ಮುಂಬೈ: ಲೋಕಸಭೆ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಬಿಜೆಪಿಯು ಅಳೆದು-ತೂಗಿ ಅಭ್ಯರ್ಥಿಗಳನ್ನು ಘೋಷಣೆ ಮಾಡುತ್ತಿದೆ. ಹೊಸಬರಿಗೆ ಆದ್ಯತೆ, ವಿವಾದ ಹೊಂದಿರುವ ನಾಯಕರಿಗೆ ಕೊಕ್, ಯುವಕರಿಗೆ ಮಣೆ ಸೇರಿ ಹಲವು ರೀತಿಯಲ್ಲಿ ಪ್ರಯೋಗ ಮಾಡುತ್ತಿದೆ. ಇದಕ್ಕೆ ನಿದರ್ಶನ ಎಂಬಂತೆ, ಮುಂಬೈ ನಾರ್ತ್ ಸೆಂಟ್ರಲ್ ಲೋಕಸಭೆ ಕ್ಷೇತ್ರದಲ್ಲಿ ಹಾಲಿ ಸಂಸದೆ, ಬಿಜೆಪಿ ನಾಯಕ ಪ್ರಮೋದ್ ಮಹಾಜನ್ ಅವರ ಪುತ್ರಿ ಪೂನಂ ಮಹಾಜನ್ (Poonam Mahajan) ಅವರ ಬದಲಿಗೆ 26/11ರ ಮುಂಬೈ ಉಗ್ರ ದಾಳಿ (26/11 Mumbai Terror Attack) ವಕೀಲ ಉಜ್ವಲ್ ನಿಕಾಮ್ (Ujjwal Nikam) ಅವರಿಗೆ ಬಿಜೆಪಿ ಟಿಕೆಟ್ ಘೋಷಣೆ ಮಾಡಿದೆ.
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯು 15ನೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಇದರಲ್ಲಿ ಉಜ್ವಲ್ ನಿಕಾಮ್ ಅವರಿಗೆ ಟಿಕೆಟ್ ನೀಡಿರುವುದು ಪ್ರಮುಖ ಘೋಷಣೆಯಾಗಿದೆ. ಉಜ್ವಲ್ ನಿಕಾಮ್ ಅವರು ಬಾಂಬೆ ಹೈಕೋರ್ಟ್ ವಕೀಲರಾಗಿದ್ದು, ಇವರು ಮುಂಬೈ ಭಯೋತ್ಪಾದಕ ದಾಳಿಯ ಬಳಿಕ ಸರ್ಕಾರದ ಪರವಾಗಿ ನ್ಯಾಯಾಲಯದಲ್ಲಿ ವಾದ (ಪಬ್ಲಿಕ್ ಪ್ರಾಸಿಕ್ಯೂಟರ್) ಮಂಡಿಸಿದ್ದರು. ಇವರೀಗ ಮುಂಬೈ ನಾರ್ತ್ ಸೆಂಟ್ರಲ್ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ವರ್ಷಾ ಗಾಯಕ್ವಾಡ್ ಅವರನ್ನು ಎದುರಿಸಲಿದ್ದಾರೆ.
#PollsWithAkashvani ||
— All India Radio News (@airnewsalerts) April 27, 2024
Senior lawyer Ujjwal Nikam will be the BJP candidate from Mumbai North Central Lok Sabha seat.
Poonam Mahajan is the sitting MP of the BJP from this seat.
▪️ Party also releases another list of 8 candidates for Odisha Assembly Polls.… pic.twitter.com/NH4M03tOhD
ಯಾರಿವರು ಉಜ್ವಲ್ ನಿಕಾಮ್?
ಉಜ್ವಲ್ ನಿಕಾಮ್ ಅವರ ಹೆಸರು ಮುಂಬೈ ದಾಳಿ ಪ್ರಕರಣದಲ್ಲಿ ದೇಶಾದ್ಯಂತ ಪಸರಿಸಿದರೂ, ಅವರು ಪ್ರಮುಖ ಪ್ರಕರಣಗಳಲ್ಲಿ ವಾದ ಮಂಡಿಸಿದ್ದಾರೆ. 1993ರಲ್ಲಿ ಮುಂಬೈನಲ್ಲಿ ನಡೆದ ಉಗ್ರರ ದಾಳಿ, ಗುಲ್ಶನ್ ಕುಮಾರ್ ಕೊಲೆ ಪ್ರಕರಣ, 2013ರಲ್ಲಿ ಮುಂಬೈನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಗಳಲ್ಲಿ ವಾದ ಮಂಡಿಸಿದ್ದಾರೆ. ಅಷ್ಟೇ ಏಕೆ, ಹಾಲಿ ಸಂಸದೆ ಪೂನಂ ಮಹಾಜನ್ ಅವರ ತಂದೆ ಪ್ರಮೋದ್ ಮಹಾಜನ್ ಹತ್ಯೆ ಪ್ರಕರಣದಲ್ಲೂ ಉಜ್ವಲ್ ನಿಕಾಮ್ ಅವರು ವಾದ ಮಂಡಿಸಿದ್ದರು. ಇವರಿಗೆ 2016ರಲ್ಲಿ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿಯನ್ನೂ ನೀಡಿದೆ.
ಮುಂಬೈ ದಾಳಿ ಕರಾಳ ಅಧ್ಯಾಯ
ಮುಂಬೈನಲ್ಲಿರುವ ತಾಜ್ ಹೋಟೆಲ್ಗಳ ಮೇಲೆ 2008ರಲ್ಲಿ ನಡೆದ ಉಗ್ರ ದಾಳಿ ಇಂದಿಗೂ ನಮ್ಮ ಇತಿಹಾಸದಲ್ಲಿ ಕಪ್ಪುಚುಕ್ಕೆಯಾಗಿ ಉಳಿದಿದೆ. ಅದನ್ನೊಂದು ಕರಾಳ ದಿನವೆಂದೇ ಪರಿಗಣಿಸಲಾಗುತ್ತದೆ. ಅಂದು ಲಷ್ಕರೆ ತಯ್ಬಾ ಸಂಘಟನೆಯ 10 ಉಗ್ರರು ಸಮುದ್ರ ಮಾರ್ಗದ ಮೂಲಕ ಮುಂಬಯಿಗೆ ಬಂದು ಗುಂಡಿನ ದಾಳಿ ನಡೆಸಿದ್ದರು. ನವೆಂಬರ್ 26ರಿಂದ 29ರವರೆಗೆ ಭದ್ರತಾ ಪಡೆಗಳು-ಉಗ್ರರ ನಡುವಿನ ಹೋರಾಟ ನಡೆದಿತ್ತು. ಇದರಲ್ಲಿ ಆರು ಮಂದಿ ಅಮೇರಿಕದವರು ಸೇರಿ 166 ಮಂದಿ ಮೃತಪಟ್ಟಿದ್ದರು. ಹಲವು ಯೋಧರು ಕೂಡ ಹುತಾತ್ಮರಾಗಿದ್ದಾರೆ.
ಇದನ್ನೂ ಓದಿ: ಮೊದಲ ಹಂತದ ಮತದಾನ ಬೆನ್ನಲ್ಲೇ ಕಾಂಗ್ರೆಸ್, ಬಿಜೆಪಿ ಅಲರ್ಟ್; ‘ಉತ್ತರ’ದತ್ತ ಚಿತ್ತ, 13 ಸಚಿವರಿಗೆ ಟಾಸ್ಕ್!