Site icon Vistara News

Varun Gandhi: ವರುಣ್‌ ಗಾಂಧಿಗೆ ಟಿಕೆಟ್‌ ಇಲ್ಲ; ಮನೇಕಾಗೆ ಮಣೆ, ಮಿಸ್‌ ಆದವರ ಪಟ್ಟಿ ಇಲ್ಲಿದೆ

Varun Gandhi

BJP drops Varun Gandhi from Pilibhit, retains mother Maneka in Sultanpur

ನವದೆಹಲಿ: ಲೋಕಸಭೆ ಚುನಾವಣೆಗಾಗಿ (Lok Sabha Election 2024) ಬಿಜೆಪಿಯು ಅಭ್ಯರ್ಥಿಗಳ 5ನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಬಾಲಿವುಡ್‌ ನಟಿ ಕಂಗನಾ ರಣಾವತ್‌ ಸೇರಿ 111 ಅಭ್ಯರ್ಥಿಗಳಿಗೆ ಬಿಜೆಪಿ ಟಿಕೆಟ್‌ ನೀಡಿದೆ. ಆದರೆ, ಉತ್ತರ ಪ್ರದೇಶದ ಪಿಲಿಭಿಟ್‌ ಕ್ಷೇತ್ರದಿಂದ ವರುಣ್‌ ಗಾಂಧಿ (Varun Gandhi) ಅವರಿಗೆ ಟಿಕೆಟ್‌ ನಿರಾಕರಿಸಲಾಗಿದೆ. ಆದರೆ, ವರುಣ್‌ ಗಾಂಧಿ ಅವರ ತಾಯಿ ಮನೇಕಾ ಗಾಂಧಿ (Maneka Gandhi) ಅವರಿಗೆ ಸುಲ್ತಾನ್‌ಪುರದಿಂದಲೇ ಟಿಕೆಟ್‌ ನೀಡಲಾಗಿದೆ.

ವರುಣ್‌ ಗಾಂಧಿ ಅವರು ಪಿಲಿಭಿಟ್‌ ಕ್ಷೇತ್ರದಿಂದ 2009 ಹಾಗೂ 2019ರ ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ಇವರು 2014ರಲ್ಲಿ ಸುಲ್ತಾನ್‌ಪುರದಿಂದಲೂ ಸ್ಪರ್ಧಿಸಿ ಜಯ ಕಂಡಿದ್ದರು. 2019ರಲ್ಲಿ ಸುಲ್ತಾನ್‌ಪುರದಲ್ಲಿ ವರುಣ್‌ ಗಾಂಧಿ ಅವರ ತಾಯಿ ಮನೇಕಾ ಗಾಂಧಿ ಸ್ಪರ್ಧಿಸಿ ಗೆಲುವು ಕಂಡಿದ್ದರು. ಈಗ ಪಿಲಿಭಿಟ್‌ ಕ್ಷೇತ್ರದಲ್ಲಿ ಬಿಜೆಪಿಯು ವರುಣ್‌ ಗಾಂಧಿ ಅವರ ಬದಲು ಜಿತಿನ್‌ ಪ್ರಸಾದ ಅವರಿಗೆ ಟಿಕೆಟ್‌ ನೀಡಿದೆ. ಇತ್ತೀಚೆಗೆ, ವರುಣ್‌ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರನ್ನು ಹಲವು ವಿಷಯಗಳಿಗೆ ಸಂಬಂಧಿಸಿದಂತೆ ಟೀಕಿಸಿದ್ದರು.

ಅಭಿಜಿತ್‌ ಗಂಗೋಪಾಧ್ಯಾಯ ಅವರಿಗೂ ಟಿಕೆಟ್‌

ಕೆಲ ದಿನಗಳ ಹಿಂದಷ್ಟೇ ಕೋಲ್ಕೊತಾ ನ್ಯಾಯಮೂರ್ತಿ ಹುದ್ದೆಗೆ ರಾಜೀನಾಮೆ ನೀಡಿ, ಬಿಜೆಪಿ ಸೇರ್ಪಡೆಯಾಗಿದ್ದ ನ್ಯಾ. ಅಭಿಜಿತ್‌ ಗಂಗೋಪಾಧ್ಯಾಯ ಅವರಿಗೆ ಬಿಜೆಪಿ ಟಿಕೆಟ್‌ ನೀಡಿದೆ. ಅಭಿಜಿತ್‌ ಗಂಗೋಪಾಧ್ಯಾಯ ಅವರು ಪಶ್ಚಿಮ ಬಂಗಾಳದ ತಮ್ಲುಕ್‌ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಆದರೆ, ಇಬ್ಬರು ಕೇಂದ್ರ ಸಚಿವರಾದ ಅಶ್ವಿನಿ ಕುಮಾರ್‌ ಚೌಬೆ, ವಿ.ಕೆ. ಸಿಂಗ್‌ ಅವರಿಗೆ ಬಿಜೆಪಿ ಟಿಕೆಟ್‌ ನಿರಾಕರಿಸಿದೆ.

