಲ್ಲಿ ನಡೆದ ಮೆಗಾ ಬಿಹು ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಭಾಗವಹಿಸಿದರು. ಇದೇ ವೇಳೆ ಅಸ್ಸಾಂನ 11,304 ಕಲಾವಿದರು ಬಿಹು ನೃತ್ಯ ಮಾಡಿದರೆ, 2,548 ಜನ ಡೋಲು ಬಾರಿಸಿದ್ದು ಗಿನ್ನಿಸ್ ವಿಶ್ವ ದಾಖಲೆ ಬರೆಯಿತು. ಎರಡು ದಾಖಲೆ ಬರೆದ ಕಲಾವಿದರಿಗೆ ನರೇಂದ್ರ ಮೋದಿ ಅವರು ಅಭಿನಂದನೆ ತಿಳಿಸಿದರು. ಮೋದಿ ಅವರ ಉಪಸ್ಥಿತಿಯಲ್ಲಿಯೇ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರಿಗೆ ಗಿನ್ನಿಸ್ ವಿಶ್ವ ದಾಖಲೆಯ ಪ್ರಮಾಣಪತ್ರವನ್ನು ನೀಡಲಾಯಿತು. ಜಗತ್ತಿನಲ್ಲಿಯೇ ಅತಿ ಹೆಚ್ಚು ಜನ ಬಿಹು ನೃತ್ಯ ಮಾಡಿದ ಹಾಗೂ ಹೆಚ್ಚು ಮಂದಿ ಡೋಲು ಬಾರಿಸಿದ ದಾಖಲೆ ಸೃಷ್ಟಿಯಾಯಿತು.
ಮೆಗಾ ಬಿಹು ಕಾರ್ಯಕ್ರಮದಲ್ಲಿ ಬಿಹು ನೃತ್ಯ ಹಾಗೂ ಡೋಲು ಬಾರಿಸುವುದನ್ನು ವೀಕ್ಷಿಸಿದ ಬಳಿಕ ಮಾತನಾಡಿದ ಮೋದಿ, ಅಸ್ಸಾಂ ಅಭಿವೃದ್ಧಿಗೆ ನೀಡಿದ ಕೊಡುಗೆಗಳ ಬಗ್ಗೆ ಮಾತನಾಡಿದರು. “ಅಸ್ಸಾಂಗೆ ಏಮ್ಸ್ ಆಸ್ಪತ್ರೆಯನ್ನು ನೀಡಲಾಗಿದೆ. ಈಶಾನ್ಯ ರಾಜ್ಯಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಹೆಚ್ಚಿನ ಒತ್ತು ನೀಡಿದೆ. ಮೂರು ಮೆಡಿಕಲ್ ಕಾಲೇಜುಗಳನ್ನು ಮಂಜೂರು ಮಾಡಲಾಗಿದೆ. ಸಂಪರ್ಕ ಕಲ್ಪಿಸುವ ಯೋಜನೆಗಳನ್ನು ಜಾರಿಗೊಳಿಸಲಾಗಿದೆ” ಎಂದು ಹೇಳಿದರು.
ಅಸ್ಸಾಂ ಸ್ಟೇಡಿಯಂನಲ್ಲಿ ಮೋದಿ
“ಅಸ್ಸಾಂನಲ್ಲಿ ಇಂದು ಕೂಡ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ್ದೇನೆ. ಇನ್ನು ಬಿಹು ನೃತ್ಯ ಕಾರ್ಯಕ್ರಮವು ಏಕ ಭಾರತ್ ಶ್ರೇಷ್ಠ ಭಾರತ್ ಎಂಬ ಪರಿಕಲ್ಪನೆಯಲ್ಲಿ ಆಯೋಜಿಸಿದ ಕಾರ್ಯಕ್ರಮವಾಗಿದೆ. ದೇಶದ ಸಂಸ್ಕೃತಿ, ಸಂಪ್ರದಾಯಗಳ ವೈವಿಧ್ಯತೆಗೆ ಕಾರ್ಯಕ್ರಮವು ದ್ಯೋತಕವಾಗಿದೆ. ಬಿಹು ಆಚರಣೆಯ ಸಂದರ್ಭದಲ್ಲಿ ಅಸ್ಸಾಂ ಜನರನ್ನು ಭೇಟಿಯಾಗುವುದೇ ಸೌಭಾಗ್ಯವಾಗಿದೆ” ಎಂದು ಹೇಳಿದರು.
ಬಿಹು ನೃತ್ಯದ ಬೆರಗು
ಇದನ್ನೂ ಓದಿ: Droupadi Murmu: ಅಸ್ಸಾಂನಲ್ಲಿ ಸುಖೋಯ್ 30 ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ ರಾಷ್ಟ್ರಪತಿ ಮುರ್ಮು
ನರೇಂದ್ರ ಮೋದಿ ಅವರು ಅಸ್ಸಾಂನಲ್ಲಿ 14,300 ಕೋಟಿ ರೂಪಾಯಿ ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಚಾಳನೆ ನೀಡಿದರು. ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ನಿರ್ಮಿಸುತ್ತಿರುವ ಪಲಾಸ್‌ಬರಿ-ಸುವಾಲ್‌ಕುಚಿ ಸೇತುವೆಯ ನಿರ್ಮಾಣಕ್ಕೂ ಮೋದಿ ಶಂಕುಸ್ಥಾಪನೆ ನೆರವೇರಿಸಿದರು. ಇದಕ್ಕೆ 3,200 ಕೋಟಿ ರೂಪಾಯಿ ವ್ಯಯಿಸಲಾಗುತ್ತಿದೆ. ಹೀಗೆ, ರೈಲು ಯೋಜನೆ, ಮೆಥನಾಲ್ ಘಟಕ ಸೇರಿ ಹಲವು ಯೋಜನೆಗಳಿಗೆ ಮೋದಿ ಚಾಲನೆ, ಶಂಕುಸ್ಥಾಪನೆ ನೆರವೇರಿಸಿದರು. ಶುಕ್ರವಾರ ರಾತ್ರಿ ಮೆಗಾ ಬಿಹು ಕಾರ್ಯಕ್ರಮದಲ್ಲಿ ನೃತ್ಯದ ಜತೆಗೆ ಲೇಸರ್ ಬೆಳಕಿನ ರಂಗಿನಾಟವೂ ಮನಮೋಹಕವಾಗಿತ್ತು. ಮೋದಿ ಅವರಿಗೆ ಸ್ಟೇಡಿಯಂನಲ್ಲಿ ಅದ್ಧೂರಿ ಸ್ವಾಗತ ದೊರೆಯಿತು.