ಡೆಹ್ರಾಡೂನ್: ಉತ್ತರಾಖಂಡ ಬಿಜೆಪಿ ನಾಯಕನ ಪುತ್ರಿಯು ಮುಸ್ಲಿಂ ಯುವಕನ ಜತೆ ಮದುವೆಯಾಗುವ ಕುರಿತ ಮದುವೆ ಆಮಂತ್ರಣ ಪತ್ರಿಕೆಯು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ, ಭಾರಿ ಟೀಕೆಗಳು ವ್ಯಕ್ತವಾದ ಬೆನ್ನಲ್ಲೇ ಬಿಜೆಪಿ ನಾಯಕ ತಮ್ಮ ಮಗಳ ಮದುವೆಯನ್ನೇ ರದ್ದುಗೊಳಿಸಿದ್ದಾರೆ. ಉತ್ತರಾಖಂಡದ ಪೌರಿ ಗರ್ವಾಲ್ ಮುಖಂಡ ಯಶಪಾಲ್ ಬೇನಮ್ ಅವರು ತಮ್ಮ ಪುತ್ರಿಯ ಮದುವೆಯನ್ನೇ ರದ್ದುಗೊಳಿಸಿದ್ದಾರೆ.
ಕೆಲ ದಿನಗಳಿಂದ ಮುಸ್ಲಿಂ ಯುವಕನ ಜತೆ ಬಿಜೆಪಿ ನಾಯಕನ ಪುತ್ರಿ ಮದುವೆಯಾಗುತ್ತಾರೆ ಎಂಬ ವಿಷಯವು ಜನಾಕ್ರೋಶಕ್ಕೆ ಕಾರಣವಾಗಿತ್ತು. ಇದು ಲವ್ ಜಿಹಾದ್ ಎಂದು ಕೆಲವರು ಆರೋಪಿಸಿದರೆ, ಇದು ಕೂಡ ದಿ ಕೇರಳ ಸಿನಿಮಾ ಸ್ಟೋರಿಯ ರೀತಿಯೇ ಆಗುತ್ತದೆ ಇನ್ನೂ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದರು. ಇದರಿಂದಾಗಿ, ಎರಡೂ ಕುಟುಂಬಗಳ ಸಮ್ಮತಿಯ ಮೇರೆಗೆ ಮೇ 28ರಂದು ನಡೆಯಬೇಕಿದ್ದ ಮದುವೆಯನ್ನು ರದ್ದುಗೊಳಿಸಲಾಗಿದೆ ಎಂದು ಯಶಪಾಲ್ ಅವರು ಮಾಹಿತಿ ನೀಡಿದ್ದಾರೆ.
“ನಾನು ಸಾರ್ವಜನಿಕರ ಭಾವನೆಗಳಿಗೆ ಗೌರವ ಕೊಡುತ್ತೇನೆ. ಹಾಗಾಗಿ, ಮೇ 28ರಂದು ನಡೆಯಬೇಕಿದ್ದ ಮದುವೆಯನ್ನು ರದ್ದುಗೊಳಿಸಲಾಗಿದೆ. ಒಬ್ಬ ಸಾರ್ವಜನಿಕ ವ್ಯಕ್ತಿಯಾಗಿ, ನನ್ನ ಪುತ್ರಿಯ ಮದುವೆಯನ್ನು ಪೊಲೀಸರ ಭದ್ರತೆಯಲ್ಲಿ ಮಾಡಲು ಇಷ್ಟವಿಲ್ಲ. ಎರಡೂ ಕುಟುಂಬಸ್ಥರು ಮಾತನಾಡಿ, ಒಮ್ಮತದಿಂದ ಮದುವೆಯನ್ನು ರದ್ದುಗೊಳಿಸಲಾಗಿದೆ” ಎಂದು ಮಾಜಿ ಶಾಸಕರೂ ಆದ ಯಶಪಾಲ್ ಬೇನಮ್ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಬಿಜೆಪಿ ಮುಖಂಡನ ಪುತ್ರಿಗೆ ಮುಸ್ಲಿಂ ಯುವಕನೊಟ್ಟಿಗೆ ಮದುವೆ; ಆಮಂತ್ರಣ ಪತ್ರಿಕೆ ನೋಡಿದ ಜನ ಕೆಂಡಾಮಂಡಲ
“ನನ್ನ ಪುತ್ರಿಯು ಮುಸ್ಲಿಂ ಯುವಕನನ್ನು ಮದುವೆಯಾಗಲು ತೀರ್ಮಾನಿಸಿದ್ದಳು. ಇಬ್ಬರ ಖುಷಿ, ಸಂತಸ, ಮಕ್ಕಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಎರಡೂ ಕುಟುಂಬಸ್ಥರು ಇಬ್ಬರ ಮದುವೆ ಮಾಡಲು ನಿಶ್ಚಯಿಸಿದ್ದೆವು. ಹಾಗಾಗಿ, ಮದುವೆ ಆಮಂತ್ರಣ ಪತ್ರಿಕೆಗಳನ್ನು ಮುದ್ರಿಸಲಾಗಿತ್ತು. ಆದರೆ, ಮದುವೆ ಆಮಂತ್ರಣ ಪತ್ರಿಕೆ ವೈರಲ್ ಆಗುತ್ತಲೇ ಜನರಿಂದ ಆಕ್ಷೇಪಗಳು ಕೇಳಿಬಂದವು. ಮದುವೆಯ ವಿಷಯವೇ ವಿವಾದಕ್ಕೆ ಕಾರಣವಾಯಿತು. ಹಾಗಾಗಿ, ಮದುವೆಯನ್ನೇ ರದ್ದುಗೊಳಿಸಲಾಯಿತು” ಎಂದು ವಿವರಿಸಿದ್ದಾರೆ.