Site icon Vistara News

Birds in Danger: ಭಾರತದಲ್ಲಿ 178 ಪಕ್ಷಿ ಪ್ರಭೇದಗಳು ಅಳಿವಿನಂಚಿನಲ್ಲಿ!

indian bird

ಹೊಸದಿಲ್ಲಿ. ಭಾರತದಲ್ಲಿರುವ ಅನೇಕ ಪಕ್ಷಿ ಪ್ರಭೇದಗಳು (Indian bird species) ತೀವ್ರ ವೇಗವಾಗಿ ನಶಿಸುತ್ತಿವೆ ಎಂದು ಆಘಾತಕಾರಿ ಸತ್ಯ ವರದಿಯಾಗಿದೆ. 178 ಪಕ್ಷಿ ಪ್ರಭೇದಗಳನ್ನು “ಹೆಚ್ಚಿನ ಸಂರಕ್ಷಣೆಯ ಆದ್ಯತೆ ಹೊಂದಿರುವ ಪಕ್ಷಿ ಪ್ರಭೇದಗಳು” ಎಂದು (birds in danger) ವರ್ಗೀಕರಿಸಲಾಗಿದೆ. ಅಂದರೆ ಕೆಲವೇ ವರ್ಷಗಳಲ್ಲಿ ಇವು ಸಂಖ್ಯೆಯಲ್ಲಿ ಗಣನೀಯ ಕುಸಿತ ಕಂಡಿವೆ.

ಶುಕ್ರವಾರ ದಿಲ್ಲಿಯಲ್ಲಿ ಬಿಡುಗಡೆಯಾದ ʼಸ್ಟೇಟ್ ಆಫ್ ಇಂಡಿಯನ್ ಬರ್ಡ್ಸ್- 2023ʼ ವರದಿಯಲ್ಲಿ ಇದು ತಿಳಿದುಬಂದಿದೆ. ಇದು ಸಂಶೋಧನಾತ್ಮಕ ವರದಿ. 2020ರಲ್ಲಿ ನೀಡಲಾದ ಈ ಹಿಂದಿನ ವರದಿಯಲ್ಲಿ ಈ ಸಂಖ್ಯೆ 101ರಲ್ಲಿತ್ತು. ಇದೀಗ ಹೆಚ್ಚಿದೆ. ಭಾರತದ ಪಕ್ಷಿ ಪ್ರಭೇದಗಳು (indian birds) ಸಂಖ್ಯೆಯಲ್ಲಿ ಗಮನಾರ್ಹ ಕುಸಿತ ಎದುರಿಸುತ್ತಿವೆ. ಸುಮಾರು 60% ಪಕ್ಷಿ ಪ್ರಭೇದಗಳು ದೀರ್ಘಾವಧಿಯ ಕುಸಿತವನ್ನು ದಾಖಲಿಸುತ್ತಿವೆ. 40% ಹಕ್ಕಿಗಳು ವಾರ್ಷಿಕ ಕುಸಿತವನ್ನು ತೋರಿಸುತ್ತಿವೆ. ತೆರೆದ ಪರಿಸರ ವ್ಯವಸ್ಥೆಯಲ್ಲಿ ಜೀವಿಸುತ್ತಿರುವ ಹಕ್ಕಿಗಳು ಬಲು ಬೇಗ ಕಡಿಮೆಯಾಗುತ್ತಿವೆ. ಇವುಗಳ ಆವಾಸಸ್ಥಾನಗಳಿಗೆ ರಕ್ಷಣೆಯಿಲ್ಲ. ಆರ್ಕ್ಟಿಕ್‌ನಲ್ಲಿ ಸಂತಾನೋತ್ಪತ್ತಿ ಮಾಡುವ ಆದರೆ ಭಾರತದಲ್ಲಿ ಚಳಿಗಾಲ ಕಳೆಯುವ ವಲಸೆ ಹಕ್ಕಿಗಳ ಪ್ರಮಾಣದಲ್ಲಿ 50%ರಷ್ಟು ಕುಸಿತ ಕಂಡಿದೆ ಎಂದು ವರದಿ ತಿಳಿಸಿದೆ.

