Site icon Vistara News

Rekha Patra: ಸಂದೇಶ್‌ಖಾಲಿ ಸಂತ್ರಸ್ತೆಗೆ ಟಿಕೆಟ್‌ ನೀಡಿದ ಬಿಜೆಪಿ; ಯಾರಿವರು ರೇಖಾ ಪಾತ್ರಾ?

Rekha Patra

BJP Candidates List: Sandeshkhali Victim Rekha Patra Gets Ticket To Contest From Basirhat

ಕೋಲ್ಕೊತಾ: ಲೋಕಸಭೆ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಬಿಜೆಪಿಯು 5ನೇ ಅಭ್ಯರ್ಥಿಗಳ ಪಟ್ಟಿ (BJP Candidates List) ಪಟ್ಟಿ ಬಿಡುಗಡೆ ಮಾಡಿದೆ. ಅದರಲ್ಲೂ, ಪಶ್ಚಿಮ ಬಂಗಾಳದ (West Bengal) ಸಂದೇಶ್‌ಖಾಲಿ ಹಿಂಸಾಚಾರದ (Sandeshkhali Violence) ಸಂತ್ರಸ್ತೆ ರೇಖಾ ಪಾತ್ರಾ (Rekha Patra) ಅವರಿಗೆ ಬಿಜೆಪಿ ಟಿಕೆಟ್‌ ನೀಡುವ ಮೂಲಕ ರಾಜಕೀಯ ರಣತಂತ್ರ ರೂಪಿಸಿದೆ. ರೇಖಾ ಪಾತ್ರಾ ಅವರನ್ನು ಬಿಜೆಪಿಯು ಬಸಿರ್‌ಹಾತ್‌ ಕ್ಷೇತ್ರದಿಂದ ಕಣಕ್ಕಿಳಿಸಿದೆ. ಇಲ್ಲೀಗ ಟಿಎಂಸಿ ಹಾಗೂ ಬಿಜೆಪಿ ಮಧ್ಯೆ ತೀವ್ರ ಪೈಪೋಟಿ ನಡೆಯಲಿದೆ.

ಯಾರಿವರು ರೇಖಾ ಪಾತ್ರಾ?

ಸಂದೇಶ್‌ಖಾಲಿಯಲ್ಲಿ ಟಿಎಂಸಿ ನಾಯಕ (ಈಗ ಉಚ್ಚಾಟಿತ ನಾಯಕ) ಶಹಜಹಾನ್‌ ಶೇಖ್‌ ಹಾಗೂ ಆತನ ಆಪ್ತರು ಬುಡಕಟ್ಟು ಮಹಿಳೆಯರಿಗೆ ಲೈಂಗಿಕ ಕಿರುಕುಳ, ಅವರ ಭೂಮಿ ಅತಿಕ್ರಮಣ ಸೇರಿ ಹಲವು ರೀತಿಯ ದೌರ್ಜನ್ಯ ಎಸಗಿದ್ದಾರೆ. ಇಂತಹ ದೌರ್ಜನ್ಯಕ್ಕೆ ರೇಖಾ ಪಾತ್ರಾ ಅವರು ಕೂಡ ಬಲಿಯಾಗಿದ್ದು, ರಾಜಕೀಯ ಹಿಂಸಾಚಾರದ ಸಂತ್ರಸ್ತೆಯಾಗಿದ್ದಾರೆ. ಇವರು ಶಹಜಹಾನ್‌ ಶೇಖ್‌ ವಿರುದ್ಧ ಪ್ರಕರಣ ದಾಖಲಿಸಿದ ಮೊದಲ ಸಂತ್ರಸ್ತೆಯಾಗಿದ್ದಾರೆ. ಟಿಎಂಸಿ ವಿರುದ್ಧ ಹೋರಾಟ ತೀವ್ರಗೊಳ್ಳಲು ಇವರು ಕೂಡ ಕಾರಣರಾಗಿದ್ದಾರೆ.