ಇದನ್ನೂ ಓದಿ: BJP Candidates: ಬಿಜೆಪಿ 5ನೇ ಪಟ್ಟಿ; ಕಂಗನಾ ರಣಾವತ್‌, ಅರುಣ್‌ ಗೋವಿಲ್ ಸೇರಿ 111 ಜನಕ್ಕೆ ಟಿಕೆಟ್

ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್‌ ಅವರು ಸಂಬಲ್ಪುರ ಕ್ಷೇತ್ರದಿಂದ ಮತ್ತೆ ಸ್ಪರ್ಧಿಸುತ್ತಿದ್ದಾರೆ. 2019ರ ಲೋಕಸಭೆ ಚುನಾವಣೆಯಲ್ಲಿ ಸೋಲನುಭವಿಸಿದ್ದ ಪಕ್ಷದ ವಕ್ತಾರ ಸಂಬಿತ್‌ ಪಾತ್ರಾ ಅವರಿಗೆ ಒಡಿಶಾದ ಪುರಿ ಕ್ಷೇತ್ರದಿಂದಲೇ ಮತ್ತೆ ಕಣಕ್ಕಿಳಿಸಲಾಗಿದೆ. ಜಾರ್ಖಂಡ್‌ ಮುಕ್ತಿ ಮೋರ್ಚಾ ಮುಖ್ಯಸ್ಥ ಶಿಬು ಸೊರೇನ್‌ ಅವರ ಸೊಸೆ ಸೀತಾ ಸೊರೇನ್‌ ಅವರಿಗೆ ಜಾರ್ಖಂಡ್‌ನ ಡುಮ್ಕಾ ಕ್ಷೇತ್ರದಿಂದ ಟಿಕೆಟ್‌ ನೀಡಲಾಗಿದೆ.

ರಾಹುಲ್‌ ಗಾಂಧಿ ವಿರುದ್ಧ ಕೆ. ಸುರೇಂದ್ರ ಸ್ಪರ್ಧೆ

ಕೇರಳದ ವಯನಾಡು ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿಯು ರಾಜ್ಯಾಧ್ಯಕ್ಷ ಕೆ. ಸುರೇಂದ್ರ ಅವರಿಗೆ ಟಿಕೆಟ್‌ ನೀಡಿದೆ. ಇದರೊಂದಿಗೆ ವಯನಾಡಿನಲ್ಲಿ ರಾಹುಲ್‌ ಗಾಂಧಿ ಹಾಗೂ ಕೆ. ಸುರೇಂದ್ರ ಮಧ್ಯೆ ಪೈಪೋಟಿ ನಡೆಯಲಿದೆ.

ಕೇರಳ ಬಿಜೆಪಿ ಅಧ್ಯಕ್ಷ ಕೆ. ಸುರೇಂದ್ರ

ಕಂಗನಾ ರಣಾವತ್‌ ಅವರು ಹಿಮಾಚಲ ಪ್ರದೇಶದ ಮಂಡಿ ಲೋಕಸಭೆ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ರಾಮಾಯಣ ಧಾರಾವಾಹಿಯಲ್ಲಿ ಶ್ರೀರಾಮನ ಪಾತ್ರದ ಮೂಲಕವೇ ದೇಶಾದ್ಯಂತ ಗಮನ ಸೆಳೆದಿದ್ದ ಅರುಣ್‌ ಗೋವಿಲ್‌ ಅವರು ಉತ್ತರ ಪ್ರದೇಶದ ಮೀರತ್‌ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಇನ್ನು ಭಾನುವಾರವಷ್ಟೇ ಬಿಜೆಪಿ ಸೇರ್ಪಡೆಯಾಗಿದ್ದ ನವೀನ್‌ ಜಿಂದಾಲ್‌ ಅವರು ಹರಿಯಾಣದ ಕುರುಕ್ಷೇತ್ರದಿಂದ ಟಿಕೆಟ್‌ ಗಿಟ್ಟಿಸಿಕೊಂಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version