Site icon Vistara News

ಮಹಿಳೆ ಜತೆ ರೊಮ್ಯಾನ್ಸ್‌ ವಿಡಿಯೊ;‌ ಚುನಾವಣೆ ಸ್ಪರ್ಧೆಯಿಂದ ಹಿಂದೆ ಸರಿದ ಬಿಜೆಪಿ ಸಂಸದ

Upendra Singh Rawat

BJP candidate Upendra Singh Rawat drops out of Lok Sabha polls amid obscene video row

ಲಖನೌ: ಲೋಕಸಭೆ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಯಾವುದೇ ಪಕ್ಷದ ಟಿಕೆಟ್‌ ಪಡೆಯಲು ನಾಯಕರು ಈಗಾಗಲೇ ಲಾಬಿ, ನಾಯಕರ ಓಲೈಕೆ ಸೇರಿ ಹಲವು ಪ್ರಯತ್ನಗಳಲ್ಲಿ ತೊಡಗಿದ್ದಾರೆ. ಇಂತಹ ಪರಿಸ್ಥಿತಿ ಇದ್ದರೂ ಉತ್ತರ ಪ್ರದೇಶದ ಬಾರಾಬಂಕಿ (Barabanki) ಸಂಸದ ಉಪೇಂದ್ರ ಸಿಂಗ್‌ ರಾವತ್‌ (Upendra Singh Rawat) ಅವರು ಬಿಜೆಪಿ ಟಿಕೆಟ್‌ ನೀಡಿದರೂ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂಬುದಾಗಿ ಘೋಷಿಸಿದ್ದಾರೆ. ಮಹಿಳೆಯೊಬ್ಬರ ಜತೆ ಅವರು ಆತ್ಮೀಯವಾಗಿದ್ದ ವಿಡಿಯೊ ವೈರಲ್‌ ಆದ ಬೆನ್ನಲ್ಲೇ, ಅವರು ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ.

“ಡೀಪ್‌ಫೇಕ್‌ ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ತಂತ್ರಜ್ಞಾನ ಬಳಸಿ, ಎಡಿಟ್‌ ಮಾಡಿದ ವಿಡಿಯೊವನ್ನು ವೈರಲ್‌ ಆಗಿದೆ. ನನ್ನ ವಿರುದ್ಧದ ಷಡ್ಯಂತ್ರದ ಭಾಗವಾಗಿ ಎಡಿಟ್‌ ಮಾಡಿದ ವಿಡಿಯೊ ವೈರಲ್‌ ಮಾಡಲಾಗಿದೆ. ಹಾಗಾಗಿ, ನಾನು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಿದ್ದೇನೆ. ಹಾಗೆಯೇ, ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ಎಂಬುದಾಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೆ ಮನವಿ ಮಾಡಿದ್ದೇನೆ. ಹಾಗೆಯೇ, ನಾನು ನಿರ್ದೋಷಿ ಎಂದು ಸಾಬೀತಾಗುವವರೆಗೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂಬುದಾಗಿಯೂ ಅಧ್ಯಕ್ಷರಿಗೆ ತಿಳಿಸಿದ್ದೇನೆ” ಎಂದು ಉಪೇಂದ್ರ ಸಿಂಗ್‌ ರಾವತ್‌ ಪೋಸ್ಟ್‌ ಮಾಡಿದ್ದಾರೆ.

ಉಪೇಂದ್ರ ಸಿಂಗ್‌ ರಾವತ್‌ ಅವರು ಮಹಿಳೆ ಜತೆ ಇರುವ, ಅಶ್ಲೀಲ ದೃಶ್ಯಗಳನ್ನು ಒಳಗೊಂಡ ವಿಡಿಯೊ ವೈರಲ್‌ ಆಗಿದ್ದು, ಇವರ ವಿರುದ್ಧ ಜನಾಕ್ರೋಶ ವ್ಯಕ್ತವಾಗುತ್ತಿದೆ. ಹಾಗಾಗಿ, ಅವರು 2024ರ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂಬುದಾಗಿ ಘೋಷಿಸಿದ್ದಾರೆ. ವಿಡಿಯೊ ವೈರಲ್‌ ಆಗಿರುವ ಹಿನ್ನೆಲೆಯಲ್ಲಿ ಉಪೇಂದ್ರ ಸಿಂಗ್‌ ರಾವತ್‌ ಅವರ ಆಪ್ತ ಸಹಾಯಕ ದಿನೇಶ್‌ ಚಂದ್ರ ರಾವತ್‌ ಅವರು ಅಪರಿಚಿತ ವ್ಯಕ್ತಿ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ. ಬಿಜೆಪಿಯು ಕೆಲ ದಿನಗಳ ಹಿಂದಷ್ಟೇ 195 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಉಪೇಂದ್ರ ಸಿಂಗ್‌ ರಾವತ್‌ ಅವರೂ ಟಿಕೆಟ್‌ ಗಿಟ್ಟಿಸಿಕೊಂಡಿದ್ದರು.

ಇದನ್ನೂ ಓದಿ: BJP Candidate List: ಗಡಿನಾಡು ಕಾಸರಗೋಡು ಕ್ಷೇತ್ರದಿಂದ ಟಿಕೆಟ್‌ ಗಿಟ್ಟಿಸಿಕೊಂಡ ಕನ್ನಡತಿ; ಯಾರು ಈ ಅಶ್ವಿನಿ?

ಪಶ್ಚಿಮ ಬಂಗಾಳದ ಅಸನ್ಸೋಲ್ ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿ ನೀಡಿದ ಟಿಕೆಟ್‌ಅನ್ನು ಭೋಜಪುರಿ ಗಾಯಕ ಮತ್ತು ನಟ ಪವನ್ ಸಿಂಗ್ ಅವರು ಕೂಡ ತಿರಸ್ಕರಿಸಿದ್ದಾರೆ. “ಭಾರತೀಯ ಜನತಾ ಪಕ್ಷದ ಉನ್ನತ ನಾಯಕತ್ವಕ್ಕೆ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ಅರ್ಪಿಸುತ್ತೇನೆ. ಪಕ್ಷವು ನನ್ನನ್ನು ನಂಬಿತು ಮತ್ತು ಪಶ್ಚಿಮ ಬಂಗಾಳದ ಅಸನ್ಸೋಲ್​ನಿಂದ ಅಭ್ಯರ್ಥಿಯಾಗಿ ಘೋಷಿಸಿದೆ. ಆದರೆ ಕೆಲವು ಕಾರಣಗಳಿಂದಾಗಿ ನಾನು ಅಸನ್ಸೋಲ್​ನಿಂದ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಾಗುವುದಿಲ್ಲ” ಎಂದು ಪವನ್ ಸಿಂಗ್ ಹೇಳಿಕೊಂಡಿದ್ದಾರೆ. ಅವರು ಟಿಕೆಟ್ ನಿರಾಕರಿಸಲು ನಿಖರ ಕಾರಣ ತಿಳಿಸಿಲ್ಲ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version