ನವದೆಹಲಿ: ಬಿಲ್ಕಿಸ್ ಬಾನೊ ಗ್ಯಾಂಗ್ ರೇಪ್ (Bilkis Bano Case) ಪ್ರಕರಣದ ಅಪರಾಧಿಗಳನ್ನು ಅವಧಿ ಪೂರ್ವ ಬಿಡುಗಡೆ ಮಾಡಿದ್ದನ್ನು ಪ್ರಶ್ನಿಸಿ ಸಂತ್ರಸ್ತೆ ಬಿಲ್ಕಿಸ್ ಬಾನೊ ಅವರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಈ ಕುರಿತು ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಲು ಸಜ್ಜಾಗಿರುವಂತೆ ಕೇಂದ್ರ ಸರ್ಕಾರ, ಬಿಡುಗಡೆಯಾಗಿರುವ ಅಪರಾಧಿಗಳು ಮತ್ತು ಗುಜರಾತ್ ಸರ್ಕಾರಕ್ಕೆ ಸೋಮವಾರ ಸೂಚಿಸಿದೆ. ಇದೇ ವೇಳೆ, ಈ ಪ್ರಕರಣವನ್ನು ಭಾವನಾತ್ಮಕವಾಗಿ ನೋಡದೆ, ನಿಯಮಗಳ ಅನುಸಾರ ನಡೆದುಕೊಳ್ಳಲಾಗಿದೆಯೇ ಎಂದು ಪರಿಶೀಲಿಸಲಾಗುವುದು ಎಂದು ಕೋರ್ಟ್ ಹೇಳಿದೆ. ಈ ಪ್ರಕರಣದ ವಿಚಾರಣೆ ಏಪ್ರಿಲ್ 18ಕ್ಕೆ ನಿಗದಿ ಮಾಡಿರುವ ಕೋರ್ಟ್, ಸಜ್ಜಾಗಿರುವಂತೆ ಸಂಬಂಧಿಸಿದವರಿಗೆ ಸೂಚಿಸಿದೆ.
ಬಿಲ್ಕಿಸ್ ಬಾನೊ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆ ಅನುಭವಿಸುತ್ತಿದ್ದ 11 ಅಪರಾಧಿಗಳನ್ನು ಗುಜರಾತ್ ಸರ್ಕಾರವು ಕಳೆದ ವರ್ಷ ಆಗಸ್ಟ್ 15ರಂದು ಬಿಡುಗಡೆ ಮಾಡಿತ್ತು. ಗುಜರಾತ್ ಸರ್ಕಾರದ ಈ ಕ್ರಮವನ್ನು ಪ್ರಶ್ನಿಸಿ ನವೆಂಬರ್ 30ರಂದು ಸಂತ್ರಸ್ತೆ ಬಿಲ್ಕಿಸ್ ಬಾನೊ ಅವರು ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದ್ದರು. ಅಲ್ಲದೇ, ಗುಜರಾತ್ ಸರ್ಕಾರದ ಕ್ರಮವು ಸಾಮಾಜಿಕ ಪ್ರಜ್ಞೆಯನ್ನು ಅಲುಗಾಡಿಸಿದೆ ಎಂದು ತಮ್ಮ ಮನವಿಯಲ್ಲಿ ತಿಳಿಸಿದ್ದರು.
ಜಸ್ಟೀಸ್ ಕೆ ಎಂ ಜೋಸೆಫ್ ಮತ್ತು ಜಸ್ಟೀಸ್ ಬಿ ವಿ ನಾಗರತ್ನ ಅವರಿದ್ದ ಪೀಠವು, ಕೇಂದ್ರ ಸರ್ಕಾರ, ಗುಜರಾತ್ ಸರ್ಕಾರ ಹಾಗೂ ಶಿಕ್ಷೆಗೆ ಗುರಿಯಾಗಿರವವರಿಗೆ ಬಿಲ್ಕಿಸ್ ಬಾನೊ ಮನವಿಯ ಆಧಾರದ ಮೇಲೆ ನೋಟಿಸ್ ಜಾರಿ ಮಾಡಿದೆ. ಮುಂದಿನ ವಿಚಾರಣೆಯ ದಿನಾಂಕದಂದು ದಾಖಲೆಗಳೊಂದಿಗೆ ಸಿದ್ಧವಾಗಿರುವಂತೆ ಸೂಚಿಸಿದೆ.
ಇದನ್ನೂ ಓದಿ: Bilkis Bano Case | 11 ರೇಪಿಸ್ಟ್‌ಗಳ ಬಿಡುಗಡೆ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋದ ಸಂತ್ರಸ್ತೆ ಬಿಲ್ಕಿಸ್ ಬಾನೊ
ಇದು ಅತ್ಯಂತ ಘೋರ ಕೃತ್ಯ. ಸಾಮಾನ್ಯ ಕೊಲೆ ಪ್ರಕರಣಗಳಲ್ಲಿ ಜೈಲುಗಳಲ್ಲಿ ಕೊಳೆಯುತ್ತಿರುವುದಾಗಿ ಅನೇಕರು ಈ ನ್ಯಾಯಾಲಯಕ್ಕೆ ಬರುತ್ತಾರೆ. ಅಂಥವರನ್ನು ಬಿಡುಗಡೆಯ ಮಾಡುವ ಪರಿಹಾರವನ್ನು ಪರಿಗಣಿಸುತ್ತಿಲ್ಲ. ಹಾಗಾಗಿ ಇದು ಮಾನದಂಡಗಳನ್ನು ಏಕರೂಪವಾಗಿ ಅಳವಡಿಸಿಕೊಂಡ ಪ್ರಕರಣವಾಗಿದೆಯೇ ಎಂದು ಪೀಠವು ಮೌಖಿಕವಾಗಿ ವಿಚಾರಣೆ ವೇಳೆ ಕೇಳಿತು. ಅಂತಿಮವಾಗಿ ಮುಂದಿನ ವಿಚಾರಣೆಯನ್ನು ಏಪ್ರಿಲ್ 18ಕ್ಕೆ ನಿಗದಿ ಪಡಿಸಿತು.