ಪಟನಾ: ಬಿಹಾರದಲ್ಲಿ ಬಿಜೆಪಿ ಜತೆಗಿನ ಮೈತ್ರಿ ಮುರಿದುಕೊಂಡು ಆರ್‌ಜೆಡಿ ಜತೆಗೂಡಿ ಸರ್ಕಾರ ರಚಿಸಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ವಾಗ್ದಾಳಿ ನಡೆಸಿದ್ದಾರೆ. ಹಾಗೆಯೇ, “ನಿತೀಶ್ ಕುಮಾರ್ ಅವರಿಗೆ ಬಿಜೆಪಿಯ ಬಾಗಿಲು ಶಾಶ್ವತವಾಗಿ ಮುಚ್ಚಿದೆ” ಎಂದು ಬಿಹಾರದ ಪಶ್ಚಿಮ ಚಂಪಾರಣ್ ಜಿಲ್ಲೆಯ ಲೌರಿಯಾದಲ್ಲಿ ನಡೆದ ರ‍್ಯಾಲಿ ವೇಳೆ ಘೋಷಿಸಿದರು.
“ಜಯಪ್ರಕಾಶ್ ನಾರಾಯಣ್ ಚಳವಳಿಯ ಕಾಲದಿಂದಲೂ ನಿತೀಶ್ ಕುಮಾರ್ ಅವರು ಕಾಂಗ್ರೆಸ್ ಹಾಗೂ ಜಂಗಲ್‌ರಾಜ್ ವಿರುದ್ಧ ಹೋರಾಟ ಮಾಡುತ್ತಲೇ ಬಂದಿದ್ದಾರೆ. ಆದರೆ, ಅವರು ಆರ್‌ಜೆಡಿ ಹಾಗೂ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡಿದ್ದಾರೆ. ಅವರು ವಿಕಾಸವಾದಿ ಆಗುವ ಬದಲು ಅವಕಾಶವಾದಿಯಾಗಿ ಬದಲಾಗಿದ್ದಾರೆ. ಹಾಗಾಗಿ, ಬಿಜೆಪಿಯ ಬಾಗಿಲು ಅವರಿಗೆ ಶಾಶ್ವತವಾಗಿ ಮುಚ್ಚಿದೆ. ಆಯಾ ರಾಮ್, ಗಯಾ ರಾಮ್ ಮನಸ್ಥಿತಿಯವರಿಗೆ ನಾವು ಸಾಥ್ ನೀಡುವುದಿಲ್ಲ” ಎಂದು ಹೇಳಿದರು.
“ಸದ್ಯ ಬಿಹಾರದಲ್ಲಿ ಜೆಡಿಯು ಹಾಗೂ ಆರ್‌ಜೆಡಿಯ ಮೈತ್ರಿಯು ಅಪವಿತ್ರವಾಗಿದೆ. ಮೈತ್ರಿಯು ಎಣ್ಣೆ ಹಾಗೂ ನೀರು ಮಿಶ್ರಣ ಮಾಡಿದಂತಾಗಿದೆ. ಆದರೆ, ಅದು ಎಂದಿಗೂ ಮಿಶ್ರಣವಾಗುವುದಿಲ್ಲ. ಮತ್ತೊಂದು ಅವಧಿಗೆ ನೀವೇ ಸಿಎಂ ಎಂಬುದಾಗಿ ಮೋದಿ ಅವರು ಘೋಷಿಸಿದರೂ ನಿತೀಶ್ ಕುಮಾರ್ ಅವರು ಅಪವಿತ್ರ ಮೈತ್ರಿ ಮಾಡಿಕೊಂಡಿದ್ದಾರೆ. ಆದರೆ, ಮುಂಬರುವ ಚುನಾವಣೆಯಲ್ಲಿ ಗೆದ್ದು, ಬಿಜೆಪಿಯೇ ಸ್ವತಂತ್ರವಾಗಿ ಸರ್ಕಾರ ರಚಿಸಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು. 2022ರ ಆಗಸ್ಟ್‌ನಲ್ಲಿ ನಿತೀಶ್ ಕುಮಾರ್ ಅವರು ಬಿಜೆಪಿ ಮೈತ್ರಿ ಮುರಿದುಕೊಂಡು ಆರ್‌ಜೆಡಿ ಜತೆಗೂಡಿ ಸರ್ಕಾರ ರಚಿಸಿದ್ದಾರೆ.
ಇದನ್ನೂ ಓದಿ: Amit Shah: ರಾಜ್ಯಪಾಲರ ಮೇಲೆ ದೂರು ನೀಡಿದ್ದ ಮಮತಾ ದೀದಿ ಮತ್ತೆ ಫೋನೇ ತೆಗೀಲಿಲ್ಲ: ಕೇಂದ್ರ-ರಾಜ್ಯ ಸಂಬಂಧದ ಕುರಿತು ಅಮಿತ್ ಶಾ