ನವದೆಹಲಿ: ಜು.18ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆ (President Election 2022) ಗಾಗಿ ಬಿಜೆಪಿ ಈಗಾಗಲೇ ಸಿದ್ಧತೆ ಪ್ರಾರಂಭಿಸಿದ್ದು, ಇಂದು (ಶುಕ್ರವಾರ) ಚುನಾವಣಾ ನಿರ್ವಹಣಾ ತಂಡವನ್ನು ರಚಿಸಿದೆ. ಈ ಟೀಮ್‌ನಲ್ಲಿ ಬಿಜೆಪಿಯ ಹಿರಿಯ ನಾಯಕರು, ಕೇಂದ್ರ ಸಚಿವರು ಸೇರಿ ಒಟ್ಟು 14 ಮಂದಿ ಇದ್ದಾರೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಧಿಕಾರ ಅವಧಿ ಜುಲೈ ತಿಂಗಳಲ್ಲಿ ಮುಕ್ತಾಯವಾಗಿದ್ದು, ಅದರೊಳಗೆ ಚುನಾವಣೆ ನಡೆಯಲಿದೆ. ಈ ಸಲ ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟ ಯಾವ ಅಭ್ಯರ್ಥಿಯನ್ನು ರಾಷ್ಟ್ರಪತಿ ಹುದ್ದೆಗೆ ಆಯ್ಕೆ ಮಾಡಬಹುದು ಎಂಬ ಕುತೂಹಲ ಎದ್ದಿದೆ. ಇನ್ನೊಂದೆಡೆ ಪ್ರತಿಪಕ್ಷಗಳೂ ಕೂಡ ತಮ್ಮ ಅಭ್ಯರ್ಥಿಯನ್ನು ನಿಲ್ಲಿಸಲು ಪ್ರಯತ್ನ ಜಾರಿಯಲ್ಲಿಟ್ಟಿವೆ.
ರಾಷ್ಟ್ರಪತಿ ಚುನಾವಣೆ ಉಳಿದ ವಿಧಾನಸಭೆ, ಲೋಕಸಭೆ ಚುನಾವಣೆಯಂತೆ ಅಲ್ಲ. ಇಲ್ಲಿ ಮತಹಾಕುವವರು, ಈಗಾಗಲೇ ಜನರಿಂದ ಆಯ್ಕೆಯಾಗಿ ಹೋದ ಜನಪ್ರತಿನಿಧಿಗಳು. ರಾಷ್ಟ್ರಪತಿ ಚುನಾವಣೆಗೆ ಕೂಡ ಪೂರ್ವಸಿದ್ಧತೆಗಳು ಸಾಕಷ್ಟಿರುತ್ತವೆ. ಈ ಜವಾಬ್ದಾರಿಗಳನ್ನು ನಿಭಾಯಿಸುವ ಸಲುವಾಗಿ ಬಿಜೆಪಿ ಇದೀಗ ನಿರ್ವಹಣಾ ತಂಡವನ್ನು ರಚಿಸಿದ್ದು, ಅದರಲ್ಲಿ ಕೇಂದ್ರ ಸಚಿವರಾದ ಗಜೇಂದ್ರ ಸಿಂಗ್ ಶೇಖಾವತ್, ಜಿ. ಕಿಶನ್ ರೆಡ್ಡಿ, ಅಶ್ವಿನಿ ವೈಷ್ಣವ್, ಸರ್ಬಾನಂದ ಸೋನೋವಾಲ್, ಅರ್ಜುನ್ ರಾಮ್ ಮೇಘ್ವಾಲ್ ಮತ್ತು ಭಾರತಿ ಪವಾರ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ವೀನೋದ್ ತಾವಡೆ, ಸಿಟಿ ರವಿ, ತರುಣ್ ಛುಗ್, ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರಾ, ಹಿರಿಯ ನಾಯಕರಾದ ಡಿ.ಕೆ.ಅರುಣಾ, ರಿತುರಾಜ್ ಸಿನ್ಹಾ, ವಾನತಿ ಶ್ರೀನಿವಾಸನ್ ಮತ್ತು ರಾಜದೀಪ್ ರಾಯ್ ಇದ್ದಾರೆ.
ರಾಷ್ಟ್ರಪತಿ ಚುನಾವಣೆಯನ್ನು ಒಗ್ಗಟ್ಟಾಗಿ ಎದುರಿಸಲು ಒಟ್ಟು 17 ವಿರೋಧ ಪಕ್ಷಗಳು ಒಟ್ಟಾಗಿವೆ. ಚುನಾವಣಾ ಕಾರ್ಯತಂತ್ರ ರೂಪಿಸಲು ಕೆಲವೇ ದಿನಗಳ ಹಿಂದೆ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ಪ್ರತಿಪಕ್ಷಗಳ ಸಭೆ ನಡೆದಿತ್ತು. ಹಾಗೇ, ಜೂ.21ಕ್ಕೆ ಮತ್ತೊಂದು ಸಭೆ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ನೇತೃತ್ವದಲ್ಲಿ ನಡೆಯಲಿದೆ. ಇದರಲ್ಲಿ ಕೂಡ 17 ಪಕ್ಷಗಳ ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ರಾಷ್ಟ್ರಪತಿ ಹುದ್ದೆಗೆ ಪ್ರತಿಪಕ್ಷಗಳಿಂದ ಫಾರೂಖ್ ಅಬ್ದುಲ್ಲಾ ಹೆಸರು ಪ್ರಸ್ತಾಪಕ್ಕೆ ನೆಟ್ಟಿಗರು ಕಿಡಿ