ನವ ದೆಹಲಿ: ತ್ರಿಪುರಾದಿಂದ ಖಾಲಿ ಇರುವ ರಾಜ್ಯ ಸಭಾ ಕ್ಷೇತ್ರದ ಉಪ ಚುನಾವಣೆಗೆ ಇಲ್ಲಿನ ಮಾಜಿ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇಬ್ರನ್ನು ಬಿಜೆಪಿ ನಾಮನಿರ್ದೇಶನ ಮಾಡಿದೆ. 2018ರಿಂದ ಮುಖ್ಯಮಂತ್ರಿಯಾಗಿದ್ದ ಅವರನ್ನು 2022ರ ಮೇ ತಿಂಗಳಲ್ಲಿ ಹುದ್ದೆಯಿಂದ ಕೆಳಗಿಳಿಸಿ, ಡಾ. ಮಾಣಿಕ್ ಶಾರನ್ನು ಸಿಎಂ ಮಾಡಲಾಗಿತ್ತು. ಮಾಣಿಕ್ ಶಾ ರಾಜ್ಯ ಸಭೆ ಸದಸ್ಯರಾಗಿದ್ದವರು ಮುಖ್ಯಮಂತ್ರಿಯಾದ ಬಳಿಕ ತಮ್ಮ ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು. ಹೀಗೆ ತೆರವಾದ ಸ್ಥಾನಕ್ಕೆ ಇದೀಗ ಉಪಚುನಾವಣೆ ನಡೆಯಲಿದ್ದು, ಬಿಜೆಪಿಯಿಂದ ಬಿಪ್ಲಬ್ ಕುಮಾರ್ ದೇಬ್ ಅಭ್ಯರ್ಥಿಯಾಗಿದ್ದಾರೆ. ಚುನಾವಣೆ ಸೆಪ್ಟೆಂಬರ್ 22ರಂದು ನಡೆಯಲಿದೆ.
ತನ್ನನ್ನು ರಾಜ್ಯಸಭಾ ಸದಸ್ಯನ ಸ್ಥಾನಕ್ಕೆ ನಾಮನಿರ್ದೇಶನ ಮಾಡಿದ್ದಕ್ಕೆ ಬಿಪ್ಲಬ್ ಕುಮಾರ್ ದೇಬ್ ಸಂತಸ ವ್ಯಕ್ತಪಡಿಸಿದ್ದಾರೆ. ಟ್ವೀಟ್ ಮಾಡಿರುವ ಅವರು, ‘ನನಗೆ ಹೀಗೊಂದು ಅವಕಾಶ ಕೊಟ್ಟಿದ್ದಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಗೃಹ ಸಚಿವ ಅಮಿತ್ ಶಾ’ ಅವರಿಗೆ ಧನ್ಯವಾದಗಳು ಎಂದು ಹೇಳಿದ್ದಾರೆ. ‘ತ್ರಿಪುರಾ ಮತ್ತು ಇಲ್ಲಿನ ಜನರ ಅಭಿವೃದ್ಧಿಗಾಗಿ ಕೆಲಸ ಮಾಡಲು ಸದಾ ಬದ್ಧನಾಗಿರುತ್ತೇನೆ’ ಎಂದೂ ತಿಳಿಸಿದ್ದಾರೆ. ತ್ರಿಪುರಾ ಮಾಜಿ ಮುಖ್ಯಮಂತ್ರಿ ಬಿಪ್ಲಬ್ ದೇಬ್ರನ್ನು ಇತ್ತೀಚೆಗಷ್ಟೇ ಹರ್ಯಾಣದ ಪಕ್ಷದ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದೆ. ಅದರ ಬೆನ್ನಲ್ಲೇ ರಾಜ್ಯಸಭೆಗೂ ನಾಮ ನಿರ್ದೇಶನ ಮಾಡಲಾಗಿದೆ.
ಇದನ್ನೂ ಓದಿ: ಉಪಚುನಾವಣೆ: ಅಜಂಗಢ, ರಾಮ್ ಪುರ ಎಸ್ಪಿ ಕಡೆಗೆ, ಸಂಗ್ರೂರ್‌ನಲ್ಲಿ ಆಪ್‌ಗೆ ಟೈಟ್ ಫೈಟ್, ತ್ರಿಪುರಾ ಸಿಎಂ ವಿನ್