Site icon Vistara News

Mann Ki Baat: ಮೋದಿ ಮನ್‌ ಕಿ ಬಾತ್‌ಗೆ ಕಿವಿಯಾಗಲಿದೆ ಜಗತ್ತು, 100ನೇ ಆವೃತ್ತಿ ಹಿನ್ನೆಲೆ ಬಿಜೆಪಿ ಬಿಗ್ ಪ್ಲಾನ್‌ ಏನು?

BJP Big Plan Narendra Modi's Mann Ki Baat 100th episode to broadcast worldwide

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿ ತಿಂಗಳ ಕೊನೆಯ ಭಾನುವಾರ ನಡೆಸಿಕೊಡುವ ಮನ್‌ ಕಿ ಬಾತ್‌ (Mann Ki Baat) ರೇಡಿಯೊ ಕಾರ್ಯಕ್ರಮ ಹೆಚ್ಚು ಖ್ಯಾತಿಯಾಗಿದೆ. ಭಾರತದ ಕೋಟ್ಯಂತರ ಜನ ಅದನ್ನು ಕೇಳುತ್ತಾರೆ. ನರೇಂದ್ರ ಮೋದಿ ಅವರೂ ದೇಶದ ಅಭಿವೃದ್ಧಿ, ತಂತ್ರಜ್ಞಾನ, ಕೃಷಿ, ಸಿರಿಧಾನ್ಯ, ಬಾಲ ಪ್ರತಿಭೆಗಳಿಂದ ಹಿಡಿದು ಎಲ್ಲ ವಿಷಯಗಳ ಕುರಿತು ಮಾಹಿತಿ ಹಂಚಿಕೊಳ್ಳುತ್ತಾರೆ. ಇಂತಹ ಮನ್‌ ಕಿ ಬಾತ್‌ ರೇಡಿಯೊ ಕಾರ್ಯಕ್ರಮವು ಏಪ್ರಿಲ್‌ 30ರಂದು 100ನೇ ಆವೃತ್ತಿ ಪೂರ್ಣಗೊಳಿಸಲಿದ್ದು, ಇದಕ್ಕಾಗಿ ಬಿಜೆಪಿ ಹಲವು ಯೋಜನೆ ರೂಪಿಸಿದೆ.

ನರೇಂದ್ರ ಮೋದಿ ಅವರ ರೇಡಿಯೊ ಕಾರ್ಯಕ್ರಮದ ಯಶಸ್ಸಿನ ಹಿನ್ನೆಲೆಯಲ್ಲಿ 100ನೇ ಆವೃತ್ತಿಯ ಕಾರ್ಯಕ್ರಮವನ್ನು ಜಗತ್ತಿನಾದ್ಯಂತ ಬ್ರಾಡ್‌ಕಾಸ್ಟ್‌ ಮಾಡಲು ಬಿಜೆಪಿ ತೀರ್ಮಾನಿಸಿದೆ. ಹಾಗಾಗಿ, ಏಪ್ರಿಲ್‌ 30ರ ಮನ್‌ ಕಿ ಬಾತ್‌ಗೆ ಜಗತ್ತೇ ಕಿವಿಯಾಗಲಿದೆ. ಹಾಗೆಯೇ, ಭಾರತದಲ್ಲೂ ಹತ್ತಾರು ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಬಿಜೆಪಿಯು ಹೆಚ್ಚಿನ ಜನರನ್ನು ತಲುಪಲು ಮುಂದಾಗಿದೆ.

