ನವದೆಹಲಿ: ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ಮೇ 12ರಿಂದ ನಡೆಯುವ ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ತಾವು ಭಾಗವಹಿಸುತ್ತಿಲ್ಲ ಎಂದು ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಸ್ಪಷ್ಟಪಡಿಸಿದ್ದಾರೆ.
ಮೇ 12ರಿಂದ 15ರವರೆಗೆ ನಡೆಯವ ಈ ಮಹತ್ವದ ಕಾರ್ಯಕಾರಿಣಿಯಲ್ಲಿ ದ್ರಾವಿಡ್ ಭಾಗವಹಿಸಿ ಯುವಜನರಿಗೆ ಮಾರ್ಗದರ್ಶನ ನೀಡಲಿದ್ದಾರೆ ಎಂದು ಅಲ್ಲಿನ ಬಿಜೆಪಿ ಶಾಸಕ ವಿಶಾಲ್ ನಹೇರಿಯಾ ಪತ್ರಕರ್ತರಿಗೆ ಮಾಹಿತಿ ನೀಡಿದ್ದರು.
ಆದರೆ, ಈ ಮಾಹಿತಿ `ಸರಿಯಲ್ಲ’ ಎಂದು ಸ್ವತಃ ದ್ರಾವಿಡ್ ಹೇಳಿಕೆ ನೀಡಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ನಡೆಯುವ ಸಭೆಯೊಂದರಲ್ಲಿ ನಾನು ಭಾಗವಹಿಸುವೆ ಎಂದು ಕೆಲವು ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ, ಈ ವರದಿ ಸರಿಯಲ್ಲ ಎಂದು ಸ್ಪಷ್ಟಪಡಿಸಲು ಬಯಸುತ್ತೇನೆ ಎಂದು ದ್ರಾವಿಡ್ ಹೇಳಿದ್ದಾರೆ.
ಚುನಾವಣೆಯ ಹೊಸ್ತಿಲಲ್ಲಿರುವ ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಮತ್ತೊಮ್ಮೆ ಗೆಲುವಿನ ಪ್ರಯತ್ನದಲ್ಲಿದೆ. ಈ ನಿಟ್ಟಿನಲ್ಲಿ ಯುವ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿಣಿಯನ್ನು ಅಲ್ಲೇ ಆಯೋಜಿಸಲಾಗಿದೆ. ಇದರಲ್ಲಿ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಸೇರಿದಂತೆ ಎಲ್ಲ ಹಿರಿಯ ನಾಯಕರು ಭಾಗವಹಿಸುತ್ತಿದ್ದಾರೆ. ಚುನಾವಣೆ ಕಾರ್ಯತಂತ್ರದ ಬಗ್ಗೆಯೇ ಪ್ರಧಾನವಾಗಿ ಚರ್ಚೆ ನಡೆಯುವ ಈ ಕಾರ್ಯಕಾರಿಣಿಯಲ್ಲಿ ದ್ರಾವಿಡ್ ರಾಜಕೀಯೇತರ ವಿಷಯಗಳಲ್ಲೂ ಯುವಜನರಿಗೆ ಇರುವ ಭವಿಷ್ಯದ ಬಗ್ಗೆ ಮಾತನಾಡಲಿದ್ದಾರೆ ಎಂದು ಶಾಸಕರು ಹೇಳಿದ್ದರು.
ಆದರೆ, ವಿವಾದಗಳಿಂದ ಸದಾ ದೂರ ಇರುವ, ಎಲ್ಲರೊಂದಿಗೆ ಚನ್ನಾಗಿ ಬೆರೆಯುವ ರಾಹುಲ್ ದ್ರಾವಿಡ್ ಪಕ್ಷವೊಂದರ ವೇದಿಕೆ ಏರುತ್ತಾರಾ? ಬಿಸಿಸಿಐ ಇದಕ್ಕೆ ಅವಕಾಶ ನೀಡುತ್ತದೆಯಾ ಎನ್ನುವ ಚರ್ಚೆ ವ್ಯಾಪಕವಾಗಿತ್ತು. ಇದಕ್ಕೆ ಈಗ ಸ್ವತಃ ರಾಹುಲ್ ದ್ರಾವಿಡ್ ಅವರೇ ಸ್ಪಷ್ಟೀಕರಣ ನೀಡುವ ಮೂಲಕ ತೆರೆ ಎಳೆದಿದ್ದಾರೆ.
ಪ್ರಧಾನ ಸುದ್ದಿಯನ್ನು ಇಲ್ಲಿ ಓದಿ : RAHUL DRAVID ಬಿಜೆಪಿ ಸೇರಿದ್ರಾ ಹೇಗೆ? ಯುವಮೋರ್ಚಾ ಕಾರ್ಯಕಾರಿಣಿಯಲ್ಲಿ ಭಾಗಿ, ನೋ ಎಂದ ಬಿಸಿಸಿಐ