ನವದೆಹಲಿ: ಭಾರತದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ರಾಹುಲ್ ಗಾಂಧಿ ಒಂದೊಮ್ಮೆ ಅವರು ಕ್ಷಮೆ ಕೇಳದಿದ್ದರೆ, ಅವರನ್ನು ಲೋಕಸಭೆಯಿಂದಲೇ ಅಮಾನತುಗೊಳಿಸುವ ಪ್ರಯತ್ನಕ್ಕೆ ಭಾರತೀಯ ಜನತಾ ಪಾರ್ಟಿ(BJP) ಮುಂದಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಆಡಳಿತ ಪಕ್ಷವು ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರನ್ನು ಸಂಪರ್ಕಿಸಿದ್ದು, ರಾಹುಲ್ ಗಾಂಧಿಯನ್ನು ಅಮಾನತುಗೊಳಿಸುವ ಸಾಧ್ಯತೆಯನ್ನು ಅನ್ವೇಷಿಸಲು ವಿಶೇಷ ಸಮಿತಿಯನ್ನು ರಚಿಸಲು ಕೋರಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ರಾಹುಲ್ ಗಾಂಧಿ ಅವರ ಈ ಸಮಸ್ಯೆಯನ್ನು ಬಿಜೆಪಿಯು ಗಂಭೀರವಾಗಿ ಪರಿಗಣಿಸಿದೆ. ಇದು ಹಕ್ಕು ಬಾದ್ಯತೆಯ ವ್ಯಾಪ್ತಿಗೆ ಒಳಪಡುವುದಿಲ್ಲ. ಹಾಗಾಗಿ, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕೆಂದು ನಾವು ಕೋರುತ್ತಿದ್ದೇವೆ ಎಂಬ ಬಿಜೆಪಿಯ ಹಿರಿಯ ನಾಯಕರೊಬ್ಬರ ಹೇಳಿಕೆಯನ್ನು ಉಲ್ಲೇಖಿಸಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
2005ರಲ್ಲಿ ಪ್ರಶ್ನೆಗಾಗಿ ಹಣ ಹಗರಣಕ್ಕೆ ಸಂಬಂಧಿಸಿದಂತೆ ವಿಶೇಷ ಸಮಿತಿಯನ್ನು ರಚಿಸಲಾಗಿತ್ತು. ಕಾಂಗ್ರೆಸ್ ಸಂಸದ ಪವನ್ ಕುಮಾರ್ ಬನ್ಸಲ್ ನೇತೃತ್ವದ ಈ ಸಮಿತಿ, ಹಗರಣದ ಆರೋಪ ಹೊತ್ತ 10 ಲೋಕಸಭಾ ಸದಸ್ಯರ ವಿರುದ್ಧ ತನಿಖೆ ಮಾಡಿತ್ತು. ಬಳಿಕ, ಸಂಸದರಾಗಿ ಅವರನ್ನು ಮುಂದುವರಿಸುವುದು ಅಸಮರ್ಥನೀಯ ಎಂದು ಹೇಳಿತ್ತು. ಪರಿಣಾಮ ಅವರನ್ನು ಅಮಾನತು ಮಾಡಲಾಯಿತು ಎಂಬ ವಿಷಯವನ್ನು ಬಿಜೆಪಿ ಸ್ಪೀಕರ್ ಗಮನಕ್ಕೆ ತಂದಿದೆ. ಲೋಕಸಭೆಯಲ್ಲಿ ಬಿಜೆಪಿ ಪ್ರಚಂಡ ಬಹುಮತ ಪಡೆದುಕೊಂಡಿರುವುದರಿಂದ, ಸಮಿತಿಯಲ್ಲಿ ಸಹಜವಾಗಿಯೇ ಬಿಜೆಪಿಗೆ ಮೇಲುಗೈ ಸಿಗಲಿದೆ.
ಇದನ್ನೂ ಓದಿ: Rahul Gandhi: ಲೋಕಸಭೆ ಸ್ಪೀಕರ್ ಓಂ ಬಿರ್ಲಾರನ್ನು ಭೇಟಿಯಾಗಿ ಮನವಿಯೊಂದನ್ನು ಮಾಡಿದ ರಾಹುಲ್ ಗಾಂಧಿ; ಏನದು?
ರಾಹುಲ್ ಗಾಂಧಿ ಅವರ ಹೇಳಿಕೆಯು ಎಲ್ಲ ಸಂಸದರ ಸವಲತ್ತು ಹಕ್ಕುಗಳನ್ನು ಮೀರಿದ್ದಾಗಿದೆ. ಹಾಗಾಗಿ, ಬಿಜೆಪಿಯು ಲಭ್ಯವಿರುವ ಎಲ್ಲ ಸಾಧನಗಳು, ನಿಯಮಗಳು ಮತ್ತು ಸಂಪ್ರದಾಯಗಳನ್ನು ಬಳಸಿಕೊಂಡು, ಸಮಸ್ಯೆಯನ್ನು ಬಗೆಹರಿಸಲು ಮುಂದಾಗಲಿದೆ ಎಂದು ಗುರುವಾರ ಕೇಂದ್ರ ಕಾನೂನು ಸಚಿವ ಕಿರೆನ್ ರಿಜಿಜು ಹೇಳಿದ್ದರು.