Site icon Vistara News

Bilkis Bano: ಬಿಲ್ಕಿಸ್‌ ಬಾನೊ ಅತ್ಯಾಚಾರಿಗಳ ಬಿಡುಗಡೆ; ನಾಳೆಯ ಸುಪ್ರೀಂ ತೀರ್ಪು ಯಾರ ಪರ?

supreme court

supreme court

ನವದೆಹಲಿ: 2002ರ ಗೋದ್ರಾ ಹತ್ಯಾಕಾಂಡದ ವೇಳೆ ಬಿಲ್ಕಿಸ್‌ ಬಾನೊ (Bilkis Bano) ಅವರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಮತ್ತು ಇತರ ಹಲವು ಘೋರ ಅಪರಾಧಗಳಿಗಾಗಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ 11 ಅಪರಾಧಿಗಳನ್ನು ಬಿಡುಗಡೆ ಮಾಡಿದ ಗುಜರಾತ್ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ಕುರಿತು ಸುಪ್ರೀಂ ಕೋರ್ಟ್ (Supreme Court) ನಾಳೆ (ಜನವರಿ 8) ತೀರ್ಪು ನೀಡಲಿದೆ.

ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನಾ ಮತ್ತು ಉಜ್ಜಲ್ ಭುಯಾನ್ ಅವರನ್ನೊಳಗೊಂಡ ನ್ಯಾಯಪೀಠವು, ಅಕ್ಟೋಬರ್ 12ರಂದು ಬಿಲ್ಕಿಸ್‌ ಬಾನು ಮತ್ತು ಇತರರು ಸಲ್ಲಿಸಿದ ಅರ್ಜಿಗಳ ಆದೇಶಗಳನ್ನು ಕಾಯ್ದಿರಿಸಿದ ನಂತರ ತನ್ನ ನಿರ್ಧಾರವನ್ನು ಪ್ರಕಟಿಸಲಿದೆ. 2022ರಲ್ಲಿ ಅಪರಾಧಿಗಳನ್ನು ಬಿಡುಗಡೆ ಮಾಡುವ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯನ್ನು ಒಳಗೊಂಡ ಮೂಲ ಕಡತಗಳನ್ನು ಸಲ್ಲಿಸುವಂತೆ ನ್ಯಾಯಾಲಯವು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.

2002ರ ಗುಜರಾತ್ ಗಲಭೆಯ ಸಂದರ್ಭದಲ್ಲಿ ತನ್ನ ಕುಟುಂಬದೊಂದಿಗೆ ಸುರಕ್ಷಿತ ಸ್ಥಳಕ್ಕೆ ತೆರಳಲು ಪ್ರಯತ್ನಿಸುತ್ತಿದ್ದಾಗ 21ರ ಹರೆಯದ ಬಾನು ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿತ್ತು. ಆಗ ಅವರು ಐದು ತಿಂಗಳ ಗರ್ಭಿಣಿಯಾಗಿದ್ದರು. 11 ಅಪರಾಧಿಗಳು ಆಕೆಯ ಮೂರು ವರ್ಷದ ಮಗಳು ಸೇರಿದಂತೆ ಆಕೆಯ ಕುಟುಂಬದ ಏಳು ಸದಸ್ಯರನ್ನು ಕೊಂದಿದ್ದರು. ಪ್ರಕರಣದ ವಿಚಾರಣೆಯನ್ನು ಗುಜರಾತ್‌ನಿಂದ ಮುಂಬೈಗೆ ವರ್ಗಾಯಿಸಲಾಗಿತ್ತು ಮತ್ತು ಕೇಂದ್ರ ತನಿಖಾ ದಳ (CBI) ಪ್ರಕರಣದ ತನಿಖೆ ನಡೆಸಿತ್ತು. 2008ರಲ್ಲಿ ಮುಂಬೈಯ ವಿಶೇಷ ನ್ಯಾಯಾಲಯ 11 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಈ ನಿರ್ಧಾರವನ್ನು ಬಾಂಬೆ ಹೈಕೋರ್ಟ್‌ ವಿಭಾಗೀಯ ಪೀಠವು 2017ರಲ್ಲಿ ಎತ್ತಿ ಹಿಡಿದಿತ್ತು. ಆದರೆ 2022ರ ಸ್ವಾತಂತ್ರ್ಯೋತ್ಸವದಂದು ಈ ಆರೋಪಿಗಳನ್ನೆಲ್ಲ ಸನ್ನಡತೆ ಆಧಾರದ ಮೇಲೆ ಬಿಡುಗಡೆ ಮಾಡಲಾಗಿತ್ತು.

