ಬಿಜೆಪಿ ಮುಖಂಡನೊಬ್ಬನ (BJP Leader) ಪುತ್ರಿ ಮುಸ್ಲಿಂ ಹುಡುಗನನ್ನು ಮದುವೆಯಾಗಲು ಸಜ್ಜಾಗುತ್ತಿದ್ದು, ಇವರಿಬ್ಬರ ವಿವಾಹದ ಆಮಂತ್ರಣ ಪತ್ರಿಕೆ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ನೆಟ್ಟಿಗರಂತೂ ಆಮಂತ್ರಣ ಪತ್ರಿಕೆ ನೋಡಿ ಕೆಂಡಾಮಂಡಲರಾಗಿದ್ದಾರೆ. ಇದು ಉತ್ತರಾಖಂಡ್ನಲ್ಲಿ ಬೆಳಕಿಗೆ ಬಂದ ಪ್ರಕರಣ. ಉತ್ತರಾಖಂಡ್ನ ಪೌರಿಯ ಬಿಜೆಪಿ ನಾಯಕ ಯಶ್ಪಾಲ್ ಬೇನಮ್ ಅವರ ಪುತ್ರಿಯೀಗ ಮುಸ್ಲಿಂ ಯುವಕನ ಜತೆ ದಾಂಪತ್ಯ ಜೀವನಕ್ಕೆ ಕಾಲಿಡಲು ಮುಂದಾಗಿದ್ದು, ಇದನ್ನು ಬಿಜೆಪಿಯ ವಿರೋಧಿಗಳಷ್ಟೇ ಅಲ್ಲ, ಬೆಂಬಲಿಗರೂ ಒಪ್ಪುತ್ತಿಲ್ಲ. ಬಿಜೆಪಿ ನಾಯಕ ಯಶ್ಪಾಲ್ ಬೇನಮ್ ಮತ್ತು ಅವರ ಪುತ್ರಿ ಇಬ್ಬರನ್ನೂ ಟೀಕಿಸುತ್ತಿದ್ದಾರೆ.
ಮುಸ್ಲಿಮರ ಜತೆ ಪ್ರೀತಿ/ಮದುವೆ, ಲವ್ ಜಿಹಾದ್ ಇತ್ಯಾದಿಗಳನ್ನು ಕಟುವಾಗಿ ವಿರೋಧಿಸುವ ಪಕ್ಷ ಬಿಜೆಪಿ. ಹಿಂದುತ್ವ ಎಂದರೇ ಬಿಜೆಪಿ ಎಂಬ ಸನ್ನಿವೇಶವನ್ನು ಸೃಷ್ಟಿಸಿದೆ. ದೇಶದಲ್ಲಿ ಅದೆಷ್ಟೊ ಜನರು ಈ ಕಾರಣಕ್ಕೇ ಕಮಲಕ್ಕೆ ಮತ ಹಾಕುತ್ತಿದ್ದಾರೆ. ಹೀಗೆಲ್ಲ ಇರುವಾಗ ಬಿಜೆಪಿ ಮಾಜಿ ಎಂಎಲ್ಎ, ಮುಖಂಡನೊಬ್ಬನ ಪುತ್ರಿಯೇ ಮುಸ್ಲಿಂ ಯುವಕನ ಜತೆ ಮದುವೆಯಾಗಲು ಹೊರಟಿರುವುದು ಬಿಜೆಪಿ ಬೆಂಬಲಿಗರನ್ನೇ ಕೆರಳಿಸಿದೆ. ಇತ್ತೀಚೆಗೆ ಬಿಡುಗಡೆಯಾದ ದಿ ಕೇರಳ ಸ್ಟೋರಿ ಸಿನಿಮಾವನ್ನು ಪ್ರಸ್ತಾಪಿಸಿ, ಬಿಜೆಪಿ ನಾಯಕನಿಗೆ ಛೀಮಾರಿ ಹಾಕುತ್ತಿದ್ದಾರೆ. ಅಷ್ಟೇ ಅಲ್ಲ, ಇಡೀ ಪಕ್ಷಕ್ಕೇ ಬೈಯುತ್ತಿದ್ದಾರೆ. ಬಿಜೆಪಿಯದ್ದು ಇಬ್ಬಂದಿತನ ಎಂದು ವ್ಯಂಗ್ಯ ಮಾಡಿದ್ದಾರೆ.
‘ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲೆಲ್ಲ ದಿ ಕೇರಳ ಸ್ಟೋರಿ ಸಿನಿಮಾವನ್ನು ವಿಜೃಂಭಿಸುತ್ತಿದ್ದಾರೆ. ತೆರಿಗೆ ಮುಕ್ತ ಮಾಡುತ್ತಿದ್ದಾರೆ. ಆದರೆ ಇಲ್ಲಿ ಬಿಜೆಪಿ ನಾಯಕನ ಮಗಳು ಮುಸ್ಲಿಂ ಯುವಕನನ್ನು ಮದುವೆಯಾಗುತ್ತಿದ್ದಾಳೆ. ಹೀಗೆ ಮಾಡುವ ಬಿಜೆಪಿಯ ಇಬ್ಬಗೆ ನೀತಿಯಿಂದಲೇ ಕಾರ್ಯಕರ್ತರು ಹತಾಶರಾಗುತ್ತಾರೆ’ ಎಂದು ಫೇಸ್ಬುಕ್ ಬಳಕೆದಾರರು ಒಬ್ಬರು ಬರೆದಿದ್ದಾರೆ.
