ನವದೆಹಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಪತ್ನಿಯ ಕಾರು ದೆಹಲಿಯಲ್ಲಿ ಕಳ್ಳತನವಾಗಿದೆ ಎಂದು ತಿಳಿದುಬಂದಿದೆ. ಜೆ.ಪಿ. ನಡ್ಡಾ (JP Nadda) ಅವರ ಪತ್ನಿ ಮಲ್ಲಿಕಾ ನಡ್ಡಾ (Mallika Nadda) ಅವರ ಟೊಯೋಟಾ ಫಾರ್ಚುನರ್ (Toyota Fortuner) ಕಳ್ಳತನವಾಗಿದೆ. ದೆಹಲಿಯ ಗೋವಿಂದ್‌ಪುರಿಯಲ್ಲಿ (Govindpuri) ಕಾರು ಸರ್ವಿಸ್‌ಗೆ ಕೊಟ್ಟಾಗ ಸರ್ವಿಸ್ ಸೆಂಟರ್‌ನಿಂದಲೇ ಕಳ್ಳತನ ಮಾಡಲಾಗಿದೆ ಎಂದು ತಿಳಿದುಬಂದಿದೆ. ಕಾರು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಲಾಗಿದ್ದು, ಪೊಲೀಸರು ಶೋಧ ಆರಂಭಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹಿಮಾಚಲ ಪ್ರದೇಶದಲ್ಲಿ ನೋಂದಣಿಯಾದ ಎಚ್‌ಪಿ 03 ಡಿ 0021 ನಂಬರ್‌ನ ಕಾರನ್ನು ಸರ್ವಿಸ್ ಮಾಡಿಸಲು ಚಾಲಕ ಜೋಗಿಂದರ್ ಸಿಂಗ್ ಅವರು ಮಾರ್ಚ್ 19ರಂದು ಗೋವಿಂದ್‌ಪುರಿಗೆ ತೆಗೆದುಕೊಂಡು ಹೋಗಿದ್ದರು. ಕಾರನ್ನು ಸರ್ವಿಸ್ ಸೆಂಟರ್‌ನಲ್ಲಿ ಬಿಟ್ಟ ಜೋಗಿಂದರ್ ಸಿಂಗ್ ಊಟಕ್ಕೆ ತೆರಳಿದ್ದರು. ಆದರೆ, ಊಟ ಮುಗಿಸಿಕೊಂಡು ಬರುವಷ್ಟರಲ್ಲಿ ಕಾರು ಕಳ್ಳತನವಾಗಿತ್ತು ಎಂಬುದಾಗಿ ಚಾಲಕ ಜೋಗಿಂದರ್ ಸಿಂಗ್ ತಿಳಿಸಿದ್ದಾರೆ. ಪ್ರಕರಣದ ಬಳಿಕ ಅವರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಮನೆಗೆ ತೆರಳಿ, ಊಟ ಮಾಡಿಕೊಂಡು ಕಾರ್ ಸರ್ವಿಸ್ ಸೆಂಟರ್‌ಗೆ ಬಂದ ಜೋಗಿಂದರ್ ಸಿಂಗ್ ಅವರು ಕಾರು ಎಲ್ಲಿ ಎಂದು ಅಲ್ಲಿದ್ದ ಸಿಬ್ಬಂದಿಗೆ ಕೇಳಿದ್ದಾರೆ. ಆದರೆ, ಸಿಬ್ಬಂದಿಗೂ ಕಾರು ಕಳ್ಳತನವಾಗಿರುವ ಕುರಿತು ಮಾಹಿತಿ ಇರಲಿಲ್ಲ ಎಂದು ಹೇಳಲಾಗುತ್ತಿದೆ.
ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಪೊಲೀಸರು ಕಾರಿಗಾಗಿ ಶೋಧ ನಡೆಸುತ್ತಿದ್ದಾರೆ. ಸಿಸಿಟಿವಿ ದೃಶ್ಯಾವಳಿಯ ಪ್ರಕಾರ, ಕೊನೆಯ ಬಾರಿ ಕಾರು ಗುರುಗ್ರಾಮದ ಕಡೆ ತೆರಳುವಾಗ ಪತ್ತೆಯಾಗಿದೆ. ಆದಾಗ್ಯೂ, ಇದುವರೆಗೆ ಕಾರು ಎಲ್ಲಿದೆ, ಕದ್ದವರು ಯಾರು ಎಂಬ ಕುರಿತು ಪೊಲೀಸರಿಗೆ ಮಾಹಿತಿ ಲಭ್ಯವಾಗಿಲ್ಲ. ಭಾರತದಲ್ಲಿ ಟೊಯೋಟಾ ಫಾರ್ಚುನರ್ ಕಾರಿನ ಬೆಲೆಯು 33 ಲಕ್ಷ ರೂಪಾಯಿಯಿಂದ 51 ಲಕ್ಷ ರೂಪಾಯಿವರೆಗೆ ಇದೆ.
ಇದನ್ನೂ ಓದಿ: CM Siddaramaiah: ಕಳ್ಳತನ ಪ್ರಕರಣ ಹೆಚ್ಚಾದರೆ ಡಿಸಿಪಿಗಳೇ ನೇರ ಹೊಣೆ: ಸಿಎಂ ಸಿದ್ದರಾಮಯ್ಯ
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