Site icon Vistara News

Shakti Row: ಹಿಂದುಗಳ ಭಾವನೆಗಳಿಗೆ ಧಕ್ಕೆ; ರಾಹುಲ್‌ ಗಾಂಧಿ ವಿರುದ್ಧ ಬಿಜೆಪಿ ದೂರು

Rahul Gandhi

Rahul Gandhi's U-turn on poverty eradication remark: 'Can make strong efforts'

ನವದೆಹಲಿ: ಲೋಕಸಭೆ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ರಾಜಕೀಯ ನಾಯಕರ ಮಧ್ಯೆ ವಾಗ್ದಾಳಿ, ವಾಕ್ಸಮರ, ಆರೋಪ-ಪ್ರತ್ಯಾರೋಪಗಳು ಶುರುವಾರಿವೆ. ಇದರ ಬೆನ್ನಲ್ಲೇ, ಕಾಂಗ್ರೆಸ್‌ (Congress) ನಾಯಕ ರಾಹುಲ್‌ ಗಾಂಧಿ (Rahul Gandhi) ವಿರುದ್ಧ ಬಿಜೆಪಿಯು ಚುನಾವಣಾ ಆಯೋಗಕ್ಕೆ (Election Commission) ದೂರು ನೀಡಿದೆ. “ಚುನಾವಣೆಯಲ್ಲಿ ನಾವು ಶಕ್ತಿಯ ವಿರುದ್ಧ ಹೋರಾಡುತ್ತೇವೆ” ಎಂದು ರಾಹುಲ್‌ ಗಾಂಧಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಹರ್ದೀಪ್‌ ಸಿಂಗ್‌ ಪುರಿ ಅವರು ದೂರು ನೀಡಿದ್ದಾರೆ.

ಚುನಾವಣಾ ಆಯೋಗಕ್ಕೆ ದೂರು ನೀಡಿದ ಬಳಿಕ ಹರ್ದೀಪ್‌ ಸಿಂಗ್‌ ಪುರಿ ಮಾಹಿತಿ ನೀಡಿದರು. “ರಾಹುಲ್‌ ಗಾಂಧಿ ಅವರು ಹಿಂದುಗಳ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಅವರು ನಾರಿಶಕ್ತಿಯನ್ನು ಅವಮಾನಿಸಿದ್ದಾರೆ. ಹಾಗಾಗಿ, ಬಿಜೆಪಿಯು ರಾಹುಲ್‌ ಗಾಂಧಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ರಾಹುಲ್‌ ಗಾಂಧಿ ಅವರು ನೀಡಿದ ಹೇಳಿಕೆ, ಅವರ ಹೇಳಿಕೆ ಉದ್ದೇಶ ಸೇರಿ ಎಲ್ಲ ರೀತಿಯ ಮಾಹಿತಿಯನ್ನೂ ಚುನಾವಣಾ ಆಯೋಗಕ್ಕೆ ನೀಡಲಾಗಿದೆ” ಎಂದು ಕೇಂದ್ರ ಸಚಿವ ಮಾಹಿತಿ ನೀಡಿದರು.

ರಾಹುಲ್‌ ಗಾಂಧಿ ಹೇಳಿದ್ದೇನು?

ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ನಡೆದ ರ‍್ಯಾಲಿಯಲ್ಲಿ ಮಾತನಾಡಿದ್ದ ರಾಹುಲ್‌ ಗಾಂಧಿ, ಶಕ್ತಿ ಎಂಬ ಪದದ ಪ್ರಸ್ತಾಪ ಮಾಡಿದ್ದರು. ಎನ್‌ಡಿಎ ಸರ್ಕಾರವನ್ನು ಶಕ್ತಿಗೆ ಹೋಲಿಸಿದ್ದ ಅವರು, ಆ ಶಕ್ತಿ ವಿರುದ್ಧ ಹೋರಾಡುತ್ತೇವೆ ಎಂದಿದ್ದರು. “ಹಿಂದು ಧರ್ಮದಲ್ಲಿ ಶಕ್ತಿ ಎಂಬ ಪದ ಇದೆ. ನಾವು ಆ ಶಕ್ತಿಯ ವಿರುದ್ಧ ಹೋರಾಡುತ್ತೇವೆ. ಅಷ್ಟಕ್ಕೂ, ಈ ಶಕ್ತಿ ಎಂದರೇನು? ಇದು ನಮಗೆ ಏನು ಮಾಡುತ್ತದೆ? ವಿದ್ಯುನ್ಮಾನ ಮತಯಂತ್ರಗಳ ಆತ್ಮ ಹಾಗೂ ಸಮಗ್ರತೆಯನ್ನು ರಾಜನಿಗೆ (ಮೋದಿ) ವರ್ಗಾಯಿಸಲಾಗಿದೆ. ಇ.ಡಿ, ಸಿಬಿಐಗಳು ಕೂಡ ರಾಜನ ವಶವಾಗಿವೆ. ನಾವು ಒಬ್ಬ ವ್ಯಕ್ತಿ, ಒಂದು ಪಕ್ಷದ ವಿರುದ್ಧ ಹೋರಾಡುತ್ತಿಲ್ಲ. ನಾವು ಇಡೀ ಶಕ್ತಿಯ ವಿರುದ್ಧ ಹೋರಾಡುತ್ತೇವೆ” ಎಂದು ರಾಹುಲ್‌ ಗಾಂಧಿ ಟೀಕಿಸಿದ್ದರು.

ಇದನ್ನೂ ಓದಿ: Lok Sabha Election 2024: ರಾಹುಲ್‌ ಗಾಂಧಿ ‘ಶಕ್ತಿ’ ಹೇಳಿಕೆಗೆ ತಿರುಗಿ ಬಿದ್ದ ಬಿಜೆಪಿ ನಾಯಕರು ಹೇಳಿದ್ದೇನು?

ಮೋದಿ ಕೂಡ ತಿರುಗೇಟು

ರಾಹುಲ್‌ ಗಾಂಧಿ ‘ಶಕ್ತಿ’ ಹೇಳಿಕೆಗೆ ಪ್ರಧಾನಿ ನರೇಂದ್ರ ಮೋದಿ ಕೂಡ ತಿರುಗೇಟು ನೀಡಿದ್ದಾರೆ. ತೆಲಂಗಾಣದ ಜಾಗ್ತಿಯಾಲ್‌ನಲ್ಲಿ ನಡೆದ ಬೃಹತ್‌ ಸಮಾವೇಶದಲ್ಲಿ ಮಾತನಾಡಿದ್ದ ಮೋದಿ, ರಾಹುಲ್‌ ಗಾಂಧಿ ಹೆಸರು ಪ್ರಸ್ತಾಪಿಸದೆಯೇ ಟಾಂಗ್‌ ನೀಡಿದ್ದರು. “ಇಂಡಿಯಾ ಒಕ್ಕೂಟವು ‘ಶಕ್ತಿ’ ವಿರುದ್ಧ ಹೋರಾಟ ನಡೆಸುತ್ತೇವೆ ಎಂಬುದಾಗಿ ಹೇಳಿದ್ದಾರೆ. ನನ್ನ ಪ್ರಕಾರ ಎಂದರೆ ಎಲ್ಲ ಮಾತೆಯರು ಕೂಡ ಶಕ್ತಿಯ ಸ್ವರೂಪವೇ ಆಗಿದ್ದಾರೆ. ಆ ಎಲ್ಲ ಮಾತೆಯರನ್ನು ಶಕ್ತಿ ಎಂಬುದಾಗಿಯೇ ಭಾವಿಸಿ ನಾನು ಪ್ರಾರ್ಥಿಸುತ್ತೇನೆ. ನಾನು ಭಾರತಮಾತೆಯನ್ನು ಆರಾಧಿಸುತ್ತೇನೆ. ಆ ಮಾತೆಯೂ ಶಕ್ತಿಯ ರೂಪವೇ ಆಗಿದ್ದಾಳೆ. ಇಂತಹ ಶಕ್ತಿಯನ್ನು ನಿರ್ಮೂಲನೆ ಮಾಡಲು ಹೋರಾಡುತ್ತೇವೆ ಎಂದಿರುವ ಇಂಡಿಯಾ ಒಕ್ಕೂಟದ ಸವಾಲನ್ನು ನಾನು ಸ್ವೀಕರಿಸುತ್ತೇನೆ” ಎಂದು ಮೋದಿ ಹೇಳಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version