ಕೋಲ್ಕೊತಾ: ಪಶ್ಚಿಮ ಬಂಗಾಳದಲ್ಲಿ ಕೆಲವು ದಿನಗಳಿಂದ ಹಿಂಸಾಚಾರ ಭುಗಿಲೆದ್ದಿದೆ. ರಾಮನವಮಿ ಹಿನ್ನೆಲೆಯಲ್ಲಿ ಹೌರಾದಲ್ಲಿ ಮೆರವಣಿಗೆ ಸಾಗುವಾಗ ಕಲ್ಲುತೂರಾಟ ನಡೆಸಿ, ಕೋಮುಗಲಭೆ ಉಂಟಾಗಿದೆ. ವಾಹನಗಳಿಗೆ ಬೆಂಕಿ ಹಚ್ಚಿ, ಅಂಗಡಿ-ಮುಂಗಟ್ಟುಗಳನ್ನು ಧ್ವಂಸಗೊಳಿಸಿ ಗಲಾಟೆ ನಡೆಸಲಾಗಿದೆ. ಇನ್ನು ಹೂಗ್ಲಿಯಲ್ಲೂ ಬಿಜೆಪಿಯಿಂದ ನಡೆದ ರಾಮನವಮಿ ಮೆರವಣಿಗೆ ವೇಳೆ ಹಿಂಸಾಚಾರ ನಡೆದಿದೆ. ಇದೇ ವೇಳೆ ಬಿಜೆಪಿ ಶಾಸಕರೊಬ್ಬರು ಗಾಯಗೊಂಡಿದ್ದಾರೆ. ಹಲವು ಸೂಕ್ಷ್ಮ ಪ್ರದೇಶಗಳಲ್ಲಿ ಪರಿಸ್ಥಿತಿ ಈಗಲೂ ಬಿಗಡಾಯಿಸಿದೆ. ಇದರ ಬೆನ್ನಲ್ಲೇ, ಗಲಭೆ ಕುರಿತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರತಿಕ್ರಿಯಿಸಿದ್ದು, “ಅಲ್ಪಸಂಖ್ಯಾತರ ಪ್ರದೇಶಗಳಲ್ಲಿ ಬಿಜೆಪಿಯು ಅನುಮತಿ ಇಲ್ಲದೆ ಮೆರವಣಿಗೆ ನಡೆಸಿದ್ದೇ ತಪ್ಪು” ಎಂದು ಹೇಳಿದ್ದಾರೆ.
“ರಾಮನವಮಿಯ ಮೆರವಣಿಗೆ ಐದು ದಿನಗಳವರೆಗೆ ನಡೆಸಿದ್ದು ಏಕೆ? ಇಂತಹ ಆಚರಣೆಗಳನ್ನು ಒಂದು ದಿನ ನಡೆಸಿ, ಒಂದೇ ದಿನದಲ್ಲಿ ಮೆರವಣಿಗೆ ಮುಗಿಸಬೇಕು. ಇದಕ್ಕೆ ನಮ್ಮ ವಿರೋಧವೇನೂ ಇಲ್ಲ. ಆದರೆ, ಐದು ದಿನಗಳವರೆಗೆ ಮೆರವಣಿಗೆ ನಡೆಸಬಾರದು. ಮೆರವಣಿಗೆ ವೇಳೆ ಶಸ್ತ್ರಾಸ್ತ್ರಗಳನ್ನು ಕೊಂಡೊಯ್ಯಬಾರದು. ಆದರೆ, ಬಿಜೆಪಿಯು ಉದ್ದೇಶಪೂರ್ವಕವಾಗಿಯೇ ಅನುಮತಿ ಇಲ್ಲದೆ ಅಲ್ಪಸಂಖ್ಯಾತರ ಪ್ರದೇಶಗಳಲ್ಲಿ ಮೆರವಣಿಗೆ ನಡೆಸಿದೆ. ರಿಶ್ರಾದಲ್ಲಿ ಮಾರ್ಚ್ 2ರಂದು ಹೀಗೆಯೇ ಶಸ್ತ್ರಾಸ್ತ್ರಗಳ ಸಮೇತ ಬಿಜೆಪಿ ಮೆರವಣಿಗೆ ನಡೆಸಿದೆ” ಎಂದು ಬಿಜೆಪಿ ವಿರುದ್ಧ ಆರೋಪಿಸಿದ್ದಾರೆ.
