ಕೋಲ್ಕೊತಾ: ಶಿಸ್ತಿನ ಪಕ್ಷ ಎಂದು ಕರೆದುಕೊಳ್ಳುವ ಬಿಜೆಪಿಯು ಪಶ್ಚಿಮ ಬಂಗಾಳದ (West Bengal) ಪ್ರಮುಖ ದಲಿತ ನಾಯಕ ಅನುಪಮ್ ಹಜ್ರಾ (Anupam Hazra) ಅವರನ್ನು ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ (National Secretary) ಹುದ್ದೆಯಿಂದ ವಜಾಗೊಳಿಸಿದೆ. ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಪಾಲ್ಗೊಂಡ ಹಿನ್ನೆಲೆಯಲ್ಲಿ ಅವರನ್ನು ರಾಷ್ಟ್ರೀಯ ಕಾರ್ಯದರ್ಶಿ ಹುದ್ದೆಯಿಂದ ವಜಾಗೊಳಿಸಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಆದೇಶ ಹೊರಡಿಸಿದ್ದಾರೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ಪಕ್ಷದ ಪ್ರಮುಖ ರಣತಂತ್ರಗಾರರೂ ಆದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕೋಲ್ಕೊತಾಗೆ ಭೇಟಿ ನೀಡಿದ ದಿನವೇ ಅನುಪಮ್ ಹಜ್ರಾ ಅವರನ್ನು ರಾಷ್ಟ್ರೀಯ ಕಾರ್ಯದರ್ಶಿ ಸ್ಥಾನದಿಂದ ಕೆಳಗಿಳಿಸಲಾಗಿದೆ. ತಕ್ಷಣದಿಂದಲೇ ಜಾರಿಗೆ ಬರುವಂತೆ ಜೆ.ಪಿ. ನಡ್ಡಾ ಅವರು ಆದೇಶ ಹೊರಡಿಸಿದ್ದಾರೆ. ಅನುಪಮ್ ಬಜ್ರಾ ಅವರು ಪಕ್ಷಕ್ಕೆ ಮುಜುಗರ ತರುವ ಹೇಳಿಕೆ ನೀಡಿದ್ದು, ಇದರಿಂದ ಪಕ್ಷದ ಘನತೆಗೆ ಧಕ್ಕೆಯಾಗಿದೆ ಎಂಬುದಾಗಿ ಮುಖಂಡರು ನೀಡಿದ ದೂರಿನ ಮೇರೆಗೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
Bharatiya Janata Party (BJP) removes West Bengal leader Anupam Hazra from the national secretary post of the party with immediate effect. pic.twitter.com/cddHYUH9h7
— ANI (@ANI) December 26, 2023
ಅನುಪಮ್ ಹಜ್ರಾ ವಿವಾದ ಏನು?
ಕಳೆದ ಕೆಲ ತಿಂಗಳಿಂದ ಅನುಪಮ್ ಹಜ್ರಾ ಅವರು ನೀಡುತ್ತಿರುವ ಹೇಳಿಕೆಗಳು ವಿವಾದ ಸೃಷ್ಟಿಸುತ್ತಿರುವ ಜತೆಗೆ ಪಕ್ಷಕ್ಕೂ ಮುಜುಗರ ತರುತ್ತಿವೆ. ಕಳೆದ ಸೆಪ್ಟೆಂಬರ್‌ನಲ್ಲಿ, “ಟಿಎಂಸಿಯಲ್ಲಿರುವ ಭ್ರಷ್ಟಾಚಾರಿಗಳು ಜಾರಿ ನಿರ್ದೇಶನಾಲಯದ (ED) ನೋಟಿಸ್ ನಿರೀಕ್ಷೆಯಲ್ಲಿದ್ದರೆ, ದಾಳಿಯ ಭಯವಿದ್ದರೆ ಬಿಜೆಪಿ ಸೇರ್ಪಡೆಯಾಗಬಹುದು. ಭ್ರಷ್ಟಾಚಾರಿಗಳು ಬಿಜೆಪಿ ಸೇರ್ಪಡೆಯಾಗಬೇಕು ಎಂದಿದ್ದರೆ ನನ್ನನ್ನು ಸಂಪರ್ಕಿಸಿ” ಎಂದು ಬಹಿರಂಗವಾಗಿಯೇ ಹೇಳಿದ್ದು ಬಿಜೆಪಿ ವಿರುದ್ಧ ಪ್ರತಿಕ್ಷಗಳ ಟೀಕೆಗಳಿಗೆ ದಾರಿ ಮಾಡಿಕೊಟ್ಟಿತ್ತು.
“ಬಹಿರಂಗವಾಗಿ ಬಿಜೆಪಿ ಸೇರ್ಪಡೆಗೊಳ್ಳುವ ಕುರಿತು ಮಾತನಾಡಲು ಆಗದಿದ್ದರೆ, ಫೇಸ್‌ಬುಕ್‌ಗೆ ಹೋಗಿ, ನನ್ನ ಪೇಜ್ ಮೂಲಕ ಸಂಪರ್ಕಿಸಿ. ನೀವು ನನ್ನನ್ನು ವೈಯಕ್ತಿಕವಾಗಿ ಭೇಟಿಯಾಗುವ ಮೂಲಕವೂ ನಿಮ್ಮ ಇಚ್ಛೆಯನ್ನು ವ್ಯಕ್ತಪಡಿಸಬಹುದು” ಎಂದು ಅನುಪಮ್ ಹಜ್ರಾ ಹೇಳಿದ್ದರು.
ಇದನ್ನೂ ಓದಿ: Electric Bus : ಶಕ್ತಿ ಯೋಜನೆ ಟೀಕಿಸುವ ಬಿಜೆಪಿಗೆ ಹೆಣ್ಮಕ್ಕಳೇ ಉತ್ತರ ಕೊಡಿ ಎಂದ ಸಿದ್ದರಾಮಯ್ಯ
ಬೋಲ್‌ಪುರ ಲೋಕಸಭೆ ಕ್ಷೇತ್ರದಿಂದ ಟಿಎಂಸಿ ಟಿಕೆಟ್ ಪಡೆದು 2014ರಲ್ಲಿ ಗೆಲುವು ಸಾಧಿಸಿದ್ದ ಅನುಪಮ್ ಹಜ್ರಾ ಅವರು ಬಳಿಕ ಬಿಜೆಪಿ ಸೇರ್ಪಡೆಯಾಗಿದ್ದರು. ಪ್ರಮುಖ ದಲಿತ ನಾಯಕರಾಗಿರುವ ಅವರಿಗೆ ಪಕ್ಷದಲ್ಲಿ ಹಲವು ಜವಾಬ್ದಾರಿ ನೀಡಲಾಗಿತ್ತು. ಬೋಲ್‌ಪುರ ಸಂಸದರಾಗಿರುವ ಅವರನ್ನು ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿತ್ತು. ಅಲ್ಲದೆ, ಬಿಹಾರದ ಸಹ ಉಸ್ತುವಾರಿಯನ್ನಾಗಿಯೂ ನೇಮಿಸಲಾಗಿತ್ತು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