ನವದೆಹಲಿ: 2002ರ ಗುಜರಾತ್ ದಂಗೆ ವೇಳೆ, ಕುಟುಂಬದವರನ್ನೆಲ್ಲ ಹತ್ಯೆಗೈದು ಮತ್ತು ತನ್ನನ್ನು ಗ್ಯಾಂಗ್ ರೇಪ್ ಮಾಡಿದ ಅಪರಾಧಿಗಳ ಅವಧಿ ಪೂರ್ವ ಬಿಡುಗಡೆ ಪ್ರಶ್ನಿಸಿ ಸಂತ್ರಸ್ತೆ ಬಿಲ್ಕಿನ್ ಬಾನೊ (Bilkis Bano Case) ಅವರು ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದ್ದಾರೆ. ಬಿಲ್ಕಿಸ್ ಬಾನೊ ಸಾಮೂಹಿಕ ಅತ್ಯಾಚಾರ ಪ್ರಕರಣದ ಅಪರಾಧಿಗಳನ್ನು ಗುಜರಾತ್ ಸರ್ಕಾರವು ಕಳೆದ ಆಗಸ್ಟ್ 15ರಂದು ಬಿಡುಗಡೆ ಮಾಡಿತ್ತು. ಬಳಿಕ, ಕೆಲವು ಹಿಂದೂಪರ ಸಂಘಟನೆಗಳು ಈ ಅಪರಾಧಿಗಳಿಗೆ ಹೀರೋ ಸ್ಥಾನಮಾನ ನೀಡಿ, ಜೈಲಿನಿಂದ ಸ್ವಾಗತಿಸಿದ್ದು, ಭಾರಿ ಸದ್ದು ಮಾಡಿತ್ತು.
ಅಪರಾಧಿಗಳ ಬಿಡುಗಡೆಯ ಕ್ರಮವನ್ನು ಸಮರ್ಥಿಸಿಕೊಂಡಿದ್ದ ಗುಜರಾತ್ ಸರ್ಕಾರವು, ಕೇಂದ್ರ ಸರ್ಕಾರದ ಒಪ್ಪಿಗೆಯಿಂದಲೇ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿತ್ತು. ಈ ಅಪರಾಧಿಗಳ ಬಿಡುಗಡೆಗೆ ಮನವಿ ಸಲ್ಲಿಸಿದ ಎರಡು ವಾರದೊಳಗೇ ಕೇಂದ್ರ ಸರ್ಕಾರವು ತ್ವರಿತವಾಗಿ ತನ್ನ ಒಪ್ಪಿಗೆಯನ್ನು ನೀಡಿ, ಅಪರಾಧಿಗಳ ಉತ್ತಮ ನಡವಳಿಕೆಯನ್ನು ಪರಿಗಣಿಸಿ ಬಿಡುಗಡೆ ಮಾಡುತ್ತಿರವುದಾಗಿ ಹೇಳಿತ್ತು. ಗುಜರಾತ್ ಸರ್ಕಾರ ಕೂಡ ಇದಕ್ಕೆ ಸುಪ್ರೀಂ ಕೋರ್ಟ್ ತೀರ್ಪನ್ನು ಬೆಂಬಲವಾಗಿ ನೀಡಿತ್ತು.
ಬಿಲ್ಕಿಸ್ ಬಾನೂ ಪ್ರಕರಣ ಅಪರಾಧಿಗಳ ಪೈಕಿ ಒಬ್ಬನನ್ನು ಗುಜರಾತ್ ಸರ್ಕಾರವು 1992ರ ಕ್ಷಮಾಪಣಾ ನೀತಿಯ ಅನುಸಾರ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಬಹುದು ಎಂದು ತನ್ನ ತೀರ್ಪಿನಲ್ಲಿ ಹೇಳಿತ್ತು. ಆದರೆ, ಸಿಬಿಐ ಮತ್ತು ವಿಶೇಷ ನ್ಯಾಯಾಧೀಶರ ಆಕ್ಷೇಪಣೆಯ ಹೊರತಾಗಿಯೂ ಗುಜರಾತ್ ಸರ್ಕಾರವು ಸುಪ್ರೀಂ ತೀರ್ಪು ಮುಂದಿಟ್ಟುಕೊಂಡು ಎಲ್ಲ 11 ಅಪರಾಧಿಗಳನ್ನು ಬಿಡುಗಡೆ ಮಾಡಿತ್ತು. ಒಂದೊಮ್ಮೆ ಅತ್ಯಾಚಾರ ಮತ್ತು ಕೊಲೆ ಅಪರಾಧಿಗಳನ್ನು ಶೀಘ್ರ ಬಿಡುಗಡೆ ಮಾಡುವುದನ್ನು ತಡೆಯುವ 2014 ರ ಕ್ಷಮಾಪಣಾ ನೀತಿಯನ್ನು ಗುಜರಾತ್ ಸರ್ಕಾರವು ಅನುಸರಿಸಿದ್ದರೆ ಈ ಕ್ರಮವು ಸಾಧ್ಯವಾಗುತ್ತಿರಲಿಲ್ಲ.
ಇಡೀ ಪ್ರಕರಣದ ವಿಚಾರಣೆಯ ಮಹಾರಾಷ್ಟ್ರದ ನ್ಯಾಯಾಲಯಗಳಲ್ಲಿ ನಡೆದಿದ್ದರಿಂದ ಅಪರಾಧಿಗಳ ಬಿಡುಗಡೆಯ ನಿರ್ಧಾರವನ್ನು ಗುಜರಾತ್ ಸರ್ಕಾರದ ಬದಲಿಗೆ ಮಹಾರಾಷ್ಟ್ರ ಸರ್ಕಾರವು ತೆಗೆದುಕೊಳ್ಳಬೇಕಿತ್ತು ಎಂದು ಬಿಲ್ಕಿಸ್ ಬಾನೊ ಅವರು ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ | Gujarat Election 2022 | ಬಿಲ್ಕಿಸ್ ಬಾನೊ ಅತ್ಯಾಚಾರಿಗಳನ್ನು ‘ಸಂಸ್ಕಾರಿಗಳು’ ಎಂದ ವ್ಯಕ್ತಿಗೆ ಬಿಜೆಪಿ ಟಿಕೆಟ್