ನವದೆಹಲಿ: ಮಹಿಳಾ ಕ್ರೀಡಾಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಬಿಜೆಪಿ ಸಂಸದ, ಭಾರತೀಯ ಕುಸ್ತಿ ಒಕ್ಕೂಟದ (ಡಬ್ಲ್ಯುಎಫ್‌ಐ) ಮಾಜಿ ಅಧ್ಯಕ್ಷ ಬ್ರಿಜ್‌ಭೂಷಣ್ ಸಿಂಗ್‌ಗೆ (Brij Bhushan Sharan Singh) ಈ ಬಾರಿ ಬಿಜೆಪಿಯು ಟಿಕೆಟ್ ನಿರಾಕರಿಸಿದೆ. ಕೈಸರ್‌ಗಂಜ್ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿಯು ಬ್ರಿಜ್‌ಭೂಷಣ್ ಸಿಂಗ್ ಬದಲಿಗೆ ಅವರ ಕಿರಿಯ ಪುತ್ರ ಕರಣ್ ಭೂಷಣ್ ಸಿಂಗ್ (Karan Bhushan Singh) ಅವರಿಗೆ ಟಿಕೆಟ್ ಘೋಷಣೆ ಮಾಡಿದೆ. ಇನ್ನು, ರಾಯ್‌ಬರೇಲಿ ಕ್ಷೇತ್ರದಲ್ಲಿ ಬಿಜೆಪಿಯು ದಿನೇಶ್ ಪ್ರತಾಪ್ ಸಿಂಗ್ (Dinesh Pratap Singh) ಅವರಿಗೆ ಟಿಕೆಟ್ ನೀಡಿದೆ.
ಕೈಸರ್‌ಗಂಜ್ ಲೋಕಸಭೆ ಕ್ಷೇತ್ರದಿಂದ ಕಳೆದ ಮೂರು ಚುನಾವಣೆಗಳಲ್ಲಿ ಸ್ಪರ್ಧಿಸಿದ್ದ ಬ್ರಿಜ್ ಭೂಷಣ್ ಸಿಂಗ್ ಅವರ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಬಂದಿರುವ ಕಾರಣ ನಾಲ್ಕನೇ ಬಾರಿ ಟಿಕೆಟ್ ಘೋಷಿಸಿಲ್ಲ ಎಂದು ತಿಳಿದುಬಂದಿದೆ. ಇದಕ್ಕೂ ಮೊದಲೇ, ಬ್ರಿಜ್ ಭೂಷಣ್ ಸಿಂಗ್‌ಗೆ ಟಿಕೆಟ್ ಸಿಗುವುದಿಲ್ಲ ಎಂದು ಹೇಳಲಾಗುತ್ತಿತ್ತು. ಇದರ ಬೆನ್ನಲ್ಲೇ, ಅವರ ಪುತ್ರನಿಗೆ ಬಿಜೆಪಿ ಮಣೆಹಾಕಿದೆ. ಕೈಸರ್‌ಗಂಜ್‌ನಲ್ಲಿ ಐದನೇ ಹಂತದಲ್ಲಿ ಅಂದರೆ ಮೇ 20ರಂದು ಮತದಾನ ನಡೆಯಲಿದೆ. ನಾಮಪತ್ರ ಸಲ್ಲಿಸಲು ಮೇ 3 ಕೊನೆಯ ದಿನವಾಗಿದೆ.
#NewsAlert 📢
— Harmeet Kaur K (@iamharmeetK) May 2, 2024
BJP nominates Dinesh Pratap Singh from #Raebareli seat and
Karan Bhushan Singh,
Son of Sexual Assault Accused BJP leader
Brij Bhushan Singh from Kaiserganj in Uttar Pradesh pic.twitter.com/hLlLQMNRKH
ರಾಯ್‌ಬರೇಲಿಯಲ್ಲಿ ದಿನೇಶ್ ಪ್ರತಾಪ್ ಸಿಂಗ್
2019ರ ಲೋಕಸಭೆ ಚುನಾವಣೆಯಲ್ಲಿ ಸೋನಿಯಾ ಗಾಂಧಿ ಅವರ ವಿರುದ್ಧ ಸೋಲನುಭವಿಸಿದ್ದ ದಿನೇಶ್ ಪ್ರತಾಪ್ ಸಿಂಗ್ ಅವರಿಗೆ ಬಿಜೆಪಿಯು ಮತ್ತೆ ಟಿಕೆಟ್ ನೀಡಿದೆ. ಈ ಬಾರಿ ರಾಯ್‌ಬರೇಲಿಯಲ್ಲಿ ಸೋನಿಯಾ ಗಾಂಧಿ ಅವರು ಸ್ಪರ್ಧಿಸುತ್ತಿಲ್ಲ. ಪ್ರಿಯಾಂಕಾ ವಾದ್ರಾ ಅಥವಾ ಅವರ ಪತಿ ರಾಬರ್ಟ್ ವಾದ್ರಾಗೆ ಟಿಕೆಟ್ ನೀಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಇದರ ಮಧ್ಯೆಯೇ, ಮತ್ತೆ ದಿನೇಶ್ ಪ್ರತಾಪ್ ಸಿಂಗ್ ಅವರನ್ನು ಬಿಜೆಪಿಯು ರಾಯ್‌ಬರೇಲಿಯಲ್ಲಿ ಕಣಕ್ಕಿಳಿಸಿದೆ. ನಾಮಪತ್ರ ಸಲ್ಲಿಕೆಗೆ ಮೇ 3 ಕೊನೆಯ ದಿನವಾದ ಕಾರಣ ಇಂದು (ಮೇ 2) ಅಥವಾ ನಾಳೆ ರಾಯ್‌ಬರೇಲಿ ಹಾಗೂ ಅಮೇಥಿ ಲೋಕಸಭೆ ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಘೋಷಣೆ ಮಾಡಲಿದೆ ಎಂದು ತಿಳಿದುಬಂದಿದೆ.
ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ ಮಹಿಳಾ ಕುಸ್ತಿಪಟುಗಳು ಅವರನ್ನು ಮುಖ್ಯ ಹುದ್ದೆಯಿಂದ ತೆಗೆದುಹಾಕುವಂತೆ ಒತ್ತಾಯಿಸಿದ್ದರು. ಭಾರತದ ಅಗ್ರ ಕುಸ್ತಿಪಟುಗಳಾದ ವಿನೇಶ್ ಫೋಗಟ್, ಸಾಕ್ಷಿ ಮಲಿಕ್ ಮತ್ತು ಬಜರಂಗ್ ಪೂನಿಯಾ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸಿದ್ದರು. ಹಲವು ಬೆಳವಣಿಗೆಗಳ ಬಳಿಕ ಜೂನ್ನಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ (354, 354 ಎ ಮತ್ತು 354 ಡಿ) ಅಡಿ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿ ಚಾರ್ಜ್ಶೀಟ್ ಸಲ್ಲಿಕೆ ಮಾಡಿದ್ದರು. ಪ್ರಕರಣದಲ್ಲಿ ಬ್ರಿಜ್ ಭೂಷಣ್ ಜಾಮೀನು ಪಡೆದಿದ್ದಾರೆ.
ಇದನ್ನೂ ಓದಿ: Ujjwal Nikam: ಪ್ರಮೋದ್ ಮಹಾಜನ್ ಪುತ್ರಿಗೆ ಕೊಕ್, ಮುಂಬೈ ದಾಳಿ ವಕೀಲನಿಗೆ ಬಿಜೆಪಿ ಟಿಕೆಟ್!