ಭೋಪಾಲ್: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕೈಗೊಳ್ಳುತ್ತಿರುವ ಭಾರತ್ ಜೋಡೋ ಯಾತ್ರೆಯು ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗುತ್ತದೆ. ಇದರ ಮಧ್ಯೆಯೇ ಒಂದಷ್ಟು ವಿವಾದಗಳೂ ತಳಕು ಹಾಕಿಕೊಳ್ಳುತ್ತಿವೆ. ಇದಕ್ಕೆ ನಿದರ್ಶನ ಎಂಬಂತೆ, ಮಧ್ಯಪ್ರದೇಶದಲ್ಲಿ ರಾಹುಲ್ ಗಾಂಧಿ ಪಾದಯಾತ್ರೆ ಕೈಗೊಳ್ಳುವ ವೇಳೆ ಪಾಕಿಸ್ತಾನ್ ಜಿಂದಾಬಾದ್ (Pro Pak Slogan) ಎಂಬ ಘೋಷಣೆ ಕೂಗಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಭಾರತ್ ಜೋಡೋ ಯಾತ್ರೆಯು ಮಧ್ಯಪ್ರದೇಶ ಪ್ರವೇಶಿಸಿದ್ದು, ರಾಜ್ಯದಲ್ಲಿ ಮೂರನೇ ದಿನದ ಪಾದಯಾತ್ರೆ ನಡೆಯುತ್ತಿದೆ. ಇದರ ಬೆನ್ನಲ್ಲೇ, ರಾಹುಲ್ ಗಾಂಧಿ ಅವರು ಪಾದಯಾತ್ರೆ ಕೈಗೊಳ್ಳುವಾಗ ಒಂದಷ್ಟು ಜನ ಪಾಕ್ ಪರ ಘೋಷಣೆ ಕೂಗಿದ್ದಾರೆ ಎಂದು ಬಿಜೆಪಿ ಆರೋಪಿಸಿದ್ದಾರೆ. ಅಲ್ಲದೆ ಈ ಕುರಿತ ವಿಡಿಯೊ ವೈರಲ್ ಆಗಿದೆ.
“ಭಾರತ್ ಜೋಡೋ ಯಾತ್ರೆ ವೇಳೆ ಪಾಕಿಸ್ತಾನದ ಪರ ಘೋಷಣೆ ಕೂಗಲಾಗಿದೆ. ಇದು ಭಾರತವನ್ನು ಜೋಡಿಸುವ ಯಾತ್ರೆಯೋ ಅಥವಾ ಭಾರತವನ್ನು ಇಬ್ಭಾಗ ಮಾಡುವ ಯಾತ್ರೆಯೋ? ಪಾಕ್ ಪರ ಘೋಷಣೆ ಕೂಗಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು” ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಟ್ವೀಟ್ ಮಾಡಿದ್ದಾರೆ.
ಕಾಂಗ್ರೆಸ್ ಹೇಳುವುದೇನು?
ಪಾಕಿಸ್ತಾನದ ಪರ ಘೋಷಣೆ ಕೂಗಿರುವ ಕುರಿತು ಬಿಜೆಪಿ ಆರೋಪಕ್ಕೆ ಕಾಂಗ್ರೆಸ್ ಪ್ರತ್ಯುತ್ತರ ನೀಡಿದೆ. “ಭಾರತ್ ಜೋಡೋ ಯಾತ್ರೆಯ ಯಶಸ್ಸನ್ನು ಸಹಿಸದ ಬಿಜೆಪಿಯು ಇಂತಹ ಕುತಂತ್ರ ಮಾಡುತ್ತಿದೆ. ಬಿಜೆಪಿ ನಾಯಕರು ತಿರುಚಿದ ವಿಡಿಯೊವನ್ನು ಶೇರ್ ಮಾಡುತ್ತಿದ್ದಾರೆ. ನಾವು ಇದರ ವಿರುದ್ಧ ಕಾನೂನು ಹೋರಾಟ ಮಾಡುತ್ತೇವೆ” ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ | Video | ಭಾರತ್ ಜೋಡೋ ಯಾತ್ರೆಯಲ್ಲಿ ಮೊಳಗಿದ ನೇಪಾಳ ರಾಷ್ಟ್ರಗೀತೆ; ಮುಖಮುಖ ನೋಡಿಕೊಂಡ ಕಾಂಗ್ರೆಸ್ ನಾಯಕರು!