Site icon Vistara News

Nitin Gadkari : ಕಾಂಗ್ರೆಸ್‌ನ ನಾಯಕನ ಜತೆ ವೇದಿಕೆ ಹಂಚಿಕೊಂಡು ಹೊಗಳಿದ ಬಿಜೆಪಿ ನಾಯಕ ಗಡ್ಕರಿ!

Nitin Gadkari

ಪುಣೆ, ಮಹಾರಾಷ್ಟ್ರ: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ (Central Minister Nitin Gadkari) ಅವರು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ (Digvijay Singh) ಅವರೊಂದಿಗೆ ವೇದಿಕೆ ಹಂಚಿಕೊಂಡ ಘಟನೆ ನಡೆದಿದೆ. ಕಾಂಗ್ರೆಸ್ (Congress Party) ಪಕ್ಷದ ಹಿರಿಯ ನಾಯಕರಾಗಿದ್ದ ರಾಮಕೃಷ್ಣ ಮೋರೆ ಅವರ ಕುರಿತಾದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಉಭಯ ನಾಯಕರು ವೇದಿಕೆ ಹಂಚಿಕೊಂಡಿದ್ದರು. ಈ ಕಾರ್ಯಕ್ರಮವನ್ನು ಪುಣೆಯ ಪಿಂಪ್ರಿ ಚಿಂಚವಾಡ ಸಮೀಪ ಆಯೋಜಿಸಲಾಗಿತ್ತು.

ಈ ವೇಳ ಮಾತನಾಡಿದ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು, ಆಶಾಢ ಏಕಾದಶಿಯಂದು ಪ್ರತಿ ವರ್ಷ ದಿಗ್ವಿಜಯ ಸಿಂಗ್ ಅವರು ಪಂಢರಪುರಕ್ಕೆ ಭೇಟಿ ನೀಡುತ್ತಾರೆ ಎಂದು ಹೇಳಿದರು. ಅಷ್ಟು ದೂರದಿಂದ ದಿಗ್ವಿಜಯ್ ಸಿಂಗ್ ಅವರು ಪಾದಯಾತ್ರೆ ಮೂಲಕ ಪಂಢರಪುರಕ್ಕೆ ಆಗಮಿಸುತ್ತಾರೆ. ನಾನು ಯುವಕನಾಗಿದ್ದರೂ ಆ ಧೈರ್ಯವನ್ನು ಮಾಡುತ್ತಿರಲಿಲ್ಲ. ಇದಕ್ಕಾಗಿ ನಾನು ನಿಮಗೆ ಅಭಿನಂದಿಸುತ್ತೇನೆ ಎಂದು ಗಡ್ಕರಿ ಅವರು ಹೇಳಿದರು.

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರ ಮೆಚ್ಚುಗೆಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಅವರು, ಗಡ್ಕರಿ ಅವರು ಈ ಪಾದಯಾತ್ರೆಯನ್ನು ಆರಂಭಿಸಬೇಕು. ಒಮ್ಮೆ ಆರಂಭಿಸಿದ ಮೇಲೆ ಅದು ಸಾಮಾನ್ಯವಾಗಿ ಬಿಡುತ್ತದೆ ಎಂದು ಹೇಳಿದರು.

ಇದೇ ವೇಳೆ ಮಾತನಾಡಿದ ನಿತಿನ್ ಗಡ್ಕರಿ ಅವರು ಮಹಾರಾಷ್ಟ್ರದ ರಾಜಕಾರಣದಲ್ಲಿನ ಸ್ನೇಹಮಯ ರಾಜಕೀಯ ಸಂಸ್ಕೃತಿಯನ್ನು ಶ್ಲಾಘಿಸಿದರು. ರಾಜ್ಯದಲ್ಲಿ ಪಕ್ಷಗಳ ಮಧ್ಯೆ ಭಿನ್ನಾಭಿಪ್ರಾಯಗಳು ಇರಬಹುದೇ ಹೊರತು ರಾಜಕಾರಣಿಗಳ ನಡುವೆ ಯಾವುದೇ ಕಹಿ ಭಾವನೆ ಇರುವುದಿಲ್ಲ ಎಂದು ಅಭಿಪ್ರಾಯಪಟ್ಟರು. ರಾಜಕೀಯ ವ್ಯಕ್ತಿಗಳ ನಡುವೆ ಭಿನ್ನಾಭಿಪ್ರಾಯಗಳು ಇರಬಹುದೇ ಹೊರತು ಕಹಿ ಸಂಬಂಧಗಳು ಇರುವುದಿಲ್ಲ. ಈ ರೀತಿಯ ಉತ್ತಮ ರಾಜಕೀಯ ಸಂಸ್ಕೃತಿಗೆ ಮಹಾರಾಷ್ಟ್ರ ಅತ್ಯುತ್ತಮ ಉದಾಹರಣೆಯಾಗಿದೆ ಎಂದು ಗಡ್ಕರಿ ಅವರು ಹೇಳಿದರು.

ಈ ಸುದ್ದಿಯನ್ನೂ ಓದಿ: Nitin Gadkari: ಬಾವಿಗೆ ಬೇಕಾದರೂ ಬೀಳುವೆ, ಕಾಂಗ್ರೆಸ್‌ ಸೇರಲ್ಲ! ಪಕ್ಷಕ್ಕೆ ಬನ್ನಿ ಎಂದವರಿಗೆ ನಿತಿನ್ ಗಡ್ಕರಿ ಖಡಕ್ ಉತ್ತರ

ಉಭಯ ನಾಯಕರು ಈ ಹಿಂದೆ ಪರಸ್ಪರ ಕಚ್ಚಾಡಿಕೊಂಡಿದ್ದರು. ನಿತಿನ್ ಗಡ್ಕರಿ ಅವರಂತೂ ದಿಗ್ವಿಜಯ್ ಸಿಂಗ್ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಆದರೆ, ದಿಗ್ವಿಜಯ್ ಸಿಂಗ್ ಅವರು ತಮ್ಮ ಹೇಳಿಕೆಗೆ ವಿಷಾಧ ವ್ಯಕ್ತಪಡಿಸಿ ಪತ್ರ ಬರೆದ ಹಿನ್ನೆಲೆಯಲ್ಲಿ ಮಾನನಷ್ಟ ಪ್ರಕರಣವನ್ನು ವಾಪಸ್ ಪಡೆದುಕೊಂಡಿದ್ದರು. ದಿಲ್ಲಿಯ ಪಟಿಯಾಲ ಹೌಸ್‌ ಕೋರ್ಟ್‌ನಲ್ಲಿ ಕೇಸ್ ದಾಖಲಿಸಿದ್ದರು. ಕಲ್ಲಿದ್ದಲು ಬ್ಲಾಕ್‌ಗಳ ಹಂಚಿಕೆಯ ವೇಳೆ ಅವ್ಯಾಹಾರ ನಡೆದಿದೆ ಆರೋಪಿಸಿದ್ದ ದಿಗ್ವಿಜಯ್ ಸಿಂಗ್ ಅವರು, ಈ ಕುರಿತು ನಿತಿನ್ ಗಡ್ಕರಿ ವಿರುದ್ದ ಆರೋಪ ಮಾಡಿದ್ದರು.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version