ಅಶೋಕ ಟ್ರಸ್ಟ್ ಫಾರ್ ರಿಸರ್ಚ್ ಇನ್ ಎಕಾಲಜಿ ಆಂಡ್ ದಿ ಎನ್ವಿರಾನ್‌ಮೆಂಟ್ (ATREE), ಸೆಂಟರ್ ಫಾರ್ ಎಕಾಲಾಜಿಕಲ್ ಸೈನ್ಸಸ್, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (CES, IISc), ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ (BNHS) ನಂತಹ 13 ಪ್ರಮುಖ ಸಂಸ್ಥೆಗಳ ಸುಮಾರು 50 ತಜ್ಞರು ಈ ವರದಿಯನ್ನು ತಯಾರಿಸಿದ್ದಾರೆ. ಫೌಂಡೇಶನ್ ಫಾರ್ ಇಕೊಲಾಜಿಕಲ್ ಸೆಕ್ಯುರಿಟಿ (FES), ಮತ್ತು ನೇಚರ್ ಕನ್ಸರ್ವೇಶನ್ ಫೌಂಡೇಶನ್ (NCF), ಹುಲ್ಲುಗಾವಲು, ಜೌಗು ಪ್ರದೇಶ, ಕಾಡುಪ್ರದೇಶ ಮತ್ತು ತೆರೆದ ಆವಾಸಸ್ಥಾನದ ಪಕ್ಷಿಗಳು ಬಹಳ ವೇಗವಾಗಿ ಕ್ಷೀಣಿಸುತ್ತಿವೆ ಎಂದು ಬಹಿರಂಗಪಡಿಸಿವೆ. ಪಶ್ಚಿಮ ಘಟ್ಟಗಳು ಮತ್ತು ಶ್ರೀಲಂಕಾದ ಸ್ಥಳೀಯ ಪ್ರಭೇದಗಳು ವಿಶೇಷವಾಗಿ ಅಪಾಯದಲ್ಲಿವೆ. ಆದರೆ ಸಾಮಾನ್ಯ ಜಾತಿಗಳಾದ ಫೆರಲ್ ರಾಕ್ ಪಾರಿವಾಳ, ಆಶಿ ಪ್ರಿನಿಯಾ, ಏಷ್ಯನ್ ಕೋಗಿಲೆ ಮತ್ತು ಇಂಡಿಯನ್ ಕಾಡುಕೋಳಿ ಅಭಿವೃದ್ಧಿ ಹೊಂದುತ್ತಿವೆ. ಬಯಾ ವೀವರ್ ಮತ್ತು ಪೈಡ್ ಬುಶ್ಚಾಟ್‌ನಂತಹ ಇತರ ಪರಿಚಿತ ಜಾತಿಗಳ ಸಂಖ್ಯೆಗಳು ಸಹ ಸ್ಥಿರವಾಗಿವೆ.

ಹದ್ದುಗಳು ಮತ್ತು ಕೋರ್ಸರ್‌ಗಳಂತಹ ತೆರೆದ ಆವಾಸಸ್ಥಾನದ ಕೆಲವು ಜಾತಿಗಳು, ಸ್ಕಿಮ್ಮರ್‌ಗಳು, ನದಿ ದಂಡೆಯಲ್ಲಿ ಗೂಡುಕಟ್ಟುವ ಟರ್ನ್‌ಗಳಂತಹ ಪಕ್ಷಿಗಳು, ಕರಾವಳಿ ತೀರದ ಹಕ್ಕಿಗಳು, ರಾಪ್ಟರ್‌ಗಳು, ಕೆಲವು ಬಗೆಯ ಬಾತುಕೋಳಿಗಳು ಕಡಿಮೆಯಾಗುತ್ತಿವೆ. “ಅಷ್ಟೇ ಆತಂಕಕಾರಿ ಸಂಗತಿಯೆಂದರೆ, ಇನ್ನಷ್ಟು ಪ್ರಭೇದಗಳನ್ನು ಮೌಲ್ಯಮಾಪನ ಮಾಡಲು ಬೇಕಾದಷ್ಟು ದತ್ತಾಂಶ ಸಿಗುತ್ತಿಲ್ಲ. ದತ್ತಾಂಶದ ಕೊರತೆಯಿಂದಾಗಿ ಈ ವರದಿಯಲ್ಲಿರುವ 942 ಜಾತಿಗಳಲ್ಲಿ ದೀರ್ಘಾವಧಿಯ ಬೆಳವಣಿಗೆ ಏನಿದೆ ಎಂದು ಲೆಕ್ಕಹಾಕಲು ಸಾಧ್ಯವಾಗಿಲ್ಲʼʼ ಎಂದು ಸಂಶೋಧಕರು ಹೇಳಿದ್ದಾರೆ.

