ಬೆಂಗಳೂರು: ‘ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು’ ಎಂಬ ಮಾತಿದೆ. ಈ ಮಾತಿಗೆ ನಿದರ್ಶನ ಎಂಬಂತೆ, ‘ಮೋದಿ ಎಂಬ ಉಪನಾಮ ಉಳ್ಳವರೆಲ್ಲ ಕಳ್ಳರು’ ಎಂದು ಮಾತನಾಡುವ ಮೂಲಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi Disqualified) ಅವರು ಈಗ ಎರಡು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ. ಅಲ್ಲದೆ, ಅವರು ಲೋಕಸಭೆ ಸದಸ್ಯತ್ವವನ್ನು ಕಳೆದುಕೊಂಡಿದ್ದಾರೆ. ಹೀಗೆ, ರಾಹುಲ್ ಗಾಂಧಿ ಅವರು ಸಂಸತ್‌ನಿಂದ ಅನರ್ಹರಾಗುವುದರಿಂದ ಹಿಂದೆ ಗುಜರಾತ್ ಬಿಜೆಪಿ ಶಾಸಕ ಪೂರ್ಣೇಶ್ ಮೋದಿ ಅವರಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ, ಕರ್ನಾಟಕ ಬಿಜೆಪಿ ನಾಯಕರೊಬ್ಬರು ಕೂಡ ರಾಹುಲ್ ಗಾಂಧಿ ಅನರ್ಹತೆಯ ಹಿಂದಿದ್ದಾರೆ ಎಂಬುದು ವಿಶೇಷವಾಗಿದೆ. ಆ ಬಿಜೆಪಿ ನಾಯಕರ ಹೆಸರು ಪಿ.ಎಂ.ರಘುನಾಥ್.
ಹೌದು, ರಾಹುಲ್ ಗಾಂಧಿ ವಿರುದ್ಧ ಮಾನಹಾನಿ ಪ್ರಕರಣ ದಾಖಲಾಗಿ, ಅವರು ದೋಷಿ ಎಂಬುದಾಗಿ ತೀರ್ಪು ಬರುವುದರ ಹಿಂದೆ ಇವರ ಪಾತ್ರವೂ ಇದೆ. ಕೋಲಾರದ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದ ವೇಳೆ ರಾಹುಲ್ ಗಾಂಧಿ ಅವರು, “ನೀರವ್ ಮೋದಿ, ಲಲಿತ್ ಮೋದಿ ಹಾಗೂ ನರೇಂದ್ರ ಮೋದಿ ಸರ್‌ನೇಮ್ ಒಂದೇ ಆಗಿದೆ. ಅದ್ಹೇಗೆ, ಮೋದಿ ಉಪನಾಮ ಇರುವವರೆಲ್ಲರೂ ಕಳ್ಳರಾಗಿರುತ್ತಾರೆ” ಎಂದಿದ್ದರು.
ಈ ಭಾಷಣ ಕೇಳಿದ ಕೋಲಾರ ಬಿಜೆಪಿ ನಾಯಕ ಪಿ.ಎಂ.ರಘುನಾಥ್ ಅವರು ಗುಜರಾತ್ ಬಿಜೆಪಿ ಶಾಸಕ ಪೂರ್ಣೇಶ್ ಮೋದಿ ಅವರಿಗೆ ಕರೆ ಮಾಡಿ ಈ ಕುರಿತು ಮಾಹಿತಿ ನೀಡಿದ್ದರು. ಇದಾದ ಬಳಿಕವೇ ಪೂರ್ಣೇಶ್ ಮೋದಿ ಅವರು ರಾಹುಲ್ ಗಾಂಧಿ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಿದರು ಎಂದು ತಿಳಿದುಬಂದಿದೆ. ಅಲ್ಲದೆ, ರಾಹುಲ್ ಗಾಂಧಿ ಭಾಷಣದ ಕುರಿತು ಮಾಧ್ಯಮಗಳ ವರದಿ, ವಿಡಿಯೊಗಳನ್ನು ರಘುನಾಥ್ ಅವರು ಪೂರ್ಣೇಶ್ ಮೋದಿ ಅವರಿಗೆ ಕಳುಹಿಸಿದ್ದರು. ಆ ಮೂಲಕ ರಾಹುಲ್ ಭಾಷಣವನ್ನು ಗುಜರಾತ್‌ವರೆಗೆ ತಲುಪಿಸಿದ್ದರು.
ಸೂರತ್‌ಗೆ ತೆರಳಿ ಸಾಕ್ಷಿ ಹೇಳಿದ್ದ ರಘುನಾಥ್
ಪೂರ್ಣೇಶ್ ಮೋದಿ ಅವರು ಮಾನಹಾನಿ ಪ್ರಕರಣ ದಾಖಲಿಸಿದ ಬಳಿಕ ನ್ಯಾಯಾಲಯವು ಪ್ರಕರಣದ ಕುರಿತು ವಿಚಾರಣೆ ಆರಂಭಿಸಿತು. ಇದೇ ವೇಳೆ, ಗುಜರಾತ್‌ನ ಸೂರತ್ ನ್ಯಾಯಾಲಯಕ್ಕೆ ತೆರಳಿದ್ದ ಪಿ.ಎಂ. ರಘುನಾಥ್, ನ್ಯಾಯಾಲಯಕ್ಕೂ ರಾಹುಲ್ ಗಾಂಧಿ ಭಾಷಣದ ವಿಡಿಯೊ, ಮಾಧ್ಯಮಗಳ ವರದಿ ಸಲ್ಲಿಸಿದ್ದರು. ಇದೆಲ್ಲವನ್ನು ಪರಿಗಣಿಸಿದ ನ್ಯಾಯಾಲಯವು ರಾಹುಲ್ ಗಾಂಧಿ ಅವರಿಗೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಯಾರಿದು ಪಿ.ಎಂ.ರಘುನಾಥ್?
ಪಿ.ಎಂ.ರಘುನಾಥ್ ಅವರು ಆರ್‌ಎಸ್‌ಎಸ್ ಕಾರ್ಯಕರ್ತರಾಗಿದ್ದು, ಸದ್ಯ ಬಿಜೆಪಿ ರಾಷ್ಟ್ರೀಯ ಸಮಿತಿ ಸದಸ್ಯರಾಗಿದ್ದಾರೆ. ಇವರು ಕರ್ನಾಟಕ ಬಿಜೆಪಿ ಒಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ, ಕೋಲಾರ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಇವರು ಬಿಜೆಪಿಯಿಂದ ಕೆಲವು ಬಾರಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ.
ಇದನ್ನೂ ಓದಿ: Rahul Gandhi Disqualified: ರಾಹುಲ್ ಗಾಂಧಿ ರೀತಿ ಮತ್ಯಾವ ನಾಯಕರು ಅನರ್ಹ?