Site icon Vistara News

Ratan Dubey: ಛತ್ತೀಸ್‌ಗಢದಲ್ಲಿ ಮತದಾನಕ್ಕೆ 3 ದಿನ ಮೊದಲೇ ಬಿಜೆಪಿ ನಾಯಕನ ಹತ್ಯೆ!

Ratan Dubey

BJP Leader Ratan Dubey Killed By Maoists Just 3 Days Before Chhattisgarh Assembly Elections

ರಾಯ್‌ಪುರ: ಛತ್ತೀಸ್‌ಗಢ ವಿಧಾನಸಭೆ ಚುನಾವಣೆಗೆ (Chhattisgarh Assembly Election) ಮೂರು ದಿನ ಬಾಕಿ ಇದೆ. ಕಾಂಗ್ರೆಸ್‌ ಬಿಜೆಪಿ ಸೇರಿ ಎಲ್ಲ ಪಕ್ಷಗಳು ಇನ್ನಿಲ್ಲದ ಪ್ರಚಾರ ನಡೆಸುತ್ತಿವೆ. ನವೆಂಬರ್‌ 7ರಂದು ಮೊದಲ ಹಂತದ ಮತದಾನ ಇರುವುದರಿಂದ ಪ್ರಚಾರದ ಭರಾಟೆ ಜೋರಾಗಿದೆ. ಇದರ ಬೆನ್ನಲ್ಲೇ ಮಾವೋವಾದಿಗಳು ಉಪಟಳ ಶುರುವಾಗಿದ್ದು, ಬಿಜೆಪಿ ನಾಯಕ ರತನ್‌ ದುಬೆ (Ratan Dubey) ಅವರನ್ನು ಹತ್ಯೆ ಮಾಡಿದ್ದಾರೆ. ಆ ಮೂಲಕ ಚುನಾವಣೆಗೆ ಮೊದಲೇ ಜನ ಹಾಗೂ ಜನಪ್ರತಿನಿಧಿಗಳಲ್ಲಿ ಆತಂಕ ಹುಟ್ಟಿಸುತ್ತಿದ್ದಾರೆ.

ಹೌದು, ನಾರಾಯಣಪುರ ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ರತನ್‌ ದುಬೆ ಅವರನ್ನು ಮಾವೋವಾದಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಕೌಶಾಲ್ನರ್‌ ಜಿಲ್ಲೆಯಲ್ಲಿ ರತನ್‌ ದುಬೆ ಅವರು ಚುನಾವಣೆ ಪ್ರಚಾರ ಕೈಗೊಳ್ಳುತ್ತಿರುವಾಗಲೇ ನಕ್ಸಲರು ಗುಂಡು ಹಾರಿಸಿ ಹತ್ಯೆಗೈದಿದ್ದಾರೆ. ಘಟನೆ ಕುರಿತು ವರದಿಯಾಗುತ್ತಲೇ ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ, ಪ್ರಕರಣವನ್ನು ತನಿಖೆಗೆ ಆದೇಶಿಸಲಾಗಿದೆ ಎಂದು ತಿಳಿದುಬಂದಿದೆ.

ಛತ್ತೀಸ್‌ಗಢದಲ್ಲಿ ಮಾವೋವಾದಿಗಳ ಉಪಟಳ ಜಾಸ್ತಿ ಇರುವ ಕಾರಣದಿಂದಾಗಿಯೇ ಎರಡು ಹಂತಗಳಲ್ಲಿ ಮತದಾನ ನಡೆಸಲು ಚುನಾವಣೆ ಆಯೋಗವು ತೀರ್ಮಾನಿಸಿದೆ. ಹಾಗಾಗಿಯೇ, ನವೆಂಬರ್‌ 7ರಂದು ಮೊದಲ ಹಂತದಲ್ಲಿ, ನವೆಂಬರ್‌ 17ರಂದು ಎರಡನೇ ಹಂತದ ಮತದಾನ ನಡೆಯಲಿದೆ. ಹೀಗೆ ಶಾಂತಿಯುತವಾಗಿ ಚುನಾವಣೆ ನಡೆಸಲು ಕ್ರಮ ತೆಗೆದುಕೊಂಡಿದ್ದರೂ ನಕ್ಸಲರು ಉಪಟಳ ಆರಂಭಿಸಿದ್ದಾರೆ. ಜನ ಹಾಗೂ ರಾಜಕಾರಣಿಗಳಲ್ಲಿ ಆತಂಕ ಹುಟ್ಟಿಸಿ, ಶಾಂತಿಯುತವಾಗಿ ಮತದಾನ ನಡೆಯದಂತೆ ಮಾಡುವುದು ಅವರ ಉದ್ದೇಶ ಎಂದು ಮೂಲಗಳು ತಿಳಿಸಿವೆ. ಆದಾಗ್ಯೂ, ಚುನಾವಣೆ ಹಿನ್ನೆಲೆಯಲ್ಲಿ ಛತ್ತೀಸ್‌ಗಢದಲ್ಲಿ ಹೆಚ್ಚಿನ ಭದ್ರತೆ ಒದಗಿಸಲಾಗಿದೆ.

ಇದನ್ನೂ ಓದಿ: Terrorists Attack: ಕಾಶ್ಮೀರದಲ್ಲಿ ಉಗ್ರರ ದಾಳಿಗೆ ಪೊಲೀಸ್‌ ಪೇದೆ ಬಲಿ; 3 ದಿನದಲ್ಲಿ ಮೂವರ ಹತ್ಯೆ

ಛತ್ತೀಸ್‌ಗಢದಲ್ಲಿ ಕಾಂಗ್ರೆಸ್‌ ಸರ್ಕಾರವಿದ್ದು, ಭೂಪೇಶ್‌ ಬಘೇಲ್‌ ಅವರು ಮುಖ್ಯಮಂತ್ರಿಯಾಗಿದ್ದಾರೆ. ಶತಾಯಗತಾಯ ಕಾಂಗ್ರೆಸ್‌ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಲು ಯತ್ನಿಸುತ್ತಿರುವ ಬಿಜೆಪಿಯು ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸಿನ ಸದುಪಯೋಗ ಪಡೆಯಲು ಯತ್ನಿಸುತ್ತಿದೆ. ನರೇಂದ್ರ ಮೋದಿ ಅವರೂ ಸಾಲು ಸಾಲು ಚುನಾವಣೆ ರ‍್ಯಾಲಿಗಳ ಮೂಲಕ ಮತದಾರರ ಮನವೊಲಿಸಲು ಯತ್ನಿಸುತ್ತಿದ್ದಾರೆ. ಹೀಗೆ, ಚುನಾವಣೆಗೆ ಸಕಲ ಸಿದ್ಧತೆ ನಡೆಯುತ್ತಿರುವಾಗಲೇ ನಕ್ಸಲರು ದಾಳಿ ಮಾಡಿರುವುದು ಭೀತಿ ಹೆಚ್ಚಿಸಿದೆ.

Exit mobile version