ಸಂತ್ರಸ್ತೆಯರ ಪರ ಹೋರಾಡುವೆ

ಬಿಜೆಪಿಯು ಟಿಕೆಟ್‌ ಘೋಷಣೆ ಮಾಡುತ್ತಲೇ ರೇಖಾ ಪಾತ್ರಾ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. “ನನಗೆ ಟಿಕೆಟ್‌ ನೀಡಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳು. ಸಂದೇಶ್‌ಖಾಲಿಯಲ್ಲಿ ಹಿಂಸಾಚಾರದಿಂದ ತತ್ತರಿಸಿಹೋಗಿರುವ ಸಂತ್ರಸ್ತೆಯರ ಪರವಾಗಿ ಮುಂದಿನ ದಿನಗಳಲ್ಲೂ ಹೋರಾಡುವೆ. ಸಂದೇಶ್‌ಖಾಲಿ ಸಂತ್ರಸ್ತೆಯರಿಗೆ ನಾನು ನ್ಯಾಯ ಒದಗಿಸುತ್ತೇನೆ” ಎಂದು ಹೇಳಿದ್ದಾರೆ. ಸಂದೇಶ್‌ಖಾಲಿ ಹಿಂಸಾಚಾರಕ್ಕೆ ಕಾರಣವಾದ ಶಹಜಹಾನ್‌ ಶೇಖ್‌ನನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ.

ಇದನ್ನೂ ಓದಿ: Varun Gandhi: ವರುಣ್‌ ಗಾಂಧಿಗೆ ಟಿಕೆಟ್‌ ಇಲ್ಲ; ಮನೇಕಾಗೆ ಮಣೆ, ಮಿಸ್‌ ಆದವರ ಪಟ್ಟಿ ಇಲ್ಲಿದೆ

ಕೆಲ ದಿನಗಳ ಹಿಂದಷ್ಟೇ ಕೋಲ್ಕೊತಾ ನ್ಯಾಯಮೂರ್ತಿ ಹುದ್ದೆಗೆ ರಾಜೀನಾಮೆ ನೀಡಿ, ಬಿಜೆಪಿ ಸೇರ್ಪಡೆಯಾಗಿದ್ದ ನ್ಯಾ. ಅಭಿಜಿತ್‌ ಗಂಗೋಪಾಧ್ಯಾಯ ಅವರಿಗೆ ಬಿಜೆಪಿ ಟಿಕೆಟ್‌ ನೀಡಿದೆ. ಅಭಿಜಿತ್‌ ಗಂಗೋಪಾಧ್ಯಾಯ ಅವರು ಪಶ್ಚಿಮ ಬಂಗಾಳದ ತಮ್ಲುಕ್‌ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಆದರೆ, ಇಬ್ಬರು ಕೇಂದ್ರ ಸಚಿವರಾದ ಅಶ್ವಿನಿ ಕುಮಾರ್‌ ಚೌಬೆ, ವಿ.ಕೆ. ಸಿಂಗ್‌ ಅವರಿಗೆ ಬಿಜೆಪಿ ಟಿಕೆಟ್‌ ನಿರಾಕರಿಸಿದೆ.

ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್‌ ಅವರು ಸಂಬಲ್ಪುರ ಕ್ಷೇತ್ರದಿಂದ ಮತ್ತೆ ಸ್ಪರ್ಧಿಸುತ್ತಿದ್ದಾರೆ. 2019ರ ಲೋಕಸಭೆ ಚುನಾವಣೆಯಲ್ಲಿ ಸೋಲನುಭವಿಸಿದ್ದ ಪಕ್ಷದ ವಕ್ತಾರ ಸಂಬಿತ್‌ ಪಾತ್ರಾ ಅವರಿಗೆ ಒಡಿಶಾದ ಪುರಿ ಕ್ಷೇತ್ರದಿಂದಲೇ ಮತ್ತೆ ಕಣಕ್ಕಿಳಿಸಲಾಗಿದೆ. ಜಾರ್ಖಂಡ್‌ ಮುಕ್ತಿ ಮೋರ್ಚಾ ಮುಖ್ಯಸ್ಥ ಶಿಬು ಸೊರೇನ್‌ ಅವರ ಸೊಸೆ ಸೀತಾ ಸೊರೇನ್‌ ಅವರಿಗೆ ಜಾರ್ಖಂಡ್‌ನ ಡುಮ್ಕಾ ಕ್ಷೇತ್ರದಿಂದ ಟಿಕೆಟ್‌ ನೀಡಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version