ನವದೆಹಲಿ: ಲೋಕಸಭೆ ಚುನಾವಣೆಯನ್ನು (Lok Sabha Election 2024) ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಜೆಪಿಯು (BJP) ಇನ್ನಿಲ್ಲದ ರಣತಂತ್ರ ರೂಪಿಸುತ್ತಿದೆ. ಕೆಲವೇ ತಿಂಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದ್ದು, ಹ್ಯಾಟ್ರಿಕ್ ಸಾಧಿಸಲು ಶತಪ್ರಯತ್ನ ಮಾಡುತ್ತಿದೆ. ಇದಕ್ಕೆ ನಿದರ್ಶನ ಎಂಬಂತೆ, ಉತ್ತರ ಪ್ರದೇಶ (Uttar Pradesh) ಸೇರಿ ಐದು ರಾಜ್ಯಗಳಲ್ಲಿ ಲೋಕಸಭೆ ಚುನಾವಣೆಯ ಅಭ್ಯರ್ಥಿಗಳನ್ನು (BJP Candidates) ಆಯ್ಕೆ ಮಾಡಲು ಸಾಲು ಸಾಲು ಸಭೆ ನಡೆಸುತ್ತಿದೆ. ಗೆಲ್ಲುವ ಅಭ್ಯರ್ಥಿಗಳಿಗಾಗಿ ಸಭೆಯಲ್ಲಿ ತೀವ್ರ ಚರ್ಚೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಸೇರಿ ಹಲವು ನಾಯಕರು ಶನಿವಾರ ಮಹತ್ವದ ಸಭೆ ನಡೆಸಿದ್ದಾರೆ. ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ತೆಲಂಗಾಣ, ರಾಜಸ್ಥಾನ ಹಾಗೂ ಛತ್ತೀಸ್‌ಗಢದಲ್ಲಿ ಅಭ್ಯರ್ಥಿಗಳ ಆಯ್ಕೆಯ ದಿಸೆಯಲ್ಲಿ ಮಹತ್ವದ ಸಭೆ ನಡೆದಿದೆ ಎಂದು ತಿಳಿದುಬಂದಿದೆ. ಸಾಲು ಸಾಲು ಸಭೆಯ ಹಿನ್ನೆಲೆಯಲ್ಲಿ ರಾಜಸ್ಥಾನ, ಛತ್ತೀಸ್‌ಗಢದ ಮುಖ್ಯಮಂತ್ರಿಗಳು ದೆಹಲಿಯಲ್ಲೇ ಬೀಡುಬಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.
100 ಅಭ್ಯರ್ಥಿಗಳ ಪಟ್ಟಿ ರೆಡಿ
ಬಿಜೆಪಿ ಕೇಂದ್ರೀಯ ಚುನಾವಣೆ ಸಮಿತಿ ಸಭೆಯು ಫೆಬ್ರವರಿ 29ರಂದು ಸಭೆ ನಡೆಸಲಿದ್ದು, ಅದೇ ದಿನ 100 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಿದೆ ಎಂಬುದಾಗಿ ಪಕ್ಷದ ಮೂಲಗಳು ತಿಳಿಸಿವೆ. ಐದು ರಾಜ್ಯಗಳ 100 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ. ಈಗಾಗಲೇ 100 ಅಭ್ಯರ್ಥಿಗಳ ಪಟ್ಟಿ ಸಿದ್ಧವಾಗಿದ್ದು, ಫೆಬ್ರವರಿ 29ರಂದು ಪ್ರಕಟ ಮಾಡಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೆಸರುಗಳು ಕೂಡ ಪಟ್ಟಿಯಲ್ಲಿ ಇರಲಿವೆ. ಆದರೆ, ಯಾವ ಕ್ಷೇತ್ರ ಎಂಬುದರ ಕುರಿತು ಹೆಚ್ಚಿನ ಮಾಹಿತಿ ಇಲ್ಲ ಎಂದು ಹೇಳಲಾಗುತ್ತಿದೆ. ನರೇಂದ್ರ ಮೋದಿ ಅವರು ವಾರಾಣಸಿ, ಅಮಿತ್ ಶಾ ಅವರು ಗಾಂಧಿನಗರದಿಂದಲೇ ಸ್ಪರ್ಧಿಸಲಿದ್ದಾರೆ ಎನ್ನಲಾಗಿದೆ.
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಈಗಾಗಲೇ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಿಗೆ ಮುಂದಿನ 100 ದಿನಗಳಲ್ಲಿ ಏನೇನು ಮಾಡಬೇಕು ಎಂಬುದರ ಕುರಿತು ಟಾಸ್ಕ್ ನೀಡಿದ್ದಾರೆ. ಅದರಲ್ಲೂ, ಬಿಜೆಪಿ ಕಾರ್ಯಕರ್ತರು ಪ್ರತಿಯೊಂದು ಮನೆಗೆ ತೆರಳಬೇಕು. ಕೇಂದ್ರ ಸರ್ಕಾರ ಜಾರಿಗೆ ತಂದ ಯೋಜನೆಗಳ ಕುರಿತು ಜನರಿಗೆ ಮಾಹಿತಿ ನೀಡಬೇಕು. ಈ ಬಾರಿ ಬಿಜೆಪಿಯು 370 ಹಾಗೂ ಎನ್‌ಡಿಎ 400ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲ್ಲಬೇಕು. ಅದಕ್ಕೆ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಅವಿರತವಾಗಿ ಶ್ರಮಿಸಬೇಕು ಎಂಬುದಾಗಿ ನರೇಂದ್ರ ಮೋದಿ ಸೂಚಿಸಿದ್ದಾರೆ.
ಇದನ್ನೂ ಓದಿ: Lok Sabha Election: ಮಾರ್ಚ್ 13ರ ಬಳಿಕ ಲೋಕಸಭಾ ಚುನಾವಣೆ ದಿನಾಂಕ ಘೋಷಣೆ ಸಾಧ್ಯತೆ
ಮಾರ್ಚ್ 13ರ ನಂತರವೇ ಲೋಕಸಭೆ ಚುನಾವಣೆ ದಿನಾಂಕ ಘೋಷಣೆಯಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಕೇಂದ್ರ ಚುನಾವಣಾ ಸಮಿತಿಯ ಅಧಿಕಾರಿಗಳು ಪ್ರಸ್ತುತ ಚುನಾವಣಾ ಸಿದ್ಧತೆಯನ್ನು ಪರಿಶೀಲಿಸಲು ವಿವಿಧ ರಾಜ್ಯಗಳಿಗೆ ಭೇಟಿ ನೀಡುತ್ತಿದ್ದಾರೆ. ಪ್ರಸ್ತುತ ಅವರು ತಮಿಳುನಾಡಿನಲ್ಲಿದ್ದು, ನಂತರ ಅವರು ಉತ್ತರ ಪ್ರದೇಶ ಮತ್ತು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಲಿದ್ದಾರೆ. ವಿವಿಧ ರಾಜ್ಯಗಳ ಭೇಟಿಯನ್ನು ಮಾರ್ಚ್ 13ರೊಳಗೇ ಮುಗಿಸಲು ಚುನಾವಣಾ ಆಯೋಗವು ನಿರ್ಧರಿಸಿದೆ. ಹೀಗಾಗಿ, ಆಯೋಗವು ಚುನಾವಣೆ ದಿನಾಂಕಗಳನ್ನು ಮಾರ್ಚ್ 13 ಅಥವಾ ಆ ನಂತರ ಪ್ರಕಟಿಸುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ಹೇಳಲಾಗುತ್ತಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