ಗಲಭೆಯ ದೃಶ್ಯ
ಬಂಗಾಳ ಪಾಕಿಸ್ತಾನ ಆಗುತ್ತಿದೆ ಎಂದ ಬಿಜೆಪಿ
ಇನ್ನು ಪಶ್ಚಿಮ ಬಂಗಾಳದಲ್ಲಿ ರಾಮನವಮಿ ಮೆರವಣಿಗೆ ಸಾಗುವ ವೇಳೆ ಕಲ್ಲುತೂರಾಟ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಮತಾ ಬ್ಯಾನರ್ಜಿ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಹಾಗೆಯೇ, ಮಮತಾ ಬ್ಯಾನರ್ಜಿಯವರ ದುರಾಡಳಿತದಿಂದಾಗಿ ಬಂಗಾಳವು ಪಾಕಿಸ್ತಾನವಾಗಿ ಬದಲಾಗುತ್ತಿದೆ ಎಂದು ಟೀಕಿಸಿದೆ. “ರಾಮನವಮಿ ದಿನ ಹಿಂದುಗಳ ಮೇಲೆ ದಾಳಿಯಾಗುತ್ತಿದ್ದರೆ, ಮಮತಾ ಬ್ಯಾನರ್ಜಿ ಅವರು ಧರಣಿ ಆರಂಭಿಸುವ ಮೂಲಕ ಎಲ್ಲರ ಗಮನವನ್ನು ಬೇರೆಡೆ ಸೆಳೆಯಲು ಯತ್ನಿಸಿದರು. ಮಮತಾ ಬ್ಯಾನರ್ಜಿ ಅವರು ಮುಸ್ಲಿಮರ ಹಬ್ಬಗಳಿಗೆ ಮಾತ್ರ ಗಮನ ಕೊಡುತ್ತಾರೆ. ಹಿಂದುಗಳ ಹಬ್ಬಗಳನ್ನು ನಿರ್ಲಕ್ಷಿಸುತ್ತಾರೆ” ಎಂದು ಬಿಜೆಪಿ ನಾಯಕಿ ಲಾಕೆಟ್ ಚಟರ್ಜಿ ದೂರಿದ್ದಾರೆ.
ಹಿಂಸಾಚಾರದ ವರದಿ ಕೇಳಿದ ಹೈಕೋರ್ಟ್
ಪಶ್ಚಿಮ ಬಂಗಾಳದಲ್ಲಿ ರಾಮನವಮಿ ಆಚರಣೆಯ ಹಿನ್ನೆಲೆಯಲ್ಲಿ ಮಾರ್ಚ್ 30ರಿಂದ ನಡೆಯುತ್ತಿರುವ ಹಿಂಸಾಚಾರದ ಕುರಿತು ವರದಿ ನೀಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಕೋಲ್ಕತಾ ಹೈಕೋರ್ಟ್ ನಿರ್ದೇಶನ ನೀಡಿದೆ. ಏಪ್ರಿಲ್ 5ರೊಳಗೆ ಹಿಂಸಾಚಾರದ ಕುರಿತು ವಿಸ್ತೃತ ವರದಿ ಸಲ್ಲಿಸಬೇಕು ಎಂದು ಸೂಚಿಸಿದೆ. ಹೌರಾ, ಹೂಗ್ಲಿ ಸೇರಿ ಪಶ್ಚಿಮ ಬಂಗಾಳದ ಹಲವೆಡೆ ರಾಮನವಮಿ ಮೆರವಣಿಗೆ ವೇಳೆ ಭಾರಿ ಹಿಂಸಾಚಾರ ನಡೆಯುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹಲವರನ್ನು ಬಂಧಿಸಿದ್ದು, ನೂರಾರು ಜನರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ಇದನ್ನೂ ಓದಿ: Ram Navami Violence: ಗುಜರಾತ್, ಬಂಗಾಳದಲ್ಲಿ ರಾಮನವಮಿ ಹಿಂಸಾಚಾರ; 60 ಜನರ ಬಂಧನ, ರಾಜಕೀಯ ಮೇಲಾಟ