ಇನ್ನು ಈ ಬಗ್ಗೆ ಮಾತನಾಡಿದ ಪೌರಿ ದೇಗುಲ ಸಮಿತಿ ಅಧಿಕಾರಿಯೊಬ್ಬರು ‘ಇದು ನಿಜಕ್ಕೂ ಕಳವಳಕಾರಿ ವಿಷಯ. ಭಾರತದಲ್ಲಿ ಮತಾಂತರ ಕಾನೂನನ್ನು ಬದಲಿಸಲಾಗಿದೆ. ಒಂದೆಡೆ ಇತರ ಧರ್ಮಗಳ ಜನರು ಕಟ್ಟಿರುವ ಗೋರಿಗಳನ್ನು ಕೇಂದ್ರ ಸರ್ಕಾರ ಕೆಡವುತ್ತಿದ್ದರೆ, ಇನ್ನೊಂದೆಡೆ ಬಿಜೆಪಿ ನಾಯಕರು ತಮ್ಮ ಹೆಣ್ಣು ಮಕ್ಕಳನ್ನು ಮುಸ್ಲಿಮರಿಗೆ ಮದುವೆ ಮಾಡಿ ಕೊಡುತ್ತಿದ್ದಾರೆ’ ಎಂದು ಟೀಕಿಸಿದ್ದಾರೆ. ‘ಬಿಜೆಪಿ ಮುಖಂಡನ ಮಗಳು ಮುಸ್ಲಿಮನೊಂದಿಗೆ ಮದುವೆಯಾಗುತ್ತಿರುವುದನ್ನು ವಿಶ್ವ ಹಿಂದು ಪರಿಷತ್ ಮತ್ತು ಬಜರಂಗದಳಗಳು ವಿರೋಧಿಸಬೇಕು. ಪಕ್ಷ ಆ ನಾಯಕನನ್ನು ಕೂಡಲೇ ಉಚ್ಚಾಟನೆ ಮಾಡಬೇಕು’ ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: Supreme Court: ಮುಸ್ಲಿಮ್ ಸಮುದಾಯದ ಶೇ.4 ಮೀಸಲು ರದ್ದು ಪ್ರಶ್ನಿಸಿದ್ದ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ಅಸ್ತು
ಯಶ್ಪಾಲ್ ಬೇನಮ್ ಕುಟುಂಬಕ್ಕೆ ಆಪ್ತರಾದ ಕೆಲವು ಹೆಸರು ಹೇಳಲು ಇಚ್ಛಿಸದೆ ಒಂದಷ್ಟು ಮಾಹಿತಿಯನ್ನು ನೀಡಿದ್ದಾರೆ. ‘ಯಶ್ಪಾಲ್ ಬೇನಮ್ ಅವರ ಪುತ್ರಿ ಓದಿದ್ದೆಲ್ಲ ಲಖನೌದಲ್ಲಿ. ಆಗಿನಿಂದಲೇ ಅವಳು ಮುಸ್ಲಿಂ ವ್ಯಕ್ತಿಯೊಬ್ಬನೊಂದಿಗೆ ಸಂಬಂಧ ಇಟ್ಟುಕೊಂಡಿದ್ದಳು. ಅವನನ್ನೇ ಈಗ ಮದುವೆಯಾಗುತ್ತಿದ್ದಾಳೆ. ಮೇ 28ರಂದು ಪೌರಿಯಲ್ಲಿ ವಿವಾಹ ನಡೆಯಲಿದೆ’ ಎಂದು ತಿಳಿಸಿದ್ದಾರೆ. ಅಂದಹಾಗೇ, ಈ ಬೇನಾಮ್ ಅವರು ಪೌರಿ ಮುನ್ಸಿಪಲ್ ಕಾರ್ಪೋರೇಶನ್ನ ಅಧ್ಯಕ್ಷ. ಈ ಮೊದಲು ಕಾಂಗ್ರೆಸ್ನಲ್ಲಿ ಇದ್ದರು, ಬಳಿಕ ಪೌರಿಯಿಂದ ಸ್ವತಂತ್ರ್ಯವಾಗಿ ಸ್ಪರ್ಧಿಸಿ ಗೆದ್ದಿದ್ದರು. ನಂತರ ಬಿಜೆಪಿ ಸೇರ್ಪಡೆಯಾಗಿದ್ದಾರೆ. ತಮ್ಮ ಮಗಳ ಮದುವೆಗೆ ಅವರು ಬಿಜೆಪಿ ಮತ್ತು ಕಾಂಗ್ರೆಸ್ನ ಹಲವು ಗಣ್ಯರನ್ನು ಆಹ್ವಾನಿಸಿದ್ದಾರೆ ಎನ್ನಲಾಗಿದೆ.