ಕಳೆದ ಸಲದ ವರದಿ ಭಾರತದಲ್ಲಿ ನಿಯಮಿತವಾಗಿ ಸಿಗುವ ಸರಿಸುಮಾರು 1,200 ಜಾತಿಗಳಲ್ಲಿ 867 ಜಾತಿಗಳನ್ನು ಮೌಲ್ಯಮಾಪನ ಮಾಡಿತ್ತು. ಪ್ರಸ್ತುತ ವರದಿ 942 ಪ್ರಭೇದಗಳನ್ನು ಅವಲೋಕಿಸಿದೆ. ದೇಶಾದ್ಯಂತ 30,000 ಪಕ್ಷಿವೀಕ್ಷಕರು ಸಂಗ್ರಹಿಸಿದ 3 ಕೋಟಿ ದಾಖಲೆಗಳ ಮೇಲೆ ಈ ವರದಿ ಬರೆಯಲಾಗಿದೆ.

ಎಲ್ಲ ಕಡೆ ಕಾಣಸಿಗುವ ಪಕ್ಷಿಗಳಿಗೆ ಹೋಲಿಸಿದರೆ, ವಿಶೇಷ ಆವಾಸಸ್ಥಾನದ ಅಗತ್ಯ ಹೊಂದಿರುವ ಪಕ್ಷಿಗಳು ಹೆಚ್ಚು ಅಪಾಯದಲ್ಲಿವೆ. ಹುಲ್ಲುಗಾವಲಿನ ಪಕ್ಷಿಗಳು 50%ಕ್ಕಿಂತ ಹೆಚ್ಚು, ಕಾಡುಪ್ರದೇಶದ ಹಕ್ಕಿಗಳು ಕೂಡ ಗಣನೀಯ ಅಪಾಯದಲ್ಲಿವೆ. ವಲಸೆಯ ಸಮಯದಲ್ಲಿ ಎದುರಿಸುವ ಅಪಾಯಗಳು, ಹವಾಮಾನ ವೈಪರೀತ್ಯಗಳು, ಹಸಿವು, ಬೇಟೆ, ಸೇರಿದಂತೆ ಹಲವಾರು ಕಾರಣಗಳಿಂದ ವಲಸೆ ಹಕ್ಕಿಗಳು ಅವನತಿ ಎದುರಿಸುತ್ತಿವೆ. ಆರ್ಕ್ಟಿಕ್‌ನಲ್ಲಿ ಸಂತಾನೋತ್ಪತ್ತಿ ಮಾಡುವ ವಲಸೆ ಹಕ್ಕಿಗಳು ಹವಾಮಾನ ಬದಲಾವಣೆಯ (climate change) ಅತ್ಯಂತ ಗಂಭೀರ ಪರಿಣಾಮಗಳನ್ನು ಎದುರಿಸುತ್ತಿವೆ. ವಲಸೆ ಜಾತಿಗಳ ಪ್ರಮಾಣ 50%ಕ್ಕಿಂತಲೂ ಕಡಿಮೆಯಾಗಿದೆ.

ಇದನ್ನೂ ಓದಿ: Birds Divorce: ಮನುಷ್ಯರು ಮಾತ್ರವಲ್ಲ‌, ಪಕ್ಷಿಗಳಲ್ಲೂ ಇದೆ ಡಿವೋರ್ಸ್ ಪದ್ಧತಿ; ಹೇಗೆ ಅನ್ನೋದೇ ಅಚ್ಚರಿ

Exit mobile version