ನವದೆಹಲಿ/ವಾಷಿಂಗ್ಟನ್: ಅತಿ ಹೆಚ್ಚು ಸದಸ್ಯರನ್ನು ಹೊಂದಿರುವ ದೃಷ್ಟಿಯಿಂದ ಬಿಜೆಪಿ ಬೃಹತ್ ಪಕ್ಷವಾಗಿದೆ. ಆದರೀಗ, ಬಿಜೆಪಿಯು ಜಗತ್ತಿನಲ್ಲಿಯೇ ಪ್ರಮುಖ ಪಕ್ಷ (BJP Important Party) ಎಂಬ ಖ್ಯಾತಿಗೂ ಭಾಜನವಾಗಿದೆ. ಅಮೆರಿಕದ ಖ್ಯಾತ ಪತ್ರಿಕೆ ವಾಲ್ ಸ್ಟ್ರೀಟ್ ಜರ್ನಲ್‌ನಲ್ಲಿ “ಬಿಜೆಪಿಯು ಜಗತ್ತಿನಲ್ಲೇ ಪ್ರಮುಖ ಪಕ್ಷವಾಗಿದೆ” ಎಂದು ಉಲ್ಲೇಖಿಸಲಾಗಿದೆ. ಬಿಜೆಪಿ ಕುರಿತು ವಾಲ್ಟರ್ ರಸೆಲ್ ಮೀಡ್ (Walter Russell Mead) ಅವರು ಲೇಖನ ಬರೆದಿದ್ದು, ಭಾರತೀಯ ಜನತಾ ಪಕ್ಷದ ಕುರಿತು ಹಲವು ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ.
“ಬಿಜೆಪಿ ಪ್ರಮುಖ ಪಕ್ಷ. ಏಕೆಂದರೆ, ಅದು 2014ರಲ್ಲಿ ಗೆಲುವು ಸಾಧಿಸಿ, ಅಧಿಕಾರಕ್ಕೆ ಬಂದಿದೆ. 2019ರಲ್ಲೂ ಸತತ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದಿದೆ. ಈಗ ಮೂರನೇ ಬಾರಿಯೂ 2024ರಲ್ಲಿ ಗೆಲುವು ಸಾಧಿಸುವತ್ತ ಮುನ್ನುಗ್ಗುತ್ತಿದೆ. ಜಪಾನ್ ಜತೆ ಭಾರತವು ಜಗತ್ತಿನ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುತ್ತಿದೆ. ಇಂಡೋ-ಪೆಸಿಫಿಕ್‌ನಲ್ಲೂ ಪ್ರಬಲವಾಗಿದೆ. ಇದರ ಹಿಂದಿನ ಶಕ್ತಿ ಬಿಜೆಪಿಯೇ ಆಗಿದೆ” ಎಂದು ಮೀಡ್ ಬರೆದಿದ್ದಾರೆ.
ವಿದೇಶಿ ಪಕ್ಷಗಳ ಜತೆ ಬಿಜೆಪಿಯ ಹೋಲಿಕೆ
ವಾಲ್ಟರ್ ಅವರು ಬಿಜೆಪಿಯನ್ನು ಜಗತ್ತಿನ ಹಲವು ಪಕ್ಷಗಳ ಜತೆ ಹೋಲಿಕೆ ಮಾಡಿದ್ದಾರೆ. ಚೀನಾದ ಕಮ್ಯುನಿಸ್ಟ್ ಪಕ್ಷದಂತೆ ಬಿಜೆಪಿಯೂ ಜಾಗತಿಕ ಸೂಪರ್ ಪವರ್ ರಾಷ್ಟ್ರವಾಗಿ ಭಾರತ ಹೊರಹೊಮ್ಮಬೇಕು ಎಂಬ ಆಶಯದೊಂದಿಗೆ ಮುನ್ನುಗ್ಗುತ್ತಿದೆ. ಇಸ್ರೇಲ್‌ನ ಲಿಕುಡ್ ಪಕ್ಷದಂತೆ ಬಿಜೆಪಿಯೂ ಸಾಂಸ್ಕೃತಿಕ ಹಾಗೂ ಸಾಮಾಜಿಕ ಮೌಲ್ಯಗಳೊಂದಿಗೆ ದೇವು ಮಾರುಕಟ್ಟೆಯಲ್ಲಿ ಆರ್ಥಿಕವಾಗಿ ಪ್ರಬಲನಾಗಲು ಬಯಸುತ್ತಿದೆ. ಹಾಗೆಯೇ, ರಾಜಕೀಯ ಹಾಗೂ ಸಾಮಾಜಿಕ ನೆಲೆಗಟ್ಟಿನಲ್ಲಿ ಏಳಿಗೆ ಹೊಂದುವ ಜತೆಗೆ ಪಾಶ್ಚಿಮಾತ್ಯ ಸಂಸ್ಕೃತಿಯನ್ನು ತಿರಸ್ಕರಿಸುತ್ತದೆ. ಆಧುನಿಕತೆಗೂ ಬಿಜೆಪಿ ಸಂಸ್ಕೃತಿ ಹಾಗೂ ಹಿಂದುತ್ವದ ಅಂಶಗಳನ್ನು ಅಳವಡಿಸಿಕೊಂಡಿದೆ ಎಂದು ಲೇಖನದಲ್ಲಿ ಉಲ್ಲೇಖಿಸಲಾಗಿದೆ.
ಮೋದಿ ಕುರಿತೂ ಪ್ರಸ್ತಾಪ
ಬಿಜೆಪಿ ಏಳಿಗೆ ಹಿಂದಿರುವ ಪ್ರಧಾನಿ ನರೇಂದ್ರ ಮೋದಿ ಕುರಿತು ಕೂಡ ಪ್ರಸ್ತಾಪಿಸಲಾಗಿದೆ. ಭಾರತದಲ್ಲಿ ಎಡಪಂಥೀಯವಾದವನ್ನು ತಿರಸ್ಕರಿಸಿದರೂ, ಮೋದಿ ಅವರ ಭಾರತವು ಡೆನ್ಮಾರ್ಕ್‌ನಂತೆ ಆಗಿಲ್ಲ. ನರೇಂದ್ರ ಮೋದಿ ಆಡಳಿತದಲ್ಲಿ ಅಲ್ಪಸಂಖ್ಯಾತರ ದಮನವಾಗುತ್ತಿದೆ, ಸಾಮೂಹಿಕ ಹತ್ಯೆಗಳು ನಡೆಯುತ್ತಿವೆ ಎಂಬ ಆರೋಪಗಳಿವೆ. ಆರ್‌ಎಸ್‌ಎಸ್ ಹಾಗೂ ಬಿಜೆಪಿಯು ಅಧಿಕಾರದಲ್ಲಿರುವುದು ತುಂಬ ಜನರಿಗೆ ಭಯ ಹುಟ್ಟಿಸಿದೆ. ಆದರೆ, ಕ್ರಿಶ್ಚಿಯನ್ನರೇ ಜಾಸ್ತಿ ಇರುವ ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿಯು ಜನರ ಭರವಸೆ ಗಳಿಸಿದೆ. 20 ಕೋಟಿಗೂ ಅಧಿಕ ಜನರಿರುವ ಉತ್ತರ ಪ್ರದೇಶದಲ್ಲಿಯೇ ಶಿಯಾ ಮುಸ್ಲಿಮರ ಬೆಂಬಲವನ್ನು ಬಿಜೆಪಿ ಗಳಿಸಿದೆ. ಜಾತಿ ತಾರತಮ್ಯವನ್ನು ಹೋಗಲಾಡಿಸುವಲ್ಲಿ ಆರ್‌ಎಸ್‌ಎಸ್ ಪ್ರಮುಖ ಪಾತ್ರ ನಿರ್ವಹಿಸುತ್ತಿದೆ ಎಂದು ವಾಲ್ಟರ್ ಅಭಿಪ್ರಾಯಪಟ್ಟಿದ್ದಾರೆ.
ಯೋಗಿ, ಮೋಹನ್ ಭಾಗವತ್ ಬಗ್ಗೆ ಉಲ್ಲೇಖ
ನಾನು ಭಾರತಕ್ಕೆ ಭೇಟಿ ನೀಡಿದಾಗ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿಯಾದೆ. ಅವರು ಸನ್ಯಾಸಿಯಾಗಿದ್ದು, ಮೂಲಭೂತವಾದದ ಭಾಷಣದ ಬಗ್ಗೆ ಟೀಕೆಗೊಳಗಾಗಿದ್ದಾರೆ. ಆದರೆ, ಇವರನ್ನು ಮೋದಿ ಉತ್ತರಾಧಿಕಾರಿ ಎಂದೇ ಹೇಳಲಾಗುತ್ತಿದೆ. ಯೋಗಿ ಅವರು ನನ್ನ ಜತೆ ಮಾತನಾಡುವಾಗ, ಹೂಡಿಕೆ, ಅಭಿವೃದ್ಧಿ ಬಗ್ಗೆ ಪ್ರಸ್ತಾಪಿಸಿದರು. ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರೂ ಇದೇ ರೀತಿಯ ಅಭಿಪ್ರಾಯ ಹೊಂದಿದ್ದಾರೆ ಎಂಬುದಾಗಿ ಹೇಳಿದ್ದಾರೆ.
ಇದನ್ನೂ ಓದಿ: Karnataka Election: ಬಿಜೆಪಿಗೆ ಚಿಂಚನಸೂರ್ ಶಾಕ್, ಕೋಲಿ ಸಮಾಜದ ಮತಗಳು ಕಾಂಗ್ರೆಸ್‌ಗೆ?