“ನರೇಂದ್ರ ಮೋದಿ ಅವರು ಜಾಗತಿಕ ನಾಯಕರಾದ ಕಾರಣ ಮನ್‌ ಕಿ ಬಾತ್‌ ರೇಡಿಯೊ ಕಾರ್ಯಕ್ರಮದ 100ನೇ ಆವೃತ್ತಿಯನ್ನು ಜಗತ್ತಿನಾದ್ಯಂತ ಪ್ರಸಾರ ಮಾಡಲು ತೀರ್ಮಾನಿಸಲಾಗಿದೆ. ಜಗತ್ತಿನ ಬಹುತೇಕ ರಾಷ್ಟ್ರಗಳು ನರೇಂದ್ರ ಮೋದಿ ಅವರು ಕೈಗೊಂಡಿರುವ ಅಭಿವೃದ್ಧಿ ಕಾರ್ಯವನ್ನು ಮೆಚ್ಚಿದ್ದಾರೆ. ಹಾಗಾಗಿ, ಎಷ್ಟು ಸಾಧ್ಯವೋ, ಅಷ್ಟು ರಾಷ್ಟ್ರಗಳಲ್ಲಿ ಮನ್‌ ಕಿ ಬಾತ್‌ ಪ್ರಸಾರ ಮಾಡಲು ಪ್ರಯತ್ನಿಸಲಾಗುತ್ತಿದೆ” ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಪ್ರತಿ ಲೋಕಸಭೆ ಕ್ಷೇತ್ರದಲ್ಲೂ ಕಾರ್ಯಕ್ರಮ ಆಲಿಸಲು ವ್ಯವಸ್ಥೆ

“ದೇಶದ ಪ್ರತಿಯೊಂದು ಲೋಕಸಭೆ ಕ್ಷೇತ್ರದ 100 ಸ್ಥಳಗಳಲ್ಲಿ 100 ಜನ ಕುಳಿತು ಮನ್‌ ಕಿ ಬಾತ್‌ ಕಾರ್ಯಕ್ರಮ ಆಲಿಸಲು ವ್ಯವಸ್ಥೆ ಮಾಡಲಾಗುತ್ತಿದೆ. ವೈದ್ಯರು, ಎಂಜಿನಿಯರ್‌ಗಳು, ಶಿಕ್ಷಕರು ಹಾಗೂ ಸಮಾಜ ಸೇವಕರು ಕಾರ್ಯಕ್ರಮ ಆಲಿಸಲು ಸಿದ್ಧತೆ ನಡೆಸಲಾಗುತ್ತಿದೆ. ಹಾಗೆಯೇ, ಮೋದಿ ಅವರು ಮನ್‌ ಕಿ ಬಾತ್‌ನಲ್ಲಿ ಪ್ರಸ್ತಾಪಿಸಿದ ಗಣ್ಯರಿಗೆ ಆಯಾ ರಾಜ್ಯಗಳಲ್ಲಿ ಸನ್ಮಾನ ಮಾಡಲಾಗುತ್ತದೆ” ಎಂದು ಮೂಲಗಳಿಂದ ತಿಳಿದುಬಂದಿದೆ.

ಮನ್‌ ಕಿ ಬಾತ್‌ ಯಶಸ್ಸಿನ ಕೂರಿತು ದೇಶದ 1 ಲಕ್ಷಕ್ಕೂ ಅಧಿಕ ಬೂತ್‌ಗಳಲ್ಲಿ ವಿವಿಧ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದುಷ್ಯಂತ್‌ ಗೌತಮ್‌ ಹಾಗೂ ವಿನೋದ್‌ ತಾವ್ಡೆ ಅವರಿಗೆ ಮನ್‌ ಕಿ ಬಾತ್‌ ಕಾರ್ಯಕ್ರಮದ ಉಸ್ತುವಾರಿ ವಹಿಸಲಾಗಿದೆ. ನರೇಂದ್ರ ಮೋದಿ ಅವರು ಅಧಿಕಾರ ವಹಿಸಿಕೊಂಡ ಬಳಿಕ ಅಂದರೆ, 2014ರ ಅಕ್ಟೋಬರ್‌ 3ರಂದು ವಿಜಯ ದಶಮಿ ದಿನ ಮನ್‌ ಕಿ ಬಾತ್‌ ರೇಡಿಯೊ ಕಾರ್ಯಕ್ರಮ ಆರಂಭಿಸಿದ್ದರು. ಅಲ್ಲಿಂದ ಇಲ್ಲಿಯವರೆಗೆ ಮೋದಿ ನಿರಂತರವಾಗಿ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ.

ಇದನ್ನೂ ಓದಿ: Mann Ki Baat: ಇ ಸಂಜೀವಿನಿ ಆ್ಯಪ್, ಯುಪಿಐ ಕುರಿತು ಮನ್‌ ಕಿ ಬಾತ್‌ನಲ್ಲಿ ಮೋದಿ ಮೆಚ್ಚುಗೆ

Exit mobile version