ನವದೆಹಲಿ: ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಗೆ (Himachal Pradesh Election) ಒಂದೇ ಹಂತದಲ್ಲಿ ನವೆಂಬರ್ 12ರಂದು ಮತದಾನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ಗಳೆರಡು ಪಕ್ಷಗಳು ತಮ್ಮ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿವೆ. ಬಿಜೆಪಿಯು 62 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದೇ ವೇಳೆ ಕಾಂಗ್ರೆಸ್ ಕೂಡ 46 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಮಂಗಳವಾರವೇ ರಿಲೀಸ್ ಮಾಡಿದೆ. ಹಿಮಾಚಲ ಪ್ರದೇಶದಲ್ಲಿ ಒಟ್ಟು 68 ವಿಧಾನಸಭೆ ಕ್ಷೇತ್ರಗಳಿವೆ.
ಜೆಪಿ ನಡ್ಡಾ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಬಿಜೆಪಿಯ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲಾಯಿತು. ಈ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ , ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಪಕ್ಷದ ಚುನಾವಣಾ ಸಮಿತಿಯ ಇತರ ಸದಸ್ಯರು ಪಾಲ್ಗೊಂಡಿದ್ದರು. ಹಿಮಾಚಲ ಪ್ರದೇಶದ ಸಿಎ ಜೈ ರಾಮ್ ಠಾಕೂರ್ ಅವರು ಸೇರಾಜ್ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.
ಇದೇ ವೇಳೆ, ಪ್ರತಿಪಕ್ಷ ನಾಯಕರಾಗಿರುವ ಕಾಂಗ್ರೆಸ್‌ನ ಮುಕೇಶ್ ಅಗ್ನಿಹೋತ್ರಿ ಅವರು ಉನಾ ಜಿಲ್ಲೆಯ ಹರೋಳಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ರಾಜ್ಯ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಸುಖ್ವಿಂದರ್ ಸಿಂಗ್ ಸುಖು ಹಾಗೂ ಕುಲ್ದೀಪ್ ಸಿಂಗ್ ರಾಥೋರ್ ಅವರು ನಾದೌನ್ ಮತ್ತು ಥಿಯೋಗ್ ಕ್ಷೇತ್ರಗಳಿಂದ ಸ್ಪರ್ಧಿಸಲಿದ್ದಾರೆ. ಮಾಜಿ ಸಚಿವೆಯೂ ಆಗಿರುವ ಎಐಸಿಸಿ ಕಾರ್ಯದರ್ಶಿ ಆಶಾ ಕುಮಾರಿ ಅವರು ಡಾಲ್‌ಹೌಸಿ ಕ್ಷೇತ್ರದಿಂದ ಕಣಕ್ಕಿಳಿಯುವುದು ಪಕ್ಕಾ ಆಗಿದೆ.
ಕೇಂದ್ರ ಚುನಾವಣಾ ಆಯೋಗವು ಕಳೆದ ವಾರ ಪತ್ರಿಕಾಗೋಷ್ಠಿ ನಡೆಸಿ, ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯ ವೇಳಾಪಟ್ಟಿಯನ್ನು ಘೋಷಣೆ ಮಾಡಿತ್ತು. ನವೆಂಬರ್ 12ರಂದು ಒಂದೇ ಹತದಲ್ಲಿ ಹಿಮಾಚಲ ಪ್ರದೇಶದ 68 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಡಿಸೆಂಬರ್ 8 ರಂದು ಮತ ಎಣಿಕೆ ನಡೆಯಲಿದೆ. ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಅಕ್ಟೋಬರ್ 17ರಿಂದ ಆರಂಭವಾಗಿದ್ದು, ಅಕ್ಟೋಬರ್ 25ರವರೆಗೆ ನಡೆಯಲಿದೆ. ನಾಮಪತ್ರಗಳನ್ನು ಹಿಂಪಡೆಯಲು ಅಕ್ಟೋಬರ್ 29 ಕೊನೆಯ ದಿನವಾಗಿದೆ.
ಇದನ್ನೂ ಓದಿ | Election Commission | ಹಿಮಾಚಲ ಪ್ರದೇಶದಲ್ಲಿ ನ.12ರಂದು ವಿಧಾನಸಭೆ ಚುನಾವಣೆ, ಒಂದೇ ಹಂತದಲ್ಲಿ ಮತದಾನ