ಬಿಲ್ಕಿಸ್ ಬಾನೊ ಅತ್ಯಾಚಾರ ಆರೋಪಿಗಳನ್ನು ಜೈಲಿನಿಂದ ಬಿಡುಗಡೆ ಮಾಡಿದ್ದನ್ನು ಪ್ರಶ್ನಿಸಿ ಮತ್ತು ಅವರಿಗೆ ಜೈಲು ಶಿಕ್ಷೆ ಮುಂದುವರಿಸಬೇಕು ಎಂದು ಆಗ್ರಹಿಸಿ ಸಿಪಿಐ (ಎಂ) ಸದಸ್ಯೆ ಸುಭಾಷಿಣಿ ಅಲಿ, ತೃಣಮೂಲ ಕಾಂಗ್ರೆಸ್‌ನ​ ಮಹುವಾ ಮೊಯಿತ್ರಾ ಮತ್ತು ಇನ್ನಿತರ ಮಹಿಳಾ ಹಕ್ಕು ಹೋರಾಟಗಾರ್ತಿಯರು ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಅಲ್ಲದೆ 2022ರ ನವೆಂಬರ್‌ನಲ್ಲಿ ಬಾನೊ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿ ಕ್ಷಮಾದಾನದ ಕ್ರಮವನ್ನು ಪ್ರಶ್ನಿಸಿದಾಗ ಈ ವಿಚಾರ ದೇಶಾದ್ಯಂತ ಚರ್ಚೆ ಹುಟ್ಟು ಹಾಕಿತ್ತು. 1992ರ ಕ್ಷಮಾದಾನ ನೀತಿಯನ್ನು ತಪ್ಪಾಗಿ ಅರ್ಥೈಸಿಕೊಂಡು ಗುಜರಾತ್‌ ಸರ್ಕಾರ 11 ಅಪರಾಧಿಗಳನ್ನು ಅಕಾಲಿಕವಾಗಿ ಬಿಡುಗಡೆ ಮಾಡಿದೆ ಆರೋಪಿಸಲಾಗಿತ್ತು. ಅಪರಾಧಿಗಳ ಅಕಾಲಿಕ ಬಿಡುಗಡೆಯು ತನಗೆ ಮಾತ್ರವಲ್ಲ, ತನ್ನ ಹೆಣ್ಣುಮಕ್ಕಳು, ಕುಟುಂಬ ಮತ್ತು ಸಮಾಜಕ್ಕೆ ಆಘಾತವನ್ನುಂಟು ಮಾಡಿದೆ ಎಂದು ಬಾನು ಹೇಳಿದ್ದರು.

11 ಅತ್ಯಾಚಾರಿಗಳ ಬಿಡುಗಡೆ ಪ್ರಶ್ನಿಸಿ ಬಿಲ್ಕಿಸ್‌ ಬಾನೊ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ನೇತೃತ್ವದ ನ್ಯಾಯಪೀಠವು ತನಿಖೆಗೆ ವಿಶೇಷ ಪೀಠ ರಚನೆಗೆ ಸಮ್ಮತಿ ಸೂಚಿಸಿತ್ತು. ಸದ್ಯ ನಾಳೆ ಬರಲಿರುವ ತೀರ್ಪಿನ ಬಗ್ಗೆ ಎಲ್ಲರಲ್ಲೂ ಕುತೂಹಲ ಮೂಡಿದೆ.

ಇದನ್ನೂ ಓದಿ: Bilkis Bano Case | ಬಿಲ್ಕಿಸ್​ ಬಾನೊ ಅತ್ಯಾಚಾರ ಆರೋಪಿಗಳು ಮತ್ತೆ ಜೈಲು ಸೇರ್ತಾರಾ?

Exit mobile version