Site icon Vistara News

ಬಿಜೆಪಿಗೆ ರಿಸಲ್ಟ್ ಎರಡು ದಿನ ಮೊದ್ಲೇ ಗೊತ್ತಿತ್ತು! ಕಾಂಗ್ರೆಸ್ ಹೊಸ ವರಾತ್

Ram Lalla Idol doesnt look like child ram Says Digvijay Singh

ಭೋಪಾಲ್: ಬಿಜೆಪಿ (Bhartiya Janata Party) ಗೆದ್ದಾಗಲೆಲ್ಲ ಪ್ರತಿಪಕ್ಷಗಳು (Opposition Parties) ವಿದ್ಯುನ್ಮಾನ ಮತಯಂತ್ರಗಳನ್ನು ಹ್ಯಾಕ್ (EVM Hack) ಮಾಡಲಾಗಿದೆ ಎಂದು ಆರೋಪ ಮಾಡುತ್ತಿದ್ದವು. ಈಗ ಕಾಂಗ್ರೆಸ್ ಪಕ್ಷ (Congress Party) ಹೊಸ ಪ್ರಲಾಪವನ್ನು ಆರಂಭಿಸಿದೆ. ಮಧ್ಯ ಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ (Congress Leader Digvijaya Singh) ಅವರು ಎಕ್ಸ್ ವೇದಿಕೆಯಲ್ಲಿ ಪೋಸ್ಟ್ ಮಾಡಿ, ಭಾರತೀಯ ಜನತಾ ಪಾರ್ಟಿಗೆ ಚುನಾವಣಾ ಫಲಿತಾಂಶವು (Election Result 2023) ಎರಡು ದಿನಗಳ ಮುಂಚಿತವಾಗಿಯೇ ಗೊತ್ತಿತ್ತು ಎಂದು ಹೇಳಿದ್ದಾರೆ. ಆ ಮೂಲಕ ಬಿಜೆಪಿ ಚುನಾವಣಾ ಅಕ್ರಮ ನಡೆಸಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ದಿಗ್ವಿಜಯ್ ಸಿಂಗ್ ಅವರು ಫೇಸ್‌ಬುಕ್ ಪೋಸ್ಟ್ ಮತ್ತು ಭಾರತೀಯ ಚುನಾವಣಾ ಆಯೋಗದ ಫಲಿತಾಂಶ ಪುಟದ ಎರಡು ಸ್ಕ್ರೀನ್ ಶಾಟ್ ಷೇರ್ ಮಾಡಿಕೊಂಡಿದ್ದಾರೆ. ಅಲ್ಲದೇ, ”ಈ ಎರಡು ಚಿತ್ರಗಳನ್ನು ಹತ್ತಿರದಿಂದ ನೋಡಿ. ಖಚ್ರೋಡ್ ಅಸೆಂಬ್ಲಿ ಕ್ಷೇತ್ರದಲ್ಲಿ ಪ್ರತಿ ಅಭ್ಯರ್ಥಿ ಎಷ್ಟು ಮತಗಳನ್ನು ಪಡೆದರು ಮತ್ತು ಮತಗಳ ಅಂತರ ಎಷ್ಟು ಎಂಬುದನ್ನು ಬಿಜೆಪಿ ಕಾರ್ಯಕರ್ತರು ಬರೆದಿದ್ದಾರೆ. ಮುಖ್ಯವಾಗಿ, ಈ ಪೋಸ್ಟ್ ಅನ್ನು ಎಣಿಕೆಗೆ ಎರಡು ದಿನಗಳ ಮೊದಲು ಅಂದರೆ ಡಿಸೆಂಬರ್ 1ರಂದು ಮಾಡಲಾಗಿದೆ. ಈಗ ಇದನ್ನು ಫಲಿತಾಂಶಗಳೊಂದಿಗೆ ತುಲನೆ ಮಾಡಿ” ಎಂದು ಬರೆದುಕೊಂಡಿದ್ದಾರೆ.

ಮಧ್ಯಪ್ರದೇಶದ ನಾಗಡ-ಖಚ್ರೋಡ್ ಕ್ಷೇತ್ರದಲ್ಲಿ ಬಿಜೆಪಿಯ ಅಭ್ಯರ್ಥಿ ಡಾ. ತೇಜ್‌ಬಹದ್ದೂರ್ ಸಿಂಗ್ ಚೌಹಾಣ್ ಅವರು ಕಾಂಗ್ರೆಸ್‌ ಅಭ್ಯರ್ಥಿ ದಿಲಿಪ್ ಸಿಂಗ್ ಗುರ್ಜರ್ ಅವರನ್ನು 15,927 ಮತಗಳ ಅಂತರದಿಂದ ಸೋಲಿಸಿದ್ದಾರೆ.

ದಿಗ್ವಿಜಯ್ ಸಿಂಗ್ ಅವರು ಉಲ್ಲೇಖಿಸಿರುವ ಫೇಸ್‌ಬುಕ್ ಪೋಸ್ಟ್ ಅನಿಲ್ ಚಚ್ಚೇದ್ ಅವರ ಪ್ರೊಫೈಲ್‌ನಿಂದ ತೆಗೆದುಕೊಳ್ಳಲಾಗಿದೆ. ಈ ಪ್ರೊಫೈಲ್‌ನಲ್ಲಿ ಅವರು ಡಿಜಿಟಲ್ ಕ್ರಿಯೇಟರ್ ಎಂದು ಪರಿಚಯಿಸಿಕೊಂಡಿದ್ದಾರೆ. ಈ ಪ್ರೊಫೈಲ್‌ನಲ್ಲಿ ಚುನಾವಣಾ ಗೆದ್ದಿರುವ ಬಿಜೆಪಿ ಅಭ್ಯರ್ಥಿ ಮತ್ತು ಪಕ್ಷದ ಅನೇಕ ರ್ಯಾಲಿಗಳ ಫೋಟೋಗಳನ್ನು ಕಾಣಬಹುದು. ಬಿಜೆಪಿಯನ್ನು ಬೆಂಬಲಿಸುವ ಸಾಕಷ್ಟು ಪೋಸ್ಟ್‌ಗಳಿವೆ.

ಡಿಸೆಂಬರ್ 1ರಂದು ಮಾಡಲಾಗಿರುವ ಪೋಸ್ಟ್‌ನಲ್ಲಿ ಚಚ್ಚೇದ್ ಅವರು ನಾಗಡ-ಖಚ್ರೋಡ್ ಕ್ಷೇತ್ರದಲ್ಲಿ ಒಟ್ಟು 1,78,364 ಚಲಾವಣೆಯಾಗಿದ್ದು, ಬಿಜೆಪಿ ಅಭ್ಯರ್ಥಿ 93,000 ಮತಗಳನ್ನು ಪಡೆದುಕೊಂಡರೆ, ಕಾಂಗ್ರೆಸ್ ಅಭ್ಯರ್ಥಿ 77,000 ಮತಗಳನ್ನು ಪಡೆದಿದ್ದಾರೆ ಎಂದು ಪೋಸ್ಟ್‌ನಲ್ಲಿ ಬರೆಯಲಾಗಿದೆ. ಡಿಸೆಂಬರ್ 3ರಂದು ಪ್ರಕಟವಾದ ಫಲಿತಾಂಶದ ಪ್ರಕಾರ, ಬಿಜೆಪಿ ಅಭ್ಯರ್ಥಿ 93,552 ಮತ್ತು ಕಾಂಗ್ರೆಸ್ ಅಭ್ಯರ್ಥಿ 77,625 ಮತಗಳನ್ನು ಪಡೆದುಕೊಂಡಿದ್ದರು. ಡಿಸೆಂಬರ್ 1ರ ಪೋಸ್ಟ್‌ನಲ್ಲಿ ತಿಳಿಸಲಾದ ಮತಗಳು ಮತ್ತು ಫಲಿತಾಂಶದ ವೇಳೆ ಗೊತ್ತಾದ ಮತಗಳು ಆಲ್ಮೋಸ್ಟ್ ಒಂದೇ ತೆರನಾಗಿವೆ. ಈ ಪೋಸ್ಟ್ ಆಧಾರವಾಗಿಟ್ಟುಕೊಂಡು ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಅವರು ಬಿಜೆಪಿ ನಾಯಕರಿಗೆ ಮೊದಲೇ ಫಲಿತಾಂಶ ಗೊತ್ತಿತ್ತು ಎಂದು ಆರೋಪಿಸಿದ್ದಾರೆ.

ದಿಗ್ವಿಜಯ್ ಸಿಂಗ್ ಅವರು ಆರೋಪಿಕ್ಕೆ ತಿರುಗೇಟು ನೀಡಿರುವ ಬಿಜೆಪಿ ನಾಯಕ, ಶಾಸಕ ರಾಮೇಶ್ವರ್ ಶರ್ಮಾ ಅವರು, ದಿಗ್ವಿಜಯ್ ಸಿಂಗ್ ಅವರು ಯಾರನ್ನೂ ನಂಬಲ್ಲ. ಇವಿಎಂ ಮೇಲೂ ನಂಬಿಕೆ ಇಲ್ಲ. ಸ್ವತಃ ಅವರಿಗೆ ಅವರ ಮೇಲೆಯೇ ನಂಬಿಕೆ ಇಲ್ಲ ಎಂದು ಲೇವಡಿ ಮಾಡಿದ್ದಾರೆ. ಹಾಗೆಯೇ, ಪೋಸ್ಟ್ ಮಾಡಿರುವ ಅನಿಲ್ ಚಚ್ಚೇದ್ ಅವರು ಪಕ್ಷದ ಪದಾಧಿಕಾರಿಯೇ ಅಥವಾ ಅಲ್ಲವೇ ಎಂಬುದನ್ನು ಭಾರತೀಯ ಜನತಾ ಪಾರ್ಟಿಯು ಖಚಿತಪಡಿಸಿಲ್ಲ.

ಛತ್ತೀಸ್‌ಗಢ, ಮಧ್ಯ ಪ್ರದೇಶ ಹಾಗೂ ರಾಜಸ್ಥಾನ ಚುನಾವಣೆಗಳಲ್ಲಿ ಭಾರತೀಯ ಜನತಾ ಪಾರ್ಟಿಯು ಗೆದ್ದ ಮಾರನೇ ದಿನವೇ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಅವರು ಮತ್ತೆ ವಿದ್ಯುನ್ಮಾನ ಮತ ಯಂತ್ರಗಳ ವಿಶ್ವಾಸಾರ್ಹತಯೆ ಬಗ್ಗೆ ಪ್ರಶ್ನೆ ಮಾಡಿದ್ದಾರೆ.

ಚಿಪ್‌ನೊಂದಿಗೆ ಇರುವ ಯಾವುದೇ ಯಂತ್ರವನ್ನು ಹ್ಯಾಕ್ ಮಾಡಬಹುದು. ನಾನು 2003ರಿಂದಲೂ ವಿದ್ಯುನ್ಮಾನ ಮತಯಂತ್ರಗಳನ್ನು ವಿರೋಧಿಸುತ್ತಲೇ ಬಂದಿದ್ದೇನೆ. ವೃತ್ತಿಪರ ಹ್ಯಾಕರ್ಸ್‌ಗಳಿಗೆ ನಮ್ಮ ಪ್ರಜಾಪ್ರಭುತ್ವದ ನಿಯಂತ್ರಣ ಮಾಡಲು ಬಿಟ್ಟುಕೊಡಬೇಕೇ; ಎಲ್ಲ ಪಾರ್ಟಿಗಳು ಕೇಳಿಕೊಳ್ಳಬೇಕಾದ ಮೂಲಭೂತ ಪ್ರಶ್ನೆಯಾಗಿದೆ. ಗೌರವಾನ್ವಿತ ಕೇಂದ್ರ ಚುನಾವಣಾ ಆಯೋಗ ಹಾಗೂ ಸುಪ್ರೀಂ ಕೋರ್ಟ್ ನಮ್ಮ ಭಾರತೀಯ ಪ್ರಜಾಪ್ರಭುತ್ವವನ್ನು ರಕ್ಷಣೆ ಮಾಡುತ್ತೀರಾ? ಎಂದು ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಅವರು ಎಕ್ಸ್ ವೇದಿಕೆಯಲ್ಲಿ ಮತ್ತೊಂದು ಪೋಸ್ಟ್ ಮಾಡಿದ್ದಾರೆ.

ಈ ಸುದ್ದಿಯನ್ನೂ ಓದಿ: Mizoram Election Results: ಎಂಎನ್‌ಎಫ್‌ಗೆ ಭಾರೀ ಸೋಲು, ಮಿಜೋರಾಂನಲ್ಲಿ ಇನ್ನು ಜೆಡ್‌ಪಿಎಂ ಆಡಳಿತ

Exit